Pakistan Blast: ಉಗ್ರರ ಬಾಂಬ್ ದಾಳಿಗೆ 11 ಕಾರ್ಮಿಕರು ಬಲಿ
ಪಾಕಿಸ್ತಾನ ಉಗ್ರರ ತವರು ಅನ್ನೋ ಮಾತು ಮತ್ತೆ ಮತ್ತೆ ಪ್ರೂವ್ ಆಗುತ್ತಿದ್ದು, ಪಾಕಿಸ್ತಾನಿ ನಾಗರಿಕರು ನೆಮ್ಮದಿಯಾಗಿ ಬದಕಲು ಆಗುತ್ತಿಲ್ಲ. ಇದೀಗ ಮತ್ತೊಮ್ಮೆ ಪಾಕ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಖೈಬರ್ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಉಗ್ರ ಕೃತ್ಯ 11 ಅಮಾಯಕ ಕಾರ್ಮಿಕರನ್ನು ಬಲಿ ಪಡೆದಿದೆ. ಸ್ಫೋಟದ ಬಳಿಕ ದೇಹಗಳು ಛಿದ್ರವಾಗಿ ಬಿದ್ದಿವೆ. ಈ ಮನಕಲಕುವ ಘಟನೆ ಪಾಕಿಸ್ತಾನದಲ್ಲಿ ಸಂಚಲನ ಸೃಷ್ಟಿಸಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದಾಳಿ ಅದೆಷ್ಟು ಭಯಾನಕವಾಗಿ ಇತ್ತು ಅಂದ್ರೆ, ಈ ಸ್ಫೋಟದಲ್ಲಿ ಮೃತಪಟ್ಟವರ ಗುರುತು ಸಿಗದೆ ಅಧಿಕಾರಿಗಳು ಪರದಾಡಿದರು. ನಿರ್ಮಾಣ ಹಂತದ ಸರ್ಕಾರಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ 11 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಎಲ್ಲ ಕಾರ್ಮಿಕರನ್ನ ಕರೆದುಕೊಂಡು ಹೋಗುತ್ತಿದ್ದ ವಾಹನವನ್ನ ಟಾರ್ಗೆಟ್ ಮಾಡಿ ಪಾಪಿ ಉಗ್ರ ಪಡೆ ದಾಳಿ ಮಾಡಿದೆ. ಶಾವಾಲ್ ತೆಹಸಿಲ್‌ನ ಗುಲ್ ಮೀರ್ ಕೋಟ್ ಬಳಿ ಕಾರ್ಮಿಕರು ಇದ್ದ ವಾಹನ ಹೋಗುತ್ತಿತ್ತು. ಆಗ ದಿಢೀರ್ ವಾಹನ ಸ್ಫೋಟವಾಗಿದೆ.

ಹೊಟ್ಟೆಪಾಡಿಗೆ ಬಂದವರು ಜೀವ ಕಳೆದುಕೊಂಡರು
ಅವರೆಲ್ಲಾ ಕೂಲಿ ಕಾರ್ಮಿಕರು, ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಕೆಲಸಕ್ಕೆ ಬಂದು ಜೀವ ಕಳೆದುಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿ ಯಾರ ಜೀವಕ್ಕು ಗ್ಯಾರಂಟಿಯೇ ಇಲ್ಲ ಎಂಬುದು ಪಕ್ಕಾ ಆಗಿದೆ. ಘಟನೆಯಲ್ಲಿ ಇನ್ನೂ ಹಲವು ಕಾರ್ಮಿಕರ ದೇಹವು ಛಿದ್ರ ಛಿದ್ರವಾಗಿ ಬಿದ್ದ ಹಿನ್ನೆಲೆ ಕೆಲವರ ದೇಹ ಇನ್ನೂ ಗುರುತು ಸಿಕ್ಕಿಲ್ಲ. ಹಾಗೇ ಕಾರ್ಮಿಕರಲ್ಲಿ ಕೆಲವರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಆದರೆ ಈ ಸ್ಫೋಟ ನಡೆಸಿದ್ದು ಯಾವ ಉಗ್ರ ಸಂಘಟನೆ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಹೀಗಾಗಿಯೇ ಪಾಕ್ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ತನಿಖೆ ಮುಂದುವರಿಸಿದ್ದಾರೆ.
ಖೈಬರ್ ಪ್ರಾಂತ್ಯದಲ್ಲಿ ಸ್ಫೋಟದ ಸುರಿಮಳೆ
ಪಾಕಿಸ್ತಾನ ಪಾಪಿ ಉಗ್ರರನ್ನ ಬೆಳೆಸುತ್ತಾ ಅವರಿಂದಲೇ ನಾಶವಾಗುತ್ತಿದೆ ಅನ್ನೋ ಆರೋಪ ಇದೆ. ಅದರಲ್ಲೂ ಖೈಬರ್ ಪ್ರಾಂತ್ಯ ಉಗ್ರರ ಸ್ವರ್ಗವಾಗಿದ್ದು, ಕಳೆದ ತಿಂಗಳಷ್ಟೇ ಸ್ಫೋಟ ಸಂಭವಿಸಿತ್ತು. ಖೈಬರ್ ಪಖ್ತುಂಖ್ವಾ ಭಾಗದಲ್ಲಿ ಇಸ್ಲಾಮಿಕ್ ರಾಜಕೀಯ ಪಕ್ಷದ ಸಭೆಯ ವೇಳೆ ಸೂಸೈಡ್ ಬಾಂಬರ್ ತನ್ನನ್ನೇ ಸ್ಫೋಟಿಸಿಕೊಂಡಿದ್ದ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಘಟನೆಯಲ್ಲಿ 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಬಾಂಬ್ ಬ್ಲಾಸ್ಟ್‌ನಲ್ಲಿ ಜೆಯುಐಎಫ್ ನಾಯಕ ಮೌಲಾನಾ ಜಿಯಾವುಲ್ಲಾ ಜಾನ್ ಮೃತಪಟ್ಟು, ಹಲವು ಪತ್ರಕರ್ತರ ಪ್ರಾಣ ಹೋಗಿತ್ತು. ಈ ಘಟನೆ ಮಾಸುವ ಮೊದಲೇ ಮತ್ತೊಂದು ಸ್ಫೋಟ ಸಂಭವಿಸಿದೆ.
ಅತ್ತ ದುಡಿಯಲು ಕೆಲಸ ಇಲ್ಲ, ತಿನ್ನಲು ಅನ್ನವಿಲ್ಲದೆ ಪಾಕಿಸ್ತಾನದ ಬಡವರು ದಿನನಿತ್ಯ ಪರದಾಡುತ್ತಿದ್ದಾರೆ. ಪಾಕಿಸ್ತಾನ ಕೂಡ ಆರ್ಥಿಕವಾಗಿ ಬೀದಿಗೆ ಬಿದ್ದಿದೆ. ಇಷ್ಟಾದರೂ ಕ್ರಮ ಕೈಗೊಳ್ಳದೆ ಉಗ್ರರನ್ನು ಮತ್ತಷ್ಟು ಮೆರೆಯಲು ಬಿಡುತ್ತಿರುವ ಆರೋಪ ಇದೆ. ಅದ್ರಲ್ಲೂ ಜನರು ಹೆಚ್ಚಾಗಿ ಓಡಾಡುವ ಸ್ಥಳಗಳನ್ನ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿರುವುದು ಈಗ ಆತಂಕ ಮೂಡಿಸಿದೆ. ಖೈಬರ್ ಪ್ರಾಂತ್ಯದ ಘಟನೆ ಜನರನ್ನ ಬೆಚ್ಚಿ ಬೀಳಿಸಿದೆ.

ಒಟ್ನಲ್ಲಿ ಉಗ್ರರ ಸ್ವರ್ಗ ಎಂಬ ಆರೋಪದ ನಡುವೆ ಪದೇ ಪದೆ ಪಾಕಿಸ್ತಾನದಲ್ಲಿ ಬಾಂಬ್‌ನ ಸದ್ದು ಮೊಳಗುತ್ತಿದೆ. ಅದ್ರಲ್ಲೂ ಎಲ್ಲಿ, ಯಾವಾಗ ಎಲ್ಲಿಂದ ಬಾಂಬ್ ಬಂದು ಬೀಳುತ್ತೋ ಗೊತ್ತಿಲ್ಲ ಎಂಬ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಪಾಕಿಸ್ತಾನದ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ. ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಪಾಕಿಸ್ತಾನ ಸರ್ಕಾರ ನಿದ್ದೆ ಮಾಡುತ್ತಾ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಜನ. ಆದರೆ ದ್ವೇಷ ರಾಜಕೀಯದ ಬಲೆಯಲ್ಲಿ ಇಡೀ ದೇಶವೇ ಪರದಾಡುತ್ತಿರುವುದು ದುರಂತವೇ ಸರಿ.












Click it and Unblock the Notifications