Jammu & Kashmir Election: ಬಿಜೆಪಿ ಗೆದ್ದರೆ ಪಿಒಕೆ ಭಾರತದ ಭಾಗವಾಗಲಿದೆ; ಯೋಗಿ ಆದಿತ್ಯನಾಥ್ ಘೋಷಣೆ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ ಎರಡು ಹಂತದಲ್ಲಿ ಮತದಾನ ನಡೆದಿದ್ದು, ಕೊನೆಯ ಹಂತದ ಚುನಾವಣೆ ಅಕ್ಟೋಬರ್ 1ರಂದು ನಡೆಯಲಿದ್ದು, ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪಿಒಕೆ ಭಾರತದ ಭಾಗವಾಗಲಿದೆ ಎಂದು ಹೇಳಿದರು.
ಆರ್‌ಎಸ್ ಪುರ ಪ್ರದೇಶದಲ್ಲಿ ನಡೆದ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಪಿಒಕೆ ಕೂಡ ಭಾರತದ ಭಾಗವಾಗಲಿದೆ, ಪ್ರಜಾಪ್ರಭುತ್ವವನ್ನು ಉಳಿಸಲು ಪಾಕಿಸ್ತಾನ ಹೆಣಗಾಡುತ್ತಿದೆ, ಆ ದೇಶವೇ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದ್ದು, ಭಾರತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು.

ಈಗಾಗಲೇ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರತ್ಯೇಕತೆಯ ಬಗ್ಗೆ ಧ್ವನಿ ಎತ್ತಿದೆ. ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ ಜೊತೆಯಲ್ಲೇ ಮುಜಫರಾಬಾದ್‌ನಲ್ಲೂ ಚುನಾವಣೆ ನಡೆದಿದ್ದರೆ ಬಲವಾದ ಸಂದೇಶ ನೀಡಿದಂತಾಗುತ್ತಿತ್ತು ಎಂದು ಜನ ಹೇಳುತ್ತಿದ್ದಾರೆ. ಪಾಕಿಸ್ತಾನದ ಜೊತೆ ನಮ್ಮ ಹೊಂದಾಣಿಕೆ ಸರಿ ಹೋಗುವುದಿಲ್ಲ ಎನ್ನುವುದು ಈಗಾಗಲೇ ಅರಿವಾಗಿದೆ, ಪಾಕಿಸ್ತಾನವನ್ನು ಮಾನವೀಯತೆಯ ಕ್ಯಾನ್ಸರ್ ಎಂದು ಜನ ಹೇಳುತ್ತಿದ್ದು ಅದನ್ನು ತೊಡೆದುಹಾಕಲು ಜಗತ್ತು ಶ್ರಮಿಸಬೇಕು, ಪಾಕಿಸ್ತಾನವೇ ಈಗ ಭಿಕ್ಷೆ ಬೇಡುತ್ತಿದೆ, ಅದೊಂದು ಮುಳುಗುವ ಹಡಗು ಎಂದರು.
ಉಚಿತ ಪಡಿತರ ಯೋಜನೆ ಬಗ್ಗೆ ಪ್ರಸ್ತಾಪ
ಭಾರತದ ಉಚಿತ ಪಡಿತರ ಯೋಜನೆ ಬಗ್ಗೆ ಕೂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಸ್ತಾಪಿಸಿದರು. ಭಾರತದಲ್ಲಿ 80 ಕೋಟಿ ಜನ ಉಚಿತ ಪಡಿತರ ಪಡೆಯುತ್ತಿದ್ದರೆ ಪಾಕಿಸ್ತಾನದಲ್ಲಿ ಮಾತ್ರ ಆಹಾರದ ಕೊರತೆ ಎದುರಾಗಿದೆ. ನವಭಾರತದಲ್ಲಿ ಜಮ್ಮು ಮತ್ತು ಕಾಶ್ಮಿರ ಭಯೋತ್ಪಾದನಾ ರಾಜ್ಯದಿಂದ ಪ್ರವಾಸೋದ್ಯಮ ತಾಣವಾಗಿ ಬದಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್, ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಆಡಳಿತವಿದ್ದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಮನವಿ ಮಾಡಬೇಕಿತ್ತು, ಆದರೆ ಈಗ ಜಮ್ಮು ಮತ್ತು ಕಾಶ್ಮಿರದಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದೆ. ಅಮರನಾಥ ಯಾತ್ರಗೆ ಅವಕಾಶ ನೀಡುವುದಿಲ್ಲ ಎಂದು ಮೊದಲು ಬೆದರಿಕೆ ಹಾಕುತ್ತಿದ್ದರು, ಈಗ ಬಾಬಾ ಬರ್ಫಾನಿ ಮತ್ತು ಮಾತಾ ವೈಷ್ಣೋದೇವಿಯನ್ನು ನೋಡಲು ಭಾರತ ಮಾತ್ರವಲ್ಲದೆ ವಿದೇಶದಿಂದ ಕೂಡ ಭಕ್ತರು ಬರುತ್ತಿದ್ದಾರೆ ಎಂದರು.
ಕಾಂಗ್ರೆಸ್, ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದನೆಯ ತಾಣವನ್ನಾಗಿ ಮಾಡಿದ್ದರು ಎಂದು ಯೋಗಿ ಆದಿತ್ಯನಾಥ್ ಕಿಡಿಕಾರಿದರು. ಆದರೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕಲಾಗಿದೆ. ಕಲ್ಲು ತೂರಾಟ ಮಾಡುವವರು ಕಣ್ಮರೆಯಾಗಿದ್ದಾರೆ. ಇಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಯುತ್ತಿರುವುದನ್ನು ಜಗತ್ತು ನೋಡುತ್ತಿದೆ ಎಂದು ಹೇಳಿದರು.












Click it and Unblock the Notifications