ಪಾಕಿಸ್ತಾನ: 9 ಬೋಗಿಯ ರೈಲು ಹೈಜಾಕ್, ಒತ್ತೆಯಾಳಾದ 100ಕ್ಕೂ ಅಧಿಕ ಜನರು
ಕರಾಚಿ, ಮಾರ್ಚ್ 11: ಸುಮಾರು 400 ಪ್ರಯಾಣಿಕರಿದ್ದ ರೈಲನ್ನು ಪಾಕಿಸ್ತಾನದಲ್ಲಿ ಪ್ರತ್ಯೇಕತಾವಾದಿ ಉಗ್ರರು ಹೈಜಾಕ್ ಮಾಡಿದ್ದಾರೆ. ಉಗ್ರರು ರೈಲಿನ ಮೇಲೆ ಗುಂಡಿನ ದಾಳಿ ನಡೆಸಿ 9 ಬೋಗಿಯ ರೈಲನ್ನು ಹೈಜಾಕ್ ಮಾಡಿ ಪ್ರಯಾಣಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ರೈಲನ್ನು ಬಿಡಿಸುವ ಕಾರ್ಯಾಚರಣೆಯಲ್ಲಿ 6 ಯೋಧರು ಸಾವನ್ನಪ್ಪಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಪಾಕಿಸ್ತಾನದ ಸರ್ಕಾರ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜನೆ ಮಾಡಿದೆ.
ನೈಋತ್ಯ ಪಾಕಿಸ್ತಾನದಲ್ಲಿ ಈ ಘಟನೆ ನಡೆಸಿದೆ. ಬಲೂಚಿಸ್ತಾನ ಪ್ಯಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಂಖ್ತುಖ್ವಾದ ಪೇಶಾವರಕ್ಕೆ ರೈಲು ಸಂಚಾರವನ್ನು ನಡೆಸುತ್ತಿತ್ತು. ಬಲೂಚ್ ಲಿಬರೇಶನ್ ಆರ್ಮಿ ಎಂಬ ಉಗ್ರಗಾಮಿ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ. ಪ್ರಯಾಣಿಕರ ರಕ್ಷಣೆಗೆ ಬಂದ ಯೋಧರನ್ನು ಸಹ ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ.

ಬಲೂಚ್ ಲಿಬರೇಶನ್ ಆರ್ಮಿ ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ದೀರ್ಘಕಾಲದಿಂದ ಹೋರಾಡುತ್ತಿದೆ. ಇದೇ ಸಂಘಟನೆ ಪ್ರಾಯಾಣಿಕರ ರೈಲನ್ನು ಅಪಹರಣ ಮಾಡಿದೆ. ಬಂದೂಕುಗಳ ಜೊತೆ ಜಾಫರ್ ಎಕ್ಸ್‌ಪ್ರೆಸ್ ರೈಲಿಗೆ ಹತ್ತಿದ್ದ ಉಗ್ರರ ಗುಂಪು ರೈಲನ್ನು ಹೈಜಾಕ್ ಮಾಡಿ, ಪ್ರಯಾಣಿಕರನ್ನು ಒತ್ತೆಯಾಗಿ ಇರಿಸಿಕೊಂಡಿದೆ. ಮಹಿಳೆಯರು ಮತ್ತು ಮಕ್ಕಳನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದು ಅವರು ಮೊದಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆಯೇ ಪಾಕಿಸ್ತಾನ ಸರ್ಕಾರ ಭದ್ರತಾ ಪಡೆಗಳನ್ನು ಕಳಿಸಿದೆ. ಉಗ್ರರ ಜೊತೆ ಗುಂಡಿನ ಚಕಮಕಿಯಲ್ಲಿ 6 ಯೋಧರು ಸಾವನ್ನಪ್ಪಿದ್ದಾರೆ. ಎಷ್ಟು ಜನ ಪ್ರಯಾಣಿಕರು ಒತ್ತೆಯಾಳಾಗಿದ್ದಾರೆ? ಎಂದು ಖಚಿತವಾದ ಮಾಹಿತಿ ಸಿಕ್ಕಿಲ್ಲ.
ಎಲ್ಲರನ್ನೂ ಕೊಲ್ಲುತ್ತೇವೆ: ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಆರ್) ರೈಲು ಹೈಜಾಕ್ ಕುರಿತು ಪ್ರಕಟಣೆ ಬಿಡುಗಡೆ ಮಾಡಿದೆ. ನಮ್ಮ ವಿರುದ್ಧ ಪಾಕಿಸ್ತಾನ ಸೇನೆ ಕಾರ್ಯಾಚರಣೆ ಆರಂಭಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಹತ್ಯೆ ಮಾಡುತ್ತೇವೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ಕೊಟ್ಟಿದೆ. ಈ ಪ್ರಕಟಣೆ ಬಿಎಲ್ಆರ್ ವಕ್ತಾರ ಜಯೀದ್ ಬಲೂಚ್ ಸಹಿಯನ್ನು ಒಳಗೊಂಡಿದೆ.
"ಇದುವರೆಗೂ 6 ಯೋಧರನ್ನು ಹತ್ಯೆ ಮಾಡಲಾಗಿದೆ. 100ಕ್ಕೂ ಅಧಿಕ ಪ್ರಯಾಣಿಕರು ನಮ್ಮ ವಶದಲ್ಲಿದ್ದಾರೆ. ಯಾವುದೇ ಕಾರ್ಯಾಚರಣೆ ಆರಂಭಿಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಕೊಡಲಾಗುತ್ತದೆ ಈ ಹೈಜಾಕ್ ಕೃತ್ಯದ ಸಂಪೂರ್ಣ ಹೊಣೆಯನ್ನು ಬಿಎಲ್‌ಆರ್ ಹೊತ್ತುಕೊಳ್ಳಲಿದೆ" ಎಂದು ಪ್ರಕಟಣೆ ಹೇಳಿದೆ.
ಉಗ್ರರು ರೈಲು ನಿಲ್ಲಿಸಿಕೊಂಡಿರುವ ಬಲೂಚಿಸ್ತಾನದ ಪ್ರದೇಶವನ್ನು ಪಾಕಿಸ್ತಾನದ ಯೋಧರು ಸುತ್ತುವರೆದಿದ್ದಾರೆ. ಸರ್ಕಾರ ಈ ಪ್ರದೇಶದ ಸುತ್ತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಉಗ್ರರ ಜೊತೆ ಮಾತುಕತೆ ನಡೆಸುವ ಪ್ರಕ್ರಿಯೆಯನ್ನು ಸಹ ಆರಂಭಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಪ್ರತ್ಯೇಕಿಸಬೇಕೆಂದು ದಶಕಗಳ ಕಾಲದಿಂದ ಹೋರಾಟ ನಡೆಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ ಹಲವು ಶಸ್ತಾಸ್ತ್ರಗಳನ್ನು ಹೊಂದಿದ್ದು, ಬಲಾಢ್ಯವಾಗಿದೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅನಿಲ ಮತ್ತು ಖನಿಜ ನಿಕ್ಷೇಪಗಳಿವೆ. ಇದನ್ನು ಪಾಕಿಸ್ತಾನ ಅನ್ಯಾಯವಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.
ಪಾಕಿಸ್ತಾನದ ಅತಿ ದೊಡ್ಡ ಪ್ರಾಂತ್ಯ ಬಲೂಚಿಸ್ತಾನ. ಆದರೆ ಇಲ್ಲಿಯ ಜನಸಂಖ್ಯೆ ಕಡಿಮೆ ಇದೆ. ವಿಶ್ವದ ಅತಿ ದೊಡ್ಡ ಆಳಸಮುದ್ರ ಬಂದರು ಇಲ್ಲಿದ್ದು, ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.












Click it and Unblock the Notifications