Japan Earthquakes: 1,000 ಬಾರಿ ಭೂಕಂಪನ, ನಲುಗಿ ಹೋದ ಜಪಾನ್ ಜನರು!
ದ್ವೀಪರಾಷ್ಟ್ರ ಜಪಾನ್ ಸಾಲು ಸಾಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಸಮಯದಲ್ಲೇ, ಪ್ರಾಕೃತಿಕವಾಗಿ ಕೂಡ ನೂರಾರು ಸಮಸ್ಯೆ ಎದುರಾಗುತ್ತಿವೆ. ಈಗಾಗಲೇ ನೂರಾರು ಭೀಕರ ಭೂಕಂಪನಕ್ಕೆ ನಾಶವಾಗಿ, ಮತ್ತೆ ಎದ್ದು ಬಂದಿರುವ ಜಪಾನ್ ಇದೀಗ ಮತ್ತೆ ಒತ್ತಡಕ್ಕೆ ಸಿಲುಕಿದೆ. ಅದರಲ್ಲೂ ಕಳೆದ 1 ವಾರದ ಅಂತರದಲ್ಲಿ ಸುಮಾರು 1,000 ಬಾರಿ ಭೂಕಂಪನ ಸಂಭವಿಸಿದೆಯಂತೆ. ಈ ಮೂಲಕ ಜಪಾನ್ ನೆಲ ನಲುಗಿ ಹೋಗಿದ್ದು, ಹೆಜ್ಜೆ ಹೆಜ್ಜೆಗೂ ಅಲ್ಲಿನ ಜನರಿಗೆ ಇದೀಗ ಸಾವಿನ ಆತಂಕ ಕಾಡುತ್ತಿದೆ.
ಜಪಾನ್ ಪ್ರಾಕೃತಿಕವಾಗಿ ತುಂಬಾ ಸೂಕ್ಷ್ಮ ಪರಿಸ್ಥಿತಿಯಲ್ಲಿ ಇದ್ದು, ಆಗಾಗ ದೊಡ್ಡ ಅವಾಂತರಗಳು ಇಲ್ಲಿ ಸಂಭವಿಸುತ್ತವೆ. ಅದೇ ರೀತಿ ಕಳೆದ ಕೆಲವು ದಿನಗಳಿಂದ ದಕ್ಷಿಣ ಜಪಾನ್ ಟೋಕಾರಾ ದ್ವೀಪಗಳಲ್ಲಿ 1,000 ಬಾರಿಗೂ ಹೆಚ್ಚು ಭೂಕಂಪನ ಸಂಭವಿಸಿದ್ದು, ಸ್ಥಳೀಯರು ಈ ಘಟನೆಗಳಿಂದ ಹೆದರಿ ಕೂತಿದ್ದಾರೆ. ಇದೇ ಸಮಯದಲ್ಲಿ ಸ್ಥಳೀಯ ಅಧಿಕಾರಿಗಳು ಕೂಡ ಎಚ್ಚರಿಕೆ ಸಂದೇಶ ರವಾನಿಸಿದ್ದು, ಜನರ ಸ್ಥಳಾಂತರಕ್ಕೆ ಕೂಡ ಸೂಚನೆ ನೀಡಿದ್ದಾರೆ. ಈ ನಡುವೆ 5.5 ತೀವ್ರತೆಯ ಭೂಕಂಪನ ಹಿನ್ನೆಲೆ, ಸಾಕಷ್ಟು ಕಟ್ಟಡಗಳಿಗೆ ಹಾನಿ ಕೂಡ ಉಂಟಾಗಿದೆ. ಇದೇ ರೀತಿ ಇನ್ನಷ್ಟು ಕಂಪನ ಸಂಭವಿಸಿದರೆ ಮುಂದೆ ಸುನಾಮಿ ಕೂಡ ಅಪ್ಪಳಿಸುವ ಭಯ ಕಾಡುತ್ತಿದೆ.

ಸ್ಥಳಾಂತರ ಶುರು ಮಾಡಿದ ಅಧಿಕಾರಿಗಳು
ಸಾಲು ಸಾಲು ಭೂಕಂಪನ ಸಂಭವಿಸಿರುವ ಜಪಾನ್ ದ್ವೀಪಗಳಲ್ಲಿ ಹೆಚ್ಚು ಜನರು ವಾಸ ಮಾಡುತ್ತಾ ಇಲ್ಲ, ಹೀಗಾಗಿ ಅವರನ್ನೆಲ್ಲಾ ಬೇರೆ ಕಡೆಗೆ ಶಿಫ್ಟ್ ಮಾಡಲು ಪ್ಲಾನ್ ಮಾಡಲಾಗಿದೆ. 90 ಜನರು ಈ ದ್ವೀಪಗಳಲ್ಲಿ ಜೀವನ ನಡೆಸುತ್ತಿದ್ದು, ಸುರಕ್ಷಿತ ಪ್ರದೇಶಕ್ಕೆ ಅವರನ್ನೆಲ್ಲಾ ಶಿಫ್ಟ್ ಮಾಡಲು ತಯಾರಿ ಸಾಗಿದೆ. ಜುಲೈ 4ರ ಶುಕ್ರವಾರವೇ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಶುರುವಾಗಿದೆ. ಮತ್ತೊಂದು ಕಡೆ ಜಪಾನ್ ಮಿತ್ರ ದೇಶಗಳು ಕೂಡ ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಲ್ಲುತ್ತಿವೆ.
2011ರ ಸಮಯದಲ್ಲಿ ಭೀಕರ ಸುನಾಮಿ
ಜಪಾನ್ ದೇಶದಲ್ಲಿ ಈಗಾಗಲೇ ಸಾಲು ಸಾಲು ಭೀಕರ ಭೂಕಂಪನ ಸಂಭವಿಸಿ, ಅದನ್ನು ಎದುರಿಸಿ ಕೂಡ ಜಪಾನ್ ಬದುಕಿ ಉಳಿದಿದೆ. ಅದರಲ್ಲೂ 2011ರಲ್ಲಿ ಜಪಾನ್‌ನ ಕರಾವಳಿ ಪ್ರದೇಶಗಳನ್ನು ಧ್ವಂಸಗೊಳಿಸಿದ ಸುನಾಮಿಗೆ ಕಾರಣವಾಗಿದ್ದೇ ಡೆಡ್ಲಿ ಭೂಕಂಪನ. 2011ರ ಮಾರ್ಚ್ 11ಕ್ಕೆ ಈ ದುರ್ಘಟನೆ ಸಂಭವಿಸಿದ್ದು, ಸುಮಾರು 9.0 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿ ಸುನಾಮಿ ಕೂಡ ಅಪ್ಪಳಿಸಿತ್ತು. ಈ ಘಟನೆ ನಂತರ ಜಪಾನ್‌ನ ದೊಡ್ಡ ನ್ಯೂಕ್ಲಿಯರ್ ಪ್ಲಾಂಟ್ ಕೂಡ ಬ್ಲಾಸ್ಟ್ ಆಗಿತ್ತು. ಕೊನೆಗೆ ದೊಡ್ಡ ದುರಂತ ಸಂಭವಿಸಿ ಅದರಿಂದ ಹೊರಗೆ ಬಂದಿತ್ತು ಜಪಾನ್ ದೇಶ. ಅದೇ ರೀತಿ ಇದೀಗ ಮತ್ತೊಂದು ದುರಂತ ಸಂಭವಿಸುತ್ತಾ? ಅನ್ನೋ ಅನುಮಾನ ಕಾಡುತ್ತಿದೆ.












Click it and Unblock the Notifications