ಆಂಧ್ರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆಯಾಗಿ ಜಗನ್ ಸಹೋದರಿ ನೇಮಕ!
ನವದೆಹಲಿ, ಜನವರಿ 16: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷ ಆಂಧ್ರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ. ಎಸ್. ಶರ್ಮಿಳಾ ನೇಮಕ ಮಾಡಿದೆ. ಜನವರಿ 4ರಂದು ಶರ್ಮಿಳಾ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.
ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಜಿ. ರುದ್ರರಾಜು ರಾಜೀನಾಮೆಯ ಬಳಿಕ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ವೈ. ಎಸ್. ಶರ್ಮಿಳಾರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಜನವರಿ 4ರಂದು ವೈ. ಎಸ್. ಶರ್ಮಿಳಾ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಕೆಲವೇ ತಿಂಗಳುಗಳಲ್ಲಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಈ ನೇಮಕ ಮಹತ್ವ ಪಡೆದುಕೊಂಡಿದೆ.
ವೈಎಸ್‌ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ. ಎಸ್. ಶರ್ಮಿಳಾ ತೆಲಂಗಾಣ ವಿಧಾನಸಭೆ ಚುನಾವಣೆ 2023ರಿಂದ ದೂರ ಉಳಿದಿದ್ದರು. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರವನ್ನು ಪಡೆದಿದೆ. ಚುನಾವಣೆ ಬಳಿಕ ಶರ್ಮಿಳಾ ಕಾಂಗ್ರೆಸ್ ಸೇರಿದ್ದರು.
ಕುತೂಹಲ ಮೂಡಿಸಿದ ರಾಜಕೀಯ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈ. ಎಸ್. ರಾಜಶೇಖರ ರೆಡ್ಡಿ ಪುತ್ರ ವೈ. ಎಸ್. ಶರ್ಮಿಳಾ ರಾಜಕೀಯವಾಗಿ ಸಹೋದರನ ಜೊತೆ ಗುರುತಿಸಿಕೊಂಡಿಲ್ಲ. ಸಹೋದರ ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಹಾಲಿ ಮುಖ್ಯಮಂತ್ರಿ.
ತೆಲಂಗಾಣ ಚುನಾವಣೆಗಾಗಿ ವೈಎಸ್ಆರ್ ತೆಲಂಗಾಣ ಪಕ್ಷ ಸ್ಥಾಪನೆ ಮಾಡಿದ್ದ ವೈ. ಎಸ್. ಶರ್ಮಿಳಾ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಣೆ ಮಾಡಿದ್ದರು. ಬಳಿಕ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದರು. ಜನವರಿ 4ರಂದು ಕಾಂಗ್ರೆಸ್ ಸೇರಿದ್ದರು.
ಈ ವರ್ಷದ ಮೇ ತಿಂಗಳಿನಲ್ಲಿ ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕರ್ನಾಟಕ, ತೆಲಂಗಾಣದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆದಿರುವ ಕಾಂಗ್ರೆಸ್ ಪಕ್ಷ ಆಂಧ್ರ ಪ್ರದೇಶದಲ್ಲಿಯೂ ಜಗನ್ ಮೋಹನ್ ರೆಡ್ಡಿ ಸೋಲಿಸಿ ಅಧಿಕಾರ ಪಡೆಯುವ ಉತ್ಸಾಹದಲ್ಲಿದೆ.
ಈ ಬಾರಿಯ ಆಂಧ್ರ ಪ್ರದೇಶ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಜಗನ್ ಮೋಹನ್ ರೆಡ್ಡಿ ಸೋಲಿಸಲು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಟಿಡಿಪಿಯ ಚಂದ್ರಬಾಬು ನಾಯ್ಡುಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಈಗ ಮುಖ್ಯಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ. ಎಸ್. ಶರ್ಮಿಳಾ ಪಕ್ಷದ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ದಿ. ವೈ. ಎಸ್. ರಾಜಶೇಖರ ರೆಡ್ಡಿ ಬೆಂಬಲಿಗರ ಜೊತೆ ಸರಣಿ ಸಭೆಗಳನ್ನು ನಡೆಸಿದ್ದ ವೈ. ಎಸ್. ಶರ್ಮಿಳಾ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಸ್ಥಾಪನೆ ಮಾಡಿ, ತೆಲಂಗಾಣ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ರಾಜ್ಯದಲ್ಲಿ ಪಾದಯಾತ್ರೆಯನ್ನು ಸಹ ಕೈಗೊಂಡಿದ್ದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರು.
2019ರ ಚುನಾವಣೆಯಲ್ಲಿ ವೈ. ಎಸ್. ಶರ್ಮಿಳಾ ತಾಯಿ ವಿಜಯಮ್ಮ ಜೊತೆ ಸೇರಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರವನ್ನು ನಡೆಸಿದ್ದರು. ಚುನಾವಣೆಯಲ್ಲಿ ಪಕ್ಷ ಜಯಗಳಿಸಿ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾದರು. ಜಗನ್ ಅವರಂತೆಯೇ ಸಾಕಷ್ಟು ಅಭಿಮಾನಿಗಳನ್ನು ಶರ್ಮಿಳಾ ರಾಜ್ಯದಲ್ಲಿ ಹೊಂದಿದ್ದಾರೆ.
ವೈಎಸ್ಆರ್ ಎಂದೇ ಖ್ಯಾತಿ ಪಡೆದಿದ್ದ ವೈ. ಎಸ್. ರಾಜಶೇಖರ ರೆಡ್ಡಿ 2004 ರಿಂದ 2009ರ ತನಕ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದರು. 2009ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ವೈಎಸ್ಆರ್ ಕಾಂಗ್ರೆಸ್ ಮೂಲಕ ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದಲ್ಲಿ ರಾಜಕೀಯದಲ್ಲಿ ಸಕ್ರಿಯರು.












Click it and Unblock the Notifications