ಹಿಮಪಾತದ ನಡುವೆ ಪವಾಡ: 18 ಗಂಟೆ ಹಿಮದಡಿ ಹೂತಿದ್ದರೂ ಬದುಕಿ ಬಂದ ಬಾಲಕಿ
Recommended Video
ಮುಜಫರಬಾದ್, ಜನವರಿ 16: ತೀವ್ರವಾಗಿ ಉಂಟಾಗುತ್ತಿರುವ ಹಿಮಪಾತ, ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗಗಳಲ್ಲಿ ಅನಾಹುತ ಸೃಷ್ಟಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಿಮಪಾತದಿಂದ ಮೃತಪಟ್ಟವರ ಸಂಖ್ಯೆ 74ಕ್ಕೆ ಏರಿದ್ದು, 12 ವರ್ಷದ ಬಾಲಕಿಯೊಬ್ಬಳು ಪವಾಡ ಸದೃಶ ರೀತಿಯಲ್ಲಿ ಜೀವ ಉಳಿಸಿಕೊಂಡಿದ್ದಾಳೆ.
ಹಿಮದ ಅಡಿಯಲ್ಲಿ ಮುಚ್ಚಿಹೋಗಿದ್ದ ಮನೆಯೊಂದರ ಕೊಠಡಿಯಲ್ಲಿ ಸಮೀನಾ ಬೀಬಿ ಎಂಬ ಬಾಲಕಿ ಸುಮಾರು 18 ಗಂಟೆ ಸಿಲುಕಿಕೊಂಡಿದ್ದಳು. ಹಿಮಪಾತದಿಂದ ಉಂಟಾದ ಅವಘಡದಲ್ಲಿ ಕಾಲಿಗೆ ಪೆಟ್ಟಾಗಿದ್ದ ಸಮೀನಾ, ಸಹಾಯಕ್ಕಾಗಿ ಕೂಗುತ್ತಾ ಅಳುತ್ತಾ ಕೂತಿದ್ದಳು. ಆಕೆಯನ್ನು ರಕ್ಷಿಸುವಲ್ಲಿ ರಕ್ಷಣಾ ಪಡೆ ಯಶಸ್ವಿಯಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಮ್ ಕಣಿವೆಯಲ್ಲಿ ಸೋಮವಾರ ಉಂಟಾದ ಹಿಮಪಾತದಿಂದ ಮೃತಪಟ್ಟವರ ಸಂಖ್ಯೆ 74ಕ್ಕೆ ಏರಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು,ಹಿಮದ ಅಡಿಯಲ್ಲಿ ಸಿಲುಕಿರುವವರಿಗಾಗಿ ಹುಡುಕಾಟ ನಡೆಯುತ್ತಿದೆ.

ಇನ್ನಿಬ್ಬರು ಮಕ್ಕಳ ಸಾವು
ತಮ್ಮ ಮಗಳು ಬದುಕಿ ಬಂದದ್ದು ಪವಾಡವಲ್ಲದೆ ಬೇರೇನೂ ಅಲ್ಲ ಎಂದು ಸಮೀನಾಳ ತಾಯಿ ಶಹನಾಜ್ ಹೇಳಿದ್ದಾರೆ. ಹಿಮಪಾತದಲ್ಲಿ ಅವರ ಮಗ ಮತ್ತು ಮತ್ತೊಬ್ಬ ಮಗಳು ಮೃತಪಟ್ಟಿದ್ದಾರೆ. ಹಿಮದ ಅಡಿಯಲ್ಲಿ ಹೂತು ಹೋಗಿದ್ದ ಸಮೀನಾ ಕೂಡ ಬದುಕಿ ಬರುವುದಿಲ್ಲ ಎಂದೇ ಅವರು ಭಾವಿಸಿದ್ದರು. ಅವರ ಇನ್ನೊಬ್ಬ ಮಗ ಇರ್ಷಾದ್ ಅಹ್ಮದ್, ಆಕೆಗಾಗಿ ಹುಡುಕಾಡುವ ಪ್ರಯತ್ನವನ್ನು ಕೈಬಿಟ್ಟಿದ್ದರು.

ಮುರಿದ ಕಾಲು, ಸುರಿದ ರಕ್ತ
'ನಾನು ಅಲ್ಲಿಯೇ ಸತ್ತುಹೋಗುತ್ತೇನೆ ಎಂದು ಭಾವಿಸಿದ್ದೆ. ಯಾರಾದರೂ ರಕ್ಷಿಸುತ್ತಾರೆಂಬ ನಿರೀಕ್ಷೆಯೊಂದಿಗೆ ಇಡೀ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ. ಕಾಲು ಮುರಿದಿತ್ತು. ಬಾಯಿಯಿಂದ ರಕ್ತ ಸುರಿಯುತ್ತಿತ್ತು' ಎಂದು ಸಮೀನಾ ಹೇಳಿದ್ದಾಳೆ. ಗ್ರಾಮವೊಂದರ ಮೂರು ಮಹಡಿ ಮನೆಯಲ್ಲಿ ಸಮೀನಾ ಕುಟುಂಬ ಹಾಗೂ ಗ್ರಾಮದ ಅನೇಕರು ರಕ್ಷಣೆ ಪಡೆದಿದ್ದರು. ಇಡೀ ಕಟ್ಟಡ ಹಿಮದ ಅಡಿ ಸಮಾಧಿಯಾಗಿದೆ. ಅದರಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ.

ಕಣ್ಣು ಮಿಟುಕಿಸುವುದರೊಳಗೆ ಘಟನೆ
ಹಿಮಪಾತ ಸಂಭವಿಸಿದ ಬೆನ್ನಲ್ಲೇ ಬೆಂಕಿ ಹೊತ್ತಿಕೊಂಡು ಸಮೀನಾ ಕುಟುಂಬದ ಅದರ ನಡುವೆ ಸಿಲುಕಿಕೊಂಡಿತ್ತು. ಕಣ್ಣು ಮುಚ್ಚಿ ಬಿಡುವುದರೊಳಗೆ ಈ ದುರಂತ ಸಂಭವಿಸಿತ್ತು. ಹೀಗೆ ಆಗುತ್ತದೆ ಎಂಬ ಸಣ್ಣ ಸುಳಿವೂ ಇರಲಿಲ್ಲ ಎಂದು ಸಮೀನಾ ತಾಯಿ ಶಹನಾಜ್ ತಿಳಿಸಿದ್ದಾರೆ. ಸಮೀನಾ ಮತ್ತು ಹತ್ತಾರು ಮಂದಿಯನ್ನು ಹೆಲಿಕಾಫ್ಟರ್ ಮೂಲಕ ಕರೆದೊಯ್ದು ಮುಜಫರಬಾದ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸತ್ತವರ ಸಂಖ್ಯೆ 100ಕ್ಕೆ ಏರಿಕೆ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಹಿಮಪಾತದ ಹೊಡೆತಕ್ಕೆ ನಲುಗಿದ ಸ್ಥಳಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 100 ತಲುಪಿದೆ ಎಂದು ಅಲ್ಲಿನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಶುಕ್ರವಾರದ ಬಳಿಕ ಇಲ್ಲಿ ಮತ್ತಷ್ಟು ಹಿಮ ಬೀಳುವ ನಿರೀಕ್ಷೆಯಿದೆ. ಭಾರತದ ಭಾಗದಲ್ಲಿ ಹಿಮಪಾತದಿಂದ ಆರು ಸೈನಿಕರು ಸೇರಿ 12 ಮಂದಿ ಮೃತಪಟ್ಟಿದ್ದಾರೆ.












Click it and Unblock the Notifications