Zomato: ಝೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡುವವರಿಗೆ ಬಿಗ್ ಶಾಕ್.. ಹೆಚ್ಚುವರಿ ಶುಲ್ಕದಿಂದ ಗ್ರಹಾಕರ ಜೇಬಿಗೆ ಕತ್ತರಿ
Zomato: ಭಾರತದಲ್ಲಿ ಅತಿದೊಡ್ಡ ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಗಳಲ್ಲಿ ಝೊಮ್ಯಾಟೋ ಕೂಡ ಒಂದಾಗಿದೆ. ಈ ಪ್ಲಾಟ್‌ಫಾರ್ಮ್ ಇದೀಗ ಗ್ರಾಹಕರ ಜೇಬಿಜೆ ಕತ್ತರಿ ಹಾಕಲು ಮುಂದಾಗಿದೆ. ಅಂದರೆ ಹೆಚ್ಚುವರಿ ಶುಲ್ಕ ವಿಧಿಸಲು ಆರಂಭಿಸಿದೆ. ಹಾಗಾದ್ರೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಹುತೇಕ ಉದ್ಯೋಗಿಗಳು, ಮನೆ ಸಿಬ್ಬಂದಿ ಸಮಯ ಉಳಿಸಲಿಕ್ಕಾಗಿ ಆನ್‌ಲೈನ್ ಫುಡ್ ಡೆಲಿವರಿ ಮಾಡುತ್ತಿದ್ದಾರೆ. ಇಂತಹವರ ಸಂಖ್ಯೆ ದಿಂದದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಇವರಿಗೆ ಝೊಮ್ಯಾಟೋ ಹೆಚ್ಚುವರಿ ಶುಲ್ಕದ ಶಾಕ್ ನೀಡಿದೆ.

ಯಾರಿಗೆಲ್ಲಾ ಹೆಚ್ಚುವರಿ ಶುಲ್ಕ ಅನ್ವಯ?
ದೇಶದ ಅತಿದೊಡ್ಡ ಪ್ರಮುಖ ಆಹಾರ ಪೂರೈಕೆ ಸಂಸ್ಥೆಯಾದ ಝೊಮ್ಯಾಟೋ ಡೆಲಿವರಿ ಸಮಯದಲ್ಲಿ ನಗದು ಪಾವತಿ ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಪ್ರಾರಂಭಿಸಿದೆ. ಆ್ಯಪ್‌ನ ಬಿಲ್‌ನಲ್ಲಿ 'ಪೇ ಆನ್ ಡೆಲಿವರಿ ಫೀ' ಹೆಸರಿನಲ್ಲಿ ಈ ಹೊಸ ಶುಲ್ಕವನ್ನು ಪ್ರತ್ಯೇಕವಾಗಿ ಸೇರಿಸಲಾಗುತ್ತಿದ್ದು, ಇದು ಕೇವಲ ನಗದು ಪಾವತಿ ಮಾಡುವ ಆರ್ಡರ್‌ಗಳಿಗೆ ಮಾತ್ರ ಅನ್ವಯ ಆಗಲಿದೆ ಎಂದು ತಿಳಿದುಬಂದಿದೆ.
ಹೆಚ್ಚಳವಾದ ಶುಲ್ಕದ ವಿವರ
ಆನ್‌ಲೈನ್ ಮೂಲಕ ಮುಂಗಡವಾಗಿ ಹಣ ಪಾವತಿಸುವ ಗ್ರಾಹಕರಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಝೊಮ್ಯಾಟೋದ ಪ್ಲಾಟ್‌ಫಾರ್ಮ್ ಶುಲ್ಕ, ರೆಸ್ಟೋರೆಂಟ್ ಪ್ಯಾಕಿಂಗ್ ವೆಚ್ಚ ಹಾಗೂ ಜಿಎಸ್‌ಟಿ ಹೊರತುಪಡಿಸಿ ಈ ಹೊಸ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಆ್ಯಪ್‌ನಲ್ಲಿ ಗ್ರಾಹಕರು ಹಂಚಿಕೊಂಡಿರುವ ಫೋಟೋಗಳ ಪ್ರಕಾರ ಈ ವೆಚ್ಚವು ಸಾಮಾನ್ಯವಾಗಿ 5 ರೂಪಾಯಿಯಿಂದ ಹಿಡಿದು 20 ರೂಪಾಯಿಯವರೆಗೆ ಇರಲಿದೆ.
ಝೊಮ್ಯಾಟೋದ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಏನು?
ದಿನಕ್ಕೆ ಅಂದಾಜು 23 ರಿಂದ 25 ಲಕ್ಷ ಆಹಾರ ಆರ್ಡರ್‌ಗಳನ್ನು ನಿರ್ವಹಿಸುವ ಝೊಮ್ಯಾಟೋ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಈ ದಾರಿ ಹಿಡಿದಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಜೊಮ್ಯಾಟೋ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 14.99 ರೂಪಾಯಿಗೆ ಹೆಚ್ಚಿಸಿತ್ತು.
ಇದರ ಜೊತೆಗೆ ಸಂಸ್ಥೆಯು ಆಂತರಿಕ ಪುನರ್ರಚನೆಯ ಭಾಗವಾಗಿ ಆಗಸ್ಟ್ ತಿಂಗಳಲ್ಲಿ 250ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಹೈದರಾಬಾದ್‌ನ ಕಸ್ಟಮರ್ ಡಿಲೈಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಗುರುಗ್ರಾಮಕ್ಕೆ ಸ್ಥಳಾಂತರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ
ಜೊಮ್ಯಾಟೋದ ಪ್ರಮುಖ ಸ್ಪರ್ಧಿ ಸ್ವಗಿ ಈರೆಗೆ ಯಾವುದೇ ನಗದು ಪಾವತಿ ಶುಲ್ಕವನ್ನು ಜಾರಿಗೆ ತಂದಿಲ್ಲ. ಆದರೂ ಜೊಮ್ಯಾಟೋದ ಈ ದಿಢೀರ್ ನಿರ್ಧಾರವು ಆನ್‌ಲೈನ್ ಆಹಾರ ಪ್ರಿಯರಿಗೆ ಜೇಬು ಸುಡುತ್ತಿದೆ ಎಂದರೆ ತಪ್ಪಾಗಲಾರದು. ಈ ಹೊಸ ಶುಲ್ಕವು ಜೊಮ್ಯಾಟೋ ಈಗಾಗಲೇ ವಿಧಿಸುತ್ತಿರುವ ಪ್ಲಾಟ್‌ಫಾರ್ಮ್ ಶುಲ್ಕ, ರೆಸ್ಟೋರೆಂಟ್ ಪ್ಯಾಕೇಜಿಂಗ್ ಶುಲ್ಕ, ಡೆಲಿವರಿ ಚಾರ್ಜ್ ಮತ್ತು ಜಿಎಸ್‌ಟಿ ತೆರಿಗೆಗಳಿಗಿಂತ ಪ್ರತ್ಯೇಕವಾಗಿದೆ. ಇದರಿಂದ ಅಸಮಾಧಾನಗೊಂಡ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಝೊಮ್ಯಾಟೋ ನಿರ್ಧಾರಕ್ಕೆ ನೆಟ್ಟಿಗರು ಹೇಳೋದೇನು?
ಝೊಮ್ಯಾಟೋದ ಈ ಹೊಸ 'ಪೇ ಆನ್ ಡೆಲಿವರಿ' ಶುಲ್ಕದ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರಿಂದ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಹಲವರು ತಮ್ಮ ಜೊಮ್ಯಾಟೋ ಬಿಲ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಶೇರ್ ಮಾಡುವ ಮೂಲಕ ಸಂಸ್ಥೆಯ ಈ ನೀತಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. 'ಈಗಾಗಲೇ ಪ್ಲಾಟ್‌ಫಾರ್ಮ್ ಶುಲ್ಕ, ಡೆಲಿವರಿ ಶುಲ್ಕ, ಪ್ಯಾಕೇಜಿಂಗ್ ವೆಚ್ಚ ಮತ್ತು ಜಿಎಸ್‌ಟಿ ಕಟ್ಟುತ್ತಿರುವಾಗ, ನಗದು ಪಾವತಿ ಮಾಡುವುದಕ್ಕೂ ಪ್ರತ್ಯೇಕ ದಂಡ ಕಟ್ಟಬೇಕೇ?,' ಎಂದು ಪ್ರಶ್ನಿಸುತ್ತಿದ್ದಾರೆ.
ಆಹಾರದ ಮೂಲ ಬೆಲೆಗಿಂತ ಈ ಎಲ್ಲಾ ಹೆಚ್ಚುವರಿ ಶುಲ್ಕಗಳೇ ಹೆಚ್ಚಾಗುತ್ತಿವೆ ಎಂದು ಅನೇಕ ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಸೌಲತ್ತಿನ ಹೆಸರಿನಲ್ಲಿ ಸಣ್ಣ ಸಣ್ಣ ಮೊತ್ತಗಳನ್ನು ಸೇರಿಸುತ್ತಿರುವುದು ಗ್ರಾಹಕರನ್ನು ಶೋಷಿಸುವ ತಂತ್ರ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೆಲವೊಮ್ಮೆ ಬ್ಯಾಂಕ್ ಸರ್ವರ್ ತಾಂತ್ರಿಕ ತೊಂದರೆ ಇದ್ದಾಗ ಅಥವಾ ಗ್ರಾಹಕರ ಬಳಿ ಆನ್‌ಲೈನ್ ಪಾವತಿ ಸೌಲಭ್ಯವಿಲ್ಲದಿದ್ದಾಗ ನಗದು ಪಾವತಿಯೇ ಏಕೈಕ ಆಯ್ಕೆ ಆಗಿರುತ್ತದೆ. ಇಂತಹ ಅನಿವಾರ್ಯ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ಸಂಸ್ಥೆಯು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ನ್ಯಾಯಯುತವಲ್ಲ ಎಂದು ಕಿಡಿಕಾರಿದ್ದಾರೆ.
ಜೊಮ್ಯಾಟೋದ ಈ ನಿರ್ಧಾರದಿಂದ ಬೇಸತ್ತಿರುವ ಹಲವು ಗ್ರಾಹಕರು, ಯಾವುದೇ ನಗದು ಪಾವತಿ ಶುಲ್ಕ ವಿಧಿಸದ ಸ್ವಿಗ್ಗಿ ಅಥವಾ ಒಎನ್‌ಡಿಸಿ ನಂತಹ ಪರ್ಯಾಯ ಪ್ಲಾಟ್‌ಫಾರ್ಮ್‌ಗಳಿಗೆ ಬದಲಾಗುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕಂಪನಿಯು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೂಡಿದ ಈ ತಂತ್ರವು ಗ್ರಾಹಕರ ಜೇಬಿಗೆ ನೇರ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications
