ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೇಸ್: ಯತಿಗೆ ಜಾಮೀನು
ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಯತಿ ನರಸಿಂಗಾನಂದ ಅವರಿಗೆ ಜಾಮೀನು ಮಂಜೂರಾಗಿದೆ. ಇದರ ಬೆನ್ನಲ್ಲೇ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಯತಿ ನರಸಿಂಗಾನಂದಗೆ ಹರಿದ್ವಾರ ಸೆಷನ್ಸ್ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರಾಗಿದೆ. ಉತ್ತರಾಖಂಡ್ ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಯತಿ ನರಸಿಂಗಾನಂದ ಅವರಿಗೆ ಜಾಮೀನು ಸಿಕ್ಕಿರುವುದು ಹಲವರ ಹುಬ್ಬೇರಿಸಿದೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಪರಮಾಪ್ತ ಗುಂಪಿನಲ್ಲಿ ನರಸಿಂಗಾನಂದ ಕೂಡಾ ಸೇರಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ ಬರುವಂಥ ಹೇಳಿಕೆ ನೀಡುವುದು, ಪ್ರಚೋದನಾಕಾರಿ ಭಾಷಣ ಮಾಡದಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ತನಿಖಾಧಿಕಾರಿಗಳಿಗೆ ಸಹಕರಿಸಬೇಕು ಎಂದು ನ್ಯಾಯಾಲಯವು ಸೂಚಿಸಿದೆ.
ಹರಿದ್ವಾರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಭರತ್ ಭೂಷಣ್ ಪಾಂಡೆ ಜಾಮೀನು ಅರ್ಜಿಯನ್ನು ಪುರಸ್ಕರಿಸಿದರು.
ದೇವಸ್ಥಾನದ ಆವರಣದೊಳಗೆ ಕುಳಿತು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದ ಆಧಾರದ ಮೇಲೆ ನರಸಿಂಗಾನಂದ ಅವರನ್ನು ಬಂಧಿಸಲಾಗಿತ್ತು.

ಐಪಿಸಿ ಸೆಕ್ಷನ್ 295ಎ (ಯಾವುದೇ ಸಮುದಾಯದ ಧಾರ್ಮಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶಪೂರ್ವಕ ಕೃತ್ಯ) ಸೆಕ್ಷನ್ 509ರ ಅಡಿ (ಮಹಿಳೆಯರ ಘನತೆಗೆ ಧಕ್ಕೆ ತರುವ ಪದ, ಸನ್ನೆ ಅಥವಾ ಕೃತ್ಯ ಎಸಗುವುದು) ನರಸಿಂಗಾನಂದ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಆರಂಭದಲ್ಲಿ ಪ್ರಸ್ತುತ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನರಸಿಂಗಾನಂದ ಅವರನ್ನು ಬಂಧಿಸಲಾಯಿತು. ನಂತರ ಹರಿದ್ವಾರ ಧರ್ಮ ಸಂಸದ್‌ನಲ್ಲಿ ದ್ವೇಷಪೂರಿತ ಭಾಷಣಕ್ಕಾಗಿ ಅವರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಲಾಯಿತು, ಆ ಪ್ರಕರಣದಲ್ಲಿ ಫೆಬ್ರವರಿ 7 ರಂದು ಜಾಮೀನು ನೀಡಲಾಗಿತ್ತು.
ಇದಕ್ಕೂ ಮುನ್ನ, ವಿವಾದಿತ ಹರಿದ್ವಾರ ಧರ್ಮ ಸಂಸದ್ ದ್ವೇಷ ಭಾಷಣ ಪ್ರಕರಣದಲ್ಲಿ ದಾಸ್ನಾ ದೇವಸ್ಥಾನದ ಮುಖ್ಯ ಅರ್ಚಕ ಯತಿ ನರಸಿಂಗಾನಂದ ಅವರನ್ನು ಜನವರಿ 15ರಂದು ಬಂಧಿಸಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ನರಸಿಂಗಾನಂದಗೆ ಜಾಮೀನು ಸಿಕ್ಕಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಆಪ್ತರಾದ ಅನೇಕ ಯತಿಗಳು ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡುವ ಸಾಧ್ಯತೆಯಿದ್ದು, ಉಭಯ ರಾಜ್ಯಗಳಲ್ಲಿ ಬಿಜೆಪಿಗೆ ಮುಜುಗರ ತಂದೊಡ್ಡಿದೆ. ಉತ್ತರಾಖಂಡ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲಿಗೆ ದ್ವೇಷ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಮುಖಂಡ ಹರೀಶ್ ರಾವತ್ ಈಗಾಗಲೇ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಹಿಂದೆ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಹೊತ್ತಿರುವ ಯತಿ ನರಸಿಂಗಾನಂದ ಅವರ ಜಾಮೀನು ಅರ್ಜಿಯನ್ನು ಹರಿದ್ವಾರದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ತಿರಸ್ಕರಿಸಿತ್ತು.
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 (ಧಾರ್ಮಿಕ ಭಾವನೆ ಕೆರಳಿಸುವ ಸಲುವಾಗಿ ಮಾಡುವ ದುರುದ್ದೇಶಪೂರ್ವಕ ಕೃತ್ಯಗಳು), 509 (ಯಾವುದೇ ಮಹಿಳೆಯ ಘನತೆಗೆ ಧಕ್ಕೆ ತರುವುದು), 323 (ಸ್ವಯಂಪ್ರೇರಿತವಾಗಿ ಘಾಸಿ ಉಂಟು ಮಾಡುವುದು), 504 (ಶಾಂತಿ ಭಂಗ) ಮತ್ತು 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ವೈಷಮ್ಯ ಬೆಳೆಸುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.
ಡಿಸೆಂಬರ್ 17 ರಿಂದ 20 ರವರೆಗೆ ನಡೆದ ಹರಿದ್ವಾರದ ಕಾರ್ಯಕ್ರಮದಲ್ಲಿ ಮಾಡಿದ ದ್ವೇಷ ಭಾಷಣದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದ್ವೇಷ ಭಾಷಣದ ವಿರುದ್ಧ ಅನೇಕರ ವಿರೋಧ ವ್ಯಕ್ತವಾಗಿತ್ತು.
ಆದರೆ ಕಾರ್ಯಕ್ರಮವನ್ನು ಆಯೋಜಿಸಿದವರು ಮತ್ತು ದ್ವೇಷದ ಭಾಷಣಗಳನ್ನು ನೀಡಿದವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.












Click it and Unblock the Notifications