ಸಂಪುಟ ಸಭೆ ಇಲ್ಲದಿದ್ರೂ ಯೋಗಿ ಆದೇಶಗಳ ರವಾನೆ ಸರಾಗ !
ಹೊಸದಾಗಿ ಮುಖ್ಯಮಂತ್ರಿಯಾದವರು ಸಂಪುಟ ರಚನೆಯಾದ ನಂತರ, ಸಂಪುಟ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದು ವಾಡಿಕೆ. ಆದರೆ, ಮಂತ್ರಿ ಮಂಡಲ ಅಸ್ತಿತ್ವಕ್ಕೆ ಬಂದು ಐದಾರು ದಿನಗಳೇ ಕಳೆದಿದ್ದರೂ, ಸಂಪುಟ ಸಭೆ ನಡೆಸಿಲ್ಲ.
ಲಕ್ನೋ, ಮಾರ್ಚ್ 27: ವಾರದ ಹಿಂದಷ್ಟೇ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಯೋಗಿ ಆದಿತ್ಯನಾಥ್ ಅವರು, ಕಳೆದ ಏಳು ದಿನಗಳ ತಮ್ಮ ಆಡಳಿತದಲ್ಲಿ ಕೈಗೊಂಡಿರುವ ಒಟ್ಟು ನಿರ್ಧಾರಗಳ ಸಂಖ್ಯೆ 50 ಎಂದು ಮೂಲಗಳು ತಿಳಿಸಿವೆ.
ಆದರೆ, ಅದಕ್ಕಿಂತಲೂ ಅಚ್ಚರಿಯ ವಿಚಾರ ಏನೆಂದರೆ, ಈ 50 ನಿರ್ಧಾರಗಳನ್ನು ಯಾವುದೇ ಸಂಪುಟ ಸಭೆ ನಡಸದೇ ಕೈಗೊಂಡಿರುವುದು ! ಹೌದು. ಮುಖ್ಯಮಂತ್ರಿಯಾದ ನಂತರ, ಯೋಗಿ ಆದಿತ್ಯನಾಥ್ ಅವರು ಈವರೆಗೂ ಒಂದೇ ಒಂದು ಸಂಪುಟ ಸಭೆ ನಡೆಸಿಲ್ಲ.[ಯೋಗಿ ವಿರುದ್ಧ ಉತ್ತರ ಪ್ರದೇಶದಲ್ಲಿ ಮಾಂಸ ಮಾರಾಟಗಾರರ ಮುಷ್ಕರ]

ಹೊಸದಾಗಿ ಮುಖ್ಯಮಂತ್ರಿಯಾದವರು ಸಂಪುಟ ರಚನೆಯಾದ ನಂತರ, ಸಂಪುಟ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದು ವಾಡಿಕೆ. ಆದರೆ, ಆದಿತ್ಯನಾಥ್ ಅವರ ಮಂತ್ರಿ ಮಂಡಲ ಅಸ್ತಿತ್ವಕ್ಕೆ ಬಂದು ಐದಾರು ದಿನಗಳೇ ಕಳೆದಿದ್ದರೂ, ಸಂಪುಟ ಸಭೆ ನಡೆಸಿಲ್ಲ. ಆದರೆ, ಮುಖ್ಯಮಂತ್ರಿ ಕಚೇರಿಯಿಂದ ಪುಂಖಾನುಪುಂಖವಾಗಿ ಆದೇಶಗಳು ಸಂಬಂಧಪಟ್ಟ ಇಲಾಖೆಗಳಿಗೆ ರವಾನೆಯಾಗುತ್ತಿವೆ ಎಂದು ಹೇಳಲಾಗುತ್ತಿದೆ.
ಅಂದರೆ, ಇದು ಮೇಲ್ನೋಟಕ್ಕೆ ಯೋಗಿ ಅವರು ಉತ್ತರ ಪ್ರದೇಶದ ಸರ್ಕಾರದ ಮೇಲೆ ಸಾಧಿಸಿರುವ ಹಿಡಿತ ಹಾಗೂ ಏಕಾಂಗಿ ನಿರ್ಧಾರಗಳನ್ನು ಬಿಂಬಿಸುತ್ತದೆ ಎಂದೂ ಅವಲೋಕಿಸಲಾಗಿದೆ. ಇದರ ಜತೆಯಲ್ಲೇ, ಯೋಗಿಯವರ ಈ ವೇಗದ ನಡೆ ಮುಂದೆ ಅವರಿಗೆ ತಿರುಗುಬಾಣವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications