Drone Attack: ಡ್ರೋನ್ ದಾಳಿಗೆ 43 ಜನ ಬಲಿ, ಎಲ್ಲಿ? ಯಾವಾಗ?
ಅಲ್ಲಿ ಒಂದು ಹೊತ್ತಿನ ಊಟ ಸಿಕ್ಕರೆ ಸಾಕಪ್ಪ ಅಂತಾ ಜನ ಕಾಯುತ್ತಾರೆ. ಆ ದೇಶದಲ್ಲಿನ ಮಕ್ಕಳ ದೇಹದಲ್ಲಿ ಮೂಳೆ ಕಿತ್ತು ಹೊರಬರುವ ಪರಿಸ್ಥಿತಿ ಇದೆ. ಇಷ್ಟಾದ್ರು ಅಲ್ಲಿನ ಕೆಲವು ದುಷ್ಟರ ಪರಿಣಾಮ ಮದ್ದು ಗುಂಡಿನ ಸದ್ದು ಬಲು ಜೋರಾಗಿದೆ. ಮನಸೋ ಇಚ್ಛೆ ದಾಳಿ ನಡೆಸುತ್ತಿರುವ ಕಾರಣಕ್ಕೆ ಈಗಾಗಲೇ ಸಾವಿರಾರು ಜನ ಬಲಿಯಾಗಿದ್ದು, ನಿನ್ನೆ ಒಂದೇ ದಿನ 43 ಜನ ಡ್ರೋನ್ ದಾಳಿಯಲ್ಲಿ ಜೀವ ಬಿಟ್ಟಿದ್ದಾರೆ.
ಇಷ್ಟೊತ್ತು ಹೇಳಿದ್ದು ಆಫ್ರಿಕಾದ ಕಡುಬಡವ ದೇಶವಾದ ಸುಡಾನ್ ಹಿಂಸಾಚಾರದ ಬಗ್ಗೆ. ಸುಡಾನ್ ಬೆಂಕಿ ಆರುತ್ತಿಲ್ಲ ಅಕ್ಷರಶಃ ಸುಡುಗಾಡಿನ ರೂಪ ಪಡೆದಿರುವ ಆಫ್ರಿಕಾದ ಈ ದೇಶದಲ್ಲಿ ಗಲಾಟೆ ಮತ್ತಷ್ಟು ಜೋರಾಗಿದೆ. ನಿನ್ನೆ ಕೂಡ ಇಂತಹದ್ದೇ ಕೃತ್ಯ ನಡೆದು ಹೋಗಿದೆ. ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ನಡೆಯುತ್ತಿರುವ ಕಿತ್ತಾಟ ಜೋರಾಗಿದೆ. ಇವರಿಬ್ಬರ ಈ ಕಿತ್ತಾಟದಲ್ಲಿ ಸಾವಿರಾರು ಅಮಾಯಕರು ಜೀವ ಕಳೆದುಕೊಂಡು, 50 ಲಕ್ಷಕ್ಕೂ ಹೆಚ್ಚು ಜನ ಬೀದಿಗೆ ಬಿದ್ದಿದ್ದಾರೆ. ಇದನ್ನೆಲ್ಲ ಕಣ್ಣಾರೆ ನೋಡಿದ್ರೂ ದುಷ್ಟರ ರಕ್ತದಾಹ ಕಡಿಮೆ ಆಗಿಲ್ಲ.

43 ಜನ ಜನರನ್ನು ಕೊಂದ ಪಾಪಿಗಳು
ಸುಡಾನ್ ರಾಜಧಾನಿಯಲ್ಲಿ ಸೇನೆ & ಅರೆಸೇನಾ ಪಡೆ ಮಧ್ಯೆ ಸಂಘರ್ಷ ಜೋರಾಗಿದ್ದು, ನಿನ್ನೆ ಸುಡಾನ್ ರಾಜಧಾನಿ ಖಾರ್ಟೂಮ್ ಮಾರುಕಟ್ಟೆ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಈ ಭೀಕರ ದಾಳಿಯಲ್ಲಿ ಕನಿಷ್ಠ 43 ಜನ ಮೃತಪಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದಾರೆ ಅಂತಾ ಹೇಳಲಾಗಿದೆ. ಸುಡಾನ್‌ನ ಮೇಲೆ ಹಿಡಿತ ಸಾಧಿಸಲು ಸೇನೆಯ ಮುಖ್ಯಸ್ಥ ಜನರಲ್ ಅಬ್ದೆಲ್ & ಅರೆಸೇನಾ ಪಡೆ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದನ್ ಡಗಲೊ ರಕ್ತ ಕಾಳಗ ನಡೆಸುತ್ತಿದ್ದಾರೆ. ಇದರ ಪರಿಣಾಮ ಏಪ್ರಿಲ್ ತಿಂಗಳಲ್ಲಿ ಶುರುವಾಗಿದ್ದ ಈ ಕಿತ್ತಾಟ ಇನ್ನೂ ನಿಂತಿಲ್ಲ.
ಕಿತ್ತಾಟ ಶುರುವಾಗಿದ್ದು ಯಾವ ಕಾರಣಕ್ಕೆ
ಸುಡಾನ್ ಅರೆಸೇನಾ ಪಡೆಯ ಯೋಧರನ್ನು ಸೇನೆ ನಿಕೃಷ್ಟವಾಗಿ ಕಾಣುತ್ತಿದೆ ಎಂಬ ಆರೋಪಕ್ಕೆ ಗಲಾಟೆ ಶುರು ಆಗಿತ್ತು. ಅದರ ಲಾಭ ಪಡೆದಿದ್ದು ಮಾತ್ರ ಸೇನಾ ಮುಖ್ಯಸ್ಥರು. ಅತ್ತ ಸುಡಾನ್ ಸೇನೆಯ ಮುಖ್ಯಸ್ಥ ತನ್ನ ಅಧಿಕಾರ ಉಳಿಸಿಕೊಳ್ಳಲು ಹೋರಾಡಿದ, ಇತ್ತ ಅರೆಸೇನಾ ಪಡೆಯ ಮುಖ್ಯಸ್ಥ ತನ್ನ ಅಧಿಕಾರಕ್ಕೆ ಬಡಿದಾಡಿದ. ಇವರಿಬ್ಬರ ಜಗಳಕ್ಕೆ ಸಾವಿರಾರು ಅಮಾಯಕರು ಬಲಿಯಾದರು. ಅಲ್ಲದೆ 50 ಲಕ್ಷಕ್ಕೂ ಹೆಚ್ಚು ಜನ ಬೀದಿಗೆ ಬಿದ್ದಿದ್ದಾರೆ. ಮೊದಲೇ ಕಡು ಬಡತನ ಈ ದೇಶವನ್ನು ಕಾಡುತ್ತಿದೆ. ಇದರ ನಡುವೆ ಇವರಿಬ್ಬರ ರಕ್ತದಾಹ ಬೇರೆ.

ಸುಡಾನ್ ನೆಲದಲ್ಲಿ ಹಿಂಸೆಯ ಇತಿಹಾಸ
1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ. ಇಷ್ಟೆಲ್ಲದರ ಮಧ್ಯೆ ಮತ್ತೊಂದು ಕಿತ್ತಾಟ ಶುರುವಾಗಿದೆ. ಈ ಹೊಸ ಕಿತ್ತಾಟಕ್ಕೆ ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಸೂರು ಕಳೆದುಕೊಂಡು ಪರದಾಡುತ್ತಿದ್ದು, ಲಕ್ಷಾಂತರ ಜನ ದೇಶ ಬಿಟ್ಟು ಅಕ್ಕಪಕ್ಕದಲ್ಲಿ ಇರುವ ದೇಶಗಳಿಗೆ ಓಡಿ ಹೋಗಿದ್ದಾರೆ ಎನ್ನಲಾಗಿದೆ.
ಜಾಗತಿಕ ಮಟ್ಟದಲ್ಲಿ ಕೂಡ ಸುಡಾನ್ ಹಿಂಸಾಚಾರ ನಿಲ್ಲಿಸುವ ಪ್ರಯತ್ನ ನಡೆಸಲಾಗಿತ್ತು. ಖುದ್ದಾಗಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿ ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಯತ್ನಿಸಿತ್ತು. ಆದರೆ ಅದು ಉಪಯೋಗಕ್ಕೆ ಬರಲೇ ಇಲ್ಲ. ಹೀಗಾಗಿ ಸುಡಾನ್ ಸೇನೆ ತನ್ನ ದಾಳಿಯನ್ನು ಮುಂದುವರಿಸಿದೆ. ಅರೆಸೇನಾ ಪಡೆಯ ಹೆಡೆಮುರಿ ಕಟ್ಟಲು ಮನಸ್ಸಿಗೆ ಬಂದಂತೆ ಬಾಂಬ್ ಮತ್ತು ಗುಂಡಿನ ದಾಳಿ ನಡೆಸುತ್ತಿದೆ. ಆದ್ರೆ ಈ ಕೃತ್ಯಕ್ಕೆ ಸಾಮಾನ್ಯರು ಬಲಿಯಾಗುತ್ತಿದ್ದಾರೆ.












Click it and Unblock the Notifications