ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು – ನಾರಾಯಣ ಮೂರ್ತಿ ಸಲಹೆ!
ದೆಹಲಿ ಅಕ್ಟೋಬರ್ 27: ಪ್ರಪಂಚದೊಂದಿಗೆ ಸ್ಪರ್ಧಿಸಲು ಕೆಲಸದ ಸಂಸ್ಕೃತಿ ಬದಲಾಗಬೇಕು. ಇದಕ್ಕಾಗಿ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಯುವ ಪೀಳಿಗೆಗೆ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಸಲಹೆಯನ್ನು ನೀಡಿದ್ದಾರೆ.
3one4 ಕ್ಯಾಪಿಟಲ್‌ನ ಪಾಡ್‌ಕಾಸ್ಟ್ 'ದಿ ರೆಕಾರ್ಡ್' ನಲ್ಲಿ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು ರಾಷ್ಟ್ರ ನಿರ್ಮಾಣದಿಂದ ತಂತ್ರಜ್ಞಾನ, ಇಂದಿನ ಯುವಜನತೆ ಮತ್ತು ಅವರ ಕಂಪನಿ ಇನ್ಫೋಸಿಸ್‌ನ ಅನೇಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂವಾದವನ್ನು ಸದ್ಯ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ವೇಳೆ ನಾರಾಯಣ ಮೂರ್ತಿ ಅವರು ಯುವಕರಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಕಳೆದ ಎರಡು-ಮೂರು ದಶಕಗಳಲ್ಲಿ ಆರ್ಥಿಕ ರಂಗದಲ್ಲಿ ಉತ್ತಮ ಪ್ರದರ್ಶನ ನೀಡಿದ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತವು ತನ್ನ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಬೇಕಾಗಿದೆ. ಇದಕ್ಕಾಗಿ ಯುವಕರು ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.
ಅವರ ಪ್ರಕಾರ, ಭಾರತದಲ್ಲಿ ಯುವಪೀಳಿಗೆ ಕೆಲಸದಲ್ಲಿ ಕಳೆಯುವ ಸಮಯ ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಇದನ್ನು ಹೆಚ್ಚಿಸಲು ದೇಶದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಎರಡನೆಯ ಮಹಾಯುದ್ಧದ ನಂತರ, ಜಪಾನ್ ಮತ್ತು ಜರ್ಮನಿ ಇದನ್ನು ಮಾಡುವ ಮೂಲಕ ಅಭಿವೃದ್ಧಿಯ ಪರ್ವವನ್ನು ಮುಟ್ಟಿದವು. ಹೀಗಾಗಿ ಇದನ್ನು ನಾವು ಅನುಸರಿಸಬೇಕು ಎಂದರು.

ಭಾರತದಲ್ಲಿ ಕೆಲಸದ ಉತ್ಪಾದಕತೆ ಏಕೆ ಕಡಿಮೆಯಾಗಿದೆ?
ಇದೇ ವೇಳೆ ಭಾರತದಲ್ಲಿ ಇಂದಿನ ಪೀಳಿಗೆ ಕೆಲಸದಲ್ಲಿ ಕಡಿಮೆ ಸಮಯವನ್ನು ಕಳೆಯುವುದಕ್ಕೆ ಕಾರಣಗಳನ್ನು ಸಹ ನಾರಾಯಣ ಮೂರ್ತಿ ಅವರು ವಿವರಿಸಿದರು. ಸರ್ಕಾರದ ಭ್ರಷ್ಟಾಚಾರ ಮತ್ತು ಅಧಿಕಾರಶಾಹಿಯಲ್ಲಿನ ವಿಳಂಬವು ಕಡಿಮೆ ಕೆಲಸದ ಉತ್ಪಾದಕತೆಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
"ಭಾರತದ ಕೆಲಸದ ಉತ್ಪಾದಕತೆ ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡದ ಹೊರತು ಮತ್ತು ಅಧಿಕಾರಶಾಹಿಯ ವಿಳಂಬವನ್ನು ನಿಗ್ರಹಿಸದ ಹೊರತು, ಪ್ರಚಂಡ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ನಾವು ಸ್ಪರ್ಧಿಸಲು ಸಾಧ್ಯವಿಲ್ಲ'' ಎಂದರು.
ಯುವಕರು ಮುಂದೆ ಬರಬೇಕು....
ಇದಕ್ಕಾಗಿ ದೇಶದ ಕಾರ್ಯ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ಮುಂದಾಗಬೇಕು. ಇದು ನನ್ನ ದೇಶ ಎಂದು ಹೇಳಲು ಯುವಜನರಿಗೆ ನಾನು ಮನವಿ ಮಾಡುತ್ತೇನೆ. ನಾನು ಕೂಡ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಅವರು ಹೇಳಿದರು.
ಎರಡನೇ ಮಹಾಯುದ್ಧದ ನಂತರ ಪಾತಾಳಕ್ಕಚ್ಚಿದ್ದ ಜಪಾನ್ ಮತ್ತು ಜರ್ಮನ್ ಹೇಗೆ ಮುಂದೆ ಬಂದವು ಎನ್ನುವ ಬಗ್ಗೆ ನಾರಾಯಣ ಮೂರ್ತಿ ಅವರು ವಿವರಿಸಿದರು. ಹಲವು ವರ್ಷಗಳವರೆಗೆ ಎರಡೂ ದೇಶಗಳು ತಮ್ಮ ನಾಗರಿಕರಿಗೆ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುವಂತೆ ಸೂಚನೆ ನೀಡಿದವು. ಇದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಿದರು. ಅವರ ಶ್ರಮದ ಫಲವೇ ಇವತ್ತು ಜಗತ್ತಿನಲ್ಲಿ ಅಭಿವೃದ್ಧಿಯಲ್ಲಿ ಜಪಾನ್ ಮತ್ತು ಜರ್ಮನ್ ಹೆಸರನ್ನು ನಾವು ತೆಗೆದುಳ್ಳುವಂತಾಗಿದೆ.
ಭಾರತದ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಯುವಕರಿದ್ದಾರೆ. ಆದ್ದರಿಂದ ದೇಶವನ್ನು ಪ್ರಗತಿಯ ಪಥದಲ್ಲಿ ಕ್ಷಿಪ್ರವಾಗಿ ಮುನ್ನಡೆಸುವ ಜವಾಬ್ದಾರಿಯೂ ಯುವಜನರ ಹೆಗಲ ಮೇಲಿದೆ. ದೇಶದ ಕೆಲಸದ ಸಂಸ್ಕೃತಿ ಬದಲಾಗಬೇಕು. ಇದು ಶಿಸ್ತು, ಕಠಿಣ ಪರಿಶ್ರಮ ಮತ್ತು ನಿರ್ಣಯವನ್ನು ಆಧರಿಸಿರಬೇಕು. ಇದು ಆಗದಿದ್ದಲ್ಲಿ ಸರ್ಕಾರಕ್ಕೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದರು.
ಜನರಂತೆ ಸರ್ಕಾರ
ಶಿಸ್ತು ರೂಢಿಸಿಕೊಂಡು ದುಡಿಮೆಯ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬೇಕು. ನಾವು ಇದನ್ನು ಮಾಡದ ಹೊರತು ಸರ್ಕಾರವೂ ನಮಗೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಜನರ ಸಂಸ್ಕೃತಿ ಹೇಗಿರುತ್ತದೆಯೋ ಸರ್ಕಾರವೂ ಹಾಗೆಯೇ ಇರುತ್ತದೆ. ಆದ್ದರಿಂದ ನಾವು ನಮ್ಮನ್ನು ಅತ್ಯಂತ ದೃಢನಿಶ್ಚಯವುಳ್ಳ, ಅತ್ಯಂತ ಶಿಸ್ತಿನ ಮತ್ತು ಅತ್ಯಂತ ಕಷ್ಟಪಟ್ಟು ದುಡಿಯುವ ಜನರಾಗಿ ಪರಿವರ್ತಿಸಬೇಕು. ಬದಲಾವಣೆ ಯುವಕರಿಂದಲೇ ಆರಂಭವಾಗಬೇಕು ಎಂದು ಅವರು ಕಿವಿಮಾತು ಹೇಳಿದರು.











Click it and Unblock the Notifications