ಯಶವಂತ್ ಸಿನ್ಹಾ ಬೆಂಬಲಕ್ಕೆ ಧಾವಿಸಿದ ಶತ್ರುಘ್ನ ಸಿನ್ಹಾ
ನವದೆಹಲಿ, ಸೆಪ್ಟೆಂಬರ್ 28: ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಹರಿಹಾಯ್ದಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾರನ್ನು ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಬೆಂಬಲಿಸಿದ್ದಾರೆ.
ಬುಧವಾರ ಲೇಖನವೊಂದನ್ನು ಬರೆದಿದ್ದ ಯಶವಂತ ಸಿನ್ಹಾ ದೇಶದ 'ಅರ್ಥ ವ್ಯವಸ್ಥೆ ಅಸ್ತವ್ಯಸ್ತವಾಗಿದೆ' ಎಂದಿದ್ದರು. ಇದಕ್ಕೀಗ ಶತ್ರುಘ್ನ ಸಿನ್ಹಾ ಕೂಡ ಧ್ವನಿಗೂಡಿಸಿದ್ದಾರೆ.

ಯಶವಂತ್ ಸಿನ್ಹಾ ಸರಿಯಾದ ಟೀಕೆ ಮಾಡಿದ್ದು, ಆರ್ಥಿಕ ವೈಫಲ್ಯಕ್ಕೆ ಕನ್ನಡಿ ಹಿಡಿದಿದ್ದಾರೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ. ಈ ಮೂಲಕ ಯಶವಂತ್ ಸಿನ್ಹಾ ಬೆಂಬಲಕ್ಕೆ ಧಾವಿಸಿದ ಮೊದಲ ಬಿಜೆಪಿಗರಾಗಿ ಶತ್ರುಘ್ನ ಸಿನ್ಹಾ ಗುರುತಿಸಿಕೊಂಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಶತ್ರುಘ್ನಾ ಸಿನ್ಹಾ, ಬಹಿರಂಗವಾಗಿ ತಪ್ಪನ್ನು ಖಂಡಿಸಿದ್ದಕ್ಕೆ ಯಶವಂತ್ ಸಿನ್ಹಾರನ್ನು ಅಭಿನಂದಿಸಬೇಕು ಎಂದೂ ಹೇಳಿದ್ದಾರೆ. ಪಕ್ಷದ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಯಶವಂತ್ ಸಿನ್ಹಾ ಮಾತನಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ
'ನಾನು ಈಗ ಮಾತನಾಡಲೇಬೇಕು' ಶೀರ್ಷಿಕೆಯಲ್ಲಿ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಯಶವಂತ್ ಸಿನ್ಹಾ, ಕೇಂದ್ರದ ಆರ್ಥಿಕ ನೀತಿಯನ್ನು ವಿಮರ್ಶೆಗೆ ಒಳಪಡಿಸಿದ್ದರು. ಆರ್ಥಿಕ ವ್ಯವಸ್ಥೆ ಕುಸಿಯುತ್ತಲೇ ಸಾಗುತ್ತಿದೆ ಎಂಬುದು ಬಿಜೆಪಿಯಲ್ಲಿರುವ ಹಲವರಿಗೆ ತಿಳಿದಿದೆ. ಆದರೆ ಭಯದಿಂದಾಗಿ ಯಾರೂ ಮಾತನಾಡುತ್ತಿಲ್ಲ ಎಂದು ಸಿನ್ಹಾ ಹೇಳಿದ್ದರು.
Hope, wish & pray that all those people who matter in our party ponder over what has been said by Mr. Yashwant Sinha...1>2
— Shatrughan Sinha (@ShatruganSinha) September 28, 2017
ಯಶವಂತ್ ಸಿನ್ಹಾ ಲೇಖನ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರಕಾರದ ವಿರುದ್ಧ ಜನ ಹರಿಹಾಯ್ದಿದ್ದರು.
ಆದರೆ ತಂದೆಯ ನಿಲುವನ್ನು ತಳ್ಳಿ ಹಾಕಿದ್ದ ಕೇಂದ್ರ ಸಚಿವ ಜಯಂತ್ ಸಿನ್ಹಾ, ದೇಶದ ಆರ್ಥಿಕತೆ ಸುಭದ್ರವಾಗಿದೆ ಎನ್ನುವ ಅರ್ಥದಲ್ಲಿ ಹೇಳಿಕೆಯನ್ನೂ ನೀಡಿದ್ದರು.












Click it and Unblock the Notifications