45 ವರ್ಷಗಳಲ್ಲಿ ಮೊದಲ ಬಾರಿ ತಾಜ್ ಮಹಲ್ ಗೋಡೆಯನ್ನು ಮುಟ್ಟಿದ ಯಮುನಾ ನದಿ ನೀರು
ನವದೆಹಲಿ, ಜುಲೈ. 18: ಯಮುನಾ ನದಿ ತನ್ನ ಅಕ್ಕ ಪಕ್ಕದ ತಗ್ಗು ಪ್ರದೇಶಗಳಲ್ಲಿ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಭಾರೀ ವಿನಾಶವನ್ನೇ ಉಂಟುಮಾಡಿದೆ. 45 ವರ್ಷಗಳಲ್ಲಿ ಮೊದಲ ಬಾರಿಗೆ ತಾಜ್ ಮಹಲ್ ಗೋಡೆಗಳನ್ನು ಯಮುನಾ ನದಿ ನೀರು ಮುಟ್ಟಿದೆ. ನದಿಯು ಆಗ್ರಾದಲ್ಲಿ 495 ಅಡಿಗಳ 'ಕಡಿಮೆ ಮಟ್ಟದ ಪ್ರವಾಹ'ದ ಮಾರ್ಕ್ ಅನ್ನು ದಾಟಿದೆ ಮತ್ತು 499.1 ಅಡಿ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದೃಶ್ಯಗಳ ಪ್ರಕಾರ, ಯಮುನೆಯ ನೀರು ಭವ್ಯವಾದ ತಾಜ್ ಮಹಲ್ ಸ್ಮಾರಕದ ಹಿಂದೆ ಇರುವ ಉದ್ಯಾನವನ್ನು ಮುಳುಗಿಸುತ್ತಿರುವುದನ್ನು ಕಾಣಬಹುದು. 1978 ರ ಪ್ರವಾಹದ ಸಮಯದಲ್ಲಿ ಯಮುನಾ ವಿಶ್ವ ಪರಂಪರೆಯ ತಾಣದ ಗೋಡೆಗಳನ್ನು ಕೊನೆಯ ಬಾರಿಗೆ ಸಮೀಪಿಸಿತ್ತು. ನೀರಿನ ಮಟ್ಟವು 495 ಅಡಿಗಳ 'ಕಡಿಮೆ ಪ್ರವಾಹ ಮಟ್ಟವನ್ನು' ಮೀರಿ 497.9 ಅಡಿಗಳನ್ನು ತಲುಪಿತ್ತು.

''ಕಳೆದ 3 ದಿನಗಳಿಂದ ನಿರಂತರವಾಗಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎಲ್ಲೆಲ್ಲಿ ನೀರಿನ ಹರಿವು ಹೆಚ್ಚಿದೆಯೋ ಅಲ್ಲೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಆಗ್ರಾದ ಮುನ್ಸಿಪಲ್ ಕಮಿಷನರ್ ಅಂಕಿತ್ ಖಂಡೇಲ್ವಾಲ್ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಮುಂಜಾಗ್ರತಾ ಕ್ರಮವಾಗಿ ಸಿಕಂದ್ರದ ಕೈಲಾಸ ದೇಗುಲದಿಂದ ತಾಜ್ ಮಹಲ್ ಬಳಿಯ ದಸರಾ ಘಾಟ್ ವರೆಗೆ ನದಿ ಘಾಟ್‌ಗಳಲ್ಲಿ ಪ್ರವಾಹ ತಡೆಯಲು ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಆಗ್ರಾದಲ್ಲಿ ಪ್ರವಾಹದಂತಹ ಪರಿಸ್ಥಿತಿಯ ನಡುವೆ ಅಧಿಕಾರಿಗಳು ಪರಿಹಾರ ಸಿದ್ಧತೆಯನ್ನು ಹೆಚ್ಚಿಸಿದ್ದಾರೆ.
ನದಿಯು ನೀರಿನ ಮಟ್ಟ ಹೆಚ್ಚಾಗಲು ಪ್ರಾರಂಭಿಸಿ ಹತ್ತಿರದ ರಸ್ತೆಗಳು ಮತ್ತು ತಾಜ್‌ಗಂಜ್‌ನ ಸ್ಮಾರಕವನ್ನು ಮುಳುಗಿಸಿತು ಮತ್ತು ಇತ್ಮದ್ - ಉದ್ - ದೌಲಾ ಸ್ಮಾರಕದ ಗೋಡೆಯನ್ನು ಮುಟ್ಟಿತು. ತಾಜ್ ಮಹಲ್‌ಗೆ ಹೋಗುವ ಯಮುನಾ ಕಿನಾರಾ ರಸ್ತೆಯು ಪ್ರವಾಹಕ್ಕೆ ಒಳಗಾಗಿದೆ. ಚರಂಡಿಗಳ ಹಿಮ್ಮುಖ ಹರಿವಿನಿಂದ ಜಲಾವೃತವಾಗಿದೆ ಎಂದು ಪಿಟಿಐ ವರದಿ ಮಾಡಿದೆ.

"ಭಾನುವಾರ ಸಂಜೆ 4 ಗಂಟೆಗೆ ಯಮುನಾದಲ್ಲಿ ನೀರಿನ ಮಟ್ಟ 495.8 ಅಡಿ ಇತ್ತು. ಆಗ್ರಾದಲ್ಲಿ ಈ ನದಿಯ ಕಡಿಮೆ ಪ್ರವಾಹ ಮಟ್ಟ 495 ಅಡಿಗಳಾಗಿದ್ದು, ಇದನ್ನು ದಾಟಿದೆ. ಇಲ್ಲಿ ಮಧ್ಯಮ ಪ್ರವಾಹ ಮಟ್ಟ 499 ಅಡಿ ಮತ್ತು ಹೆಚ್ಚಿನ ಪ್ರವಾಹ ಮಟ್ಟ 508 ಅಡಿಗಳಲ್ಲಿದೆ" ಎಂದು ಎಡಿಎಂ (ಹಣಕಾಸು ಮತ್ತು ಕಂದಾಯ) ಅಧಿಕಾರಿ ಯಶವರ್ಧನ್ ಶ್ರೀವಾಸ್ತವ್ ಪಿಟಿಐಗೆ ತಿಳಿಸಿದ್ದಾರೆ.
"ಪ್ರವಾಹದಂತಹ ಪರಿಸ್ಥಿತಿ ಉದ್ಭವಿಸಿದರೆ ಅದನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ. ಪೋಸ್ಟ್‌ಗಳನ್ನು ರಚಿಸಲಾಗಿದೆ ಮತ್ತು ಬೋಟ್‌ಮೆನ್‌ಗಳು ಮತ್ತು ಡೈವರ್‌ಗಳು ಈ ಬಗ್ಗೆ ಜಾಗರೂಕರಾಗಿದ್ದಾರೆ. ತಗ್ಗು ಪ್ರದೇಶಗಳಲ್ಲಿರುವ ಸ್ಥಳೀಯರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.
ಅಧಿಕಾರಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಎರಡು ಬ್ಯಾರೇಜ್‌ಗಳಿಂದ ನೀರು ಬಿಡುಗಡೆ ಮಾಡಿದ್ದರಿಂದ ಯಮುನೆಯ ನೀರಿನ ಮಟ್ಟ ಏರಿಕೆಯಾಗಿದೆ. ಓಖ್ಲಾ ಬ್ಯಾರೇಜ್‌ನಿಂದ 1,06,473 ಕ್ಯೂಸೆಕ್ ಮತ್ತು ಮಥುರಾದ ಗೋಕುಲ್ ಬ್ಯಾರೇಜ್‌ನಿಂದ 1,24,302 ಕ್ಯೂಸೆಕ್ ನೀರು ಬಿಎಉಗಡೆ ಮಾಡಲಾಗಿದೆ. ಎಲ್ಲಾ ಏಳು ಗೇಟ್‌ಗಳನ್ನು ತೆರೆಯಲಾಗಿದೆ.
ಇತ್ತ, ಏರುತ್ತಿರುವ ನೀರಿನ ಮಟ್ಟವು ಯಮುನಾ ನದಿಯಲ್ಲಿ ನಡೆಯುತ್ತಿರುವ ಮಾಲಿನ್ಯದ ಸಮಸ್ಯೆಯನ್ನು ಎತ್ತಿ ತೋರಿಸಿದೆ. ಕಲುಷಿತ ನೀರನ್ನು ತಾಜ್ ಮಹಲ್‌ಗೆ ಗಮನಾರ್ಹ ಅಪಾಯವೆಂದು ಗುರುತಿಸಲಾಗಿದೆ. ಕಲುಷಿತ ನೀರು ವಿಶ್ವ ವಿಖ್ಯಾತ ಸ್ಮಾರಕದ ಬಣ್ಣ ಮತ್ತು ಗೋಡೆಗಳು ಹಾಳಾಗಲು ಕಾರಣವಾಗಿದೆ ಎನ್ನಲಾಗಿದೆ.












Click it and Unblock the Notifications