ಮಗನಿಗೆ ಹೆಣ್ಣು ಹುಡುಕಿ: ಹರಿಯಾಣ ಮಹಿಳೆಯರಿಗೆ ಗುರುತರ ಜವಾಬ್ದಾರಿ ನೀಡಿದ ಸೋನಿಯಾ ಗಾಂಧಿ
ನವದೆಹಲಿ, ಜುಲೈ 29: ತಮ್ಮ ಪುತ್ರ ರಾಹುಲ್ ಗಾಂಧಿಗೆ ಹೆಣ್ಣು ಹುಡುಕುವಂತೆ ಹರಿಯಾಣ ಮಹಿಳೆಯರಿಗೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಹರಿಯಾಣದ ರೈತ ಮಹಿಳೆಯರ ಜೊತೆ ನಡೆದ ಸಂವಾದದಲ್ಲಿ ರಾಹುಲ್‌ಗೆ ಹೆಣ್ಣು ಹುಡುಕುವ ಜವಾಬ್ದಾರಿಯನ್ನು ಸೋನಿಯಾ ವಹಿಸಿದ್ದಾರೆ.
ದೆಹಲಿಯಲ್ಲಿರುವ ಸೋನಿಯಾ ನಿವಾಸಕ್ಕೆ ಬಂದಿದ್ದ ಮಹಿಳೆಯರು, ರಾಹುಲ್ ಗಾಂಧಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ರಾಹುಲ್ ಅವರಿಗೆ ನೀವೇ ಹೆಣ್ಣು ಹುಡುಕಿ ಎಂದು ಮಹಿಳೆಯರಿಗೆ ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಗಾಂಧಿ ಕುಟುಂಬದ ಸದಸ್ಯರನ್ನು ಹರಿಯಾಣದ ರೈತ ಮಹಿಳೆಯರು ಭೇಟಿಯಾಗಿ ಮಾತುಕತೆಯಲ್ಲಿ ತೊಡಗಿಕೊಂಡಿದ್ದರು.
ಕಳೆದ ತಿಂಗಳು ಹರಿಯಾಣದ ಸೋನಿಪತ್‌ನಲ್ಲಿ ರೈತ ಮಹಿಳೆಯರನ್ನು ರಾಹುಲ್ ಗಾಂಧಿ ಭೇಟಿ ಆಗಿದ್ದರು. ತಮ್ಮ ಮನೆಗೆ ಕರೆಸಿಕೊಂಡು ಅವರಿಗೆ ಉಪಹಾರ ನೀಡುವುದಾಗಿ ರೈತ ಮಹಿಳೆಯರಿಗೆ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈತ ಮಹಿಳೆಯರು ಸೋನಿಯಾ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಜುಲೈ 8 ರಂದು ಸೋನಿಪತ್‌ನ ಮದೀನಾ ಗ್ರಾಮದಲ್ಲಿ ರಾಹುಲ್ ಗಾಂಧಿ ಮಹಿಳೆಯರನ್ನು ಭೇಟಿಯಾಗಿದ್ದರು. ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಂವಾದ ನಡೆಸಿದ್ದರು.

ಇದೇ ವೇಳೆ, ರಾಹುಲ್ ಗಾಂಧಿ ಅವರು ಭತ್ತ ಬಿತ್ತನೆಯಲ್ಲಿ ಪಾಲ್ಗೊಂಡಿದ್ದರು. ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ್ದರು. ಹೊಲಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ತಂದ ಆಹಾರವನ್ನು ಸೇವಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಇದೇ ವೇಳೆ, ಮಹಿಳೆಯರು ದೆಹಲಿಯನ್ನು ನಾವು ನೋಡಿಲ್ಲವೆಂದು ರಾಹುಲ್ ಗಾಂಧಿ ಅವರಿಗೆ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು ದೆಹಲಿಗೆ ಕರೆಸಿಕೊಂಡು, ಉಪಹಾರ ನೀಡುವುದಾಗಿ ಭರವಸೆ ನೀಡಿದ್ದರು.
ತಮ್ಮ ಭೇಟಿಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯೊಂದಿಗೆ ಕೃಷಿ ಮಹಿಳೆಯರನ್ನು ಮಾತನಾಡುವಂತೆ ಮಾಡಿದ್ದರು ಮತ್ತು ಅವರು ತಮ್ಮ ನಿವಾಸಕ್ಕೆ ಊಟಕ್ಕೆ ಆಹ್ವಾನಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ರೈತ ಮಹಿಳೆಯರ ಭೇಟಿ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ನನಗೆ, ಅಮ್ಮನಿಗೆ ಹಾಗೂ ಪ್ರಿಯಾಂಕಾಗೆ ಇಂದು ನೆನಪಿಡುವ ದಿನ. ಸೋನಿಪತ್‌ನ ರೈತ ಸಹೋದರಿಯರ ದೆಹಲಿ ಭೇಟಿ, ಮನೆಯಲ್ಲಿ ಅವರೊಂದಿಗೆ ಮಧ್ಯಾಹ್ನದ ಊಟ ಮತ್ತು ಸಾಕಷ್ಟು ಮಾತುಕತೆ ನನಗೆ ಸಂತಸವನ್ನು ತಂದಿದೆ. ಇಂದು ನನಗೆ ಬೆಲೆಕಟ್ಟಲಾಗದ ಉಡುಗೊರೆಗಳು ಸಿಕ್ಕಿವೆ. ದೇಸಿ ತುಪ್ಪ, ಸಿಹಿ ಲಸ್ಸಿ, ಮನೆಯಲ್ಲಿ ಉಪ್ಪಿನಕಾಯಿ ಮತ್ತು ಬಹಳಷ್ಟು ಪ್ರೀತಿ ಸಿಕ್ಕಿದೆ' ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
'ರಾಹುಲ್ ಗಾಂಧಿಯವರು ಸೋನಿಪತ್‌ನ ರೈತ ಸಹೋದರಿಯರನ್ನು ದೆಹಲಿಗೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು. ರೈತ ಸಹೋದರಿಯರು ದೆಹಲಿಗೆ ಬಂದರು, ಭರವಸೆಯನ್ನು ಈಡೇರಿಸಲಾಗಿದೆ' ಎಂದು ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ.











Click it and Unblock the Notifications