ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಕೂಬ್ ಕೇಸಿನಲ್ಲಿ ನ್ಯಾ. ಕುರಿಯನ್ ಅಪಸ್ವರ ಹಾಡಿದ್ದೇಕೆ?

By Prasad
|
Google Oneindia Kannada News

ನವದೆಹಲಿ, ಜುಲೈ 28 : ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಜೋಸೆಫ್ ಕುರಿಯನ್ ಅವರು ಎತ್ತಿರುವ ಹೊಸ ಸಂಗತಿ ಮತ್ತು ನೀಡಿರುವ ನಿರ್ಣಯದಿಂದಾಗಿ, ಇನ್ನೆರಡು ದಿನಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಲಿರುವ ಪಾತಕಿ ಯಾಕೂಬ್ ಮೆಮನ್‌ಗೆ ನಾಗಪುರ ಜೈಲಿನಲ್ಲಿಯೇ ಸಕ್ಕರೆ ಹಾಕಿ ಹಾಲು ಕುಡಿದಂತಾಗಿದೆ.

1993ರ ಮುಂಬೈ ಸರಣಿ ಸ್ಫೋಟದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಪ್ರಮುಖನಾಗಿರುವ ಯಾಕೂಬ್ ಮೆಮನ್ ಸಲ್ಲಿಸಿದ್ದ ಮೇಲ್ಮನವಿಯನ್ನು (W.P. [crl] 129/2015) ವಿಚಾರಣೆಗೆ ತೆಗೆದುಕೊಂಡಿದ್ದ ದ್ವಿಸದಸ್ಯ ಪೀಠದ ಸದಸ್ಯ ನ್ಯಾಯಮೂರ್ತಿ ಜೋಸೆಫ್ ಕುರಿಯನ್ ಕೆಲ ಪ್ರಶ್ನೆಗಳನ್ನು ಎತ್ತಿರುವುದು ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ.

ಈಗಾಗಲೆ ನೀಡಲಾಗಿರುವ ಡೆತ್ ವಾರಂಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಜುಲೈ 30ರಂದು ಗಲ್ಲಿಗೇರಿಸುವ ಪ್ರಕ್ರಿಯೆಯನ್ನು ತಡೆಯಲು ನ್ಯಾಯಮೂರ್ತಿ ಎಆರ್ ದಾವೆ ಅವರು ನಿರಾಕರಿಸಿದರೆ, ತಾವು ಎತ್ತಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗುವವರೆಗೆ ಗಲ್ಲು ಶಿಕ್ಷೆ ನೀಡಬಾರದು ಎಂಬುದು ನ್ಯಾಯಮೂರ್ತಿ ಜೋಸೆಫ್ ಕುರಿಯನ್ ಅವರ ತೀರ್ಮಾನವಾಗಿದೆ. [ನೇಣು ಕುಣಿಕೆಯಿಂದ ಯಾಕೂಬ್ ಗೆ ತಾತ್ಕಾಲಿಕ ರಿಲೀಫ್]


ನ್ಯಾ. ಕುರಿಯನ್ ಎತ್ತಿರುವ ಪ್ರಶ್ನೆ : ಯಾಕೂಬ್‌ನ ಕ್ಯೂರೇಟಿವ್ ಅರ್ಜಿಯನ್ನು ತ್ರಿಸದಸ್ಯ ಪೀಠ ಜುಲೈ 21ರಂದು ಅಸಮಂಜಸವಾಗಿ ತಳ್ಳಿಹಾಕಿದೆ. ಕ್ಯೂರೇಟಿವ್ ಅರ್ಜಿ ತಳ್ಳಿಹಾಕಿದ ತೀರ್ಪನ್ನು ಪುನರ್ ಪರಿಶೀಲನಾ ಅರ್ಜಿಯನ್ನು ಆಲಿಸಿದ್ದ ಇನ್ನಿಬ್ಬರು ನ್ಯಾಯಮೂರ್ತಿಗಳಿಗೆ ನೀಡಿದ್ದಿಲ್ಲ ಎಂಬುದು ನ್ಯಾ. ಕುರಿಯನ್ ಅವರು ಎತ್ತಿರುವ ಪ್ರಶ್ನೆ.

ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾ. ಚಾಮಲೇಶ್ವರ್, ನ್ಯಾ. ಕುರಿಯನ್ ಮತ್ತು ನ್ಯಾ. ದಾವೆ ಆಲಿಸಿದ್ದರು. ಆದರೆ, ಕ್ಯೂರೇಟಿವ್ ಅರ್ಜಿ ಆಲಿಸಿದ್ದ ವಿಭಾಗೀಯ ಪೀಠದಲ್ಲಿ ನ್ಯಾ. ದಾವೆ ಮಾತ್ರ ಇದ್ದರು, ಉಳಿದಿಬ್ಬರು ನ್ಯಾಯಮೂರ್ತಿಗಳಾದ ಚಾಮಲೇಶ್ವರ್ ಮತ್ತು ಕುರಿಯನ್ ಇರಲಿಲ್ಲ. ಇದೇ ಸಂಗತಿ ಈಗ ಕಗ್ಗಂಟಾಗಿರುವುದು.

ನ್ಯಾ.ಕುರಿಯನ್ ಅವರ ಈ ವಾದ ಮಹಾರಾಷ್ಟ್ರ ಸರಕಾರದ ಪರ ವಾದ ಮಂಡಿಸುತ್ತಿದ್ದ ಅಡ್ವೊಕೇಟ್ ಜನರಲ್ ಮುಕುಲ್ ರೋಹತ್ಗಿ ಅವರನ್ನು ಮಾತ್ರ ಆಶ್ಚರ್ಯ ಚಕಿತಗೊಳಿಸಲಿಲ್ಲ, ಯಾಕೂಬ್ ಮೆಮನ್ ಪರ ವಾದ ಮಂಡಿಸುತ್ತಿದ್ದ ರಾಮಚಂದ್ರನ್ ಅವರನ್ನು ಕೂಡ ಅಚ್ಚರಿಗೆ ತಳ್ಳಿತು. [ಸಲ್ಲೂ ವಿರುದ್ಧ ಬಿಜೆಪಿ ಪ್ರತಿಭಟನೆ]

ಯಾಕೂಬ್ ಪರ ವಕೀಲರಾದ ರಾಮಚಂದ್ರನ್ ಇನ್ನೆರಡು ಸಂಗತಿಗಳನ್ನು ಇಲ್ಲಿ ಎತ್ತಿದ್ದಾರೆ. ಒಂದು, ಯಾಕೂಬ್ ಕ್ಯೂರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸುವ ಮೊದಲೇ ಡೆತ್ ವಾರಂಟ್ ಹೊರಡಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ನೀಡಿರುವ ತೀರ್ಪಿನ ಪ್ರಕಾರ, ಕ್ಯೂರೇಟಿವ್ ಅರ್ಜಿ ವಿಚಾರಣೆ ಇನ್ನೂ ಚಾಲ್ತಿಯಲ್ಲಿದ್ದಾಗ ಡೆತ್ ವಾರಂಟ್ ಹೊರಡಿಸುವುದು ಕಾನೂನಿಗೆ ವಿರುದ್ಧ.

ಎರಡು, ಜುಲೈ 21ರಂದು ಕ್ಯೂರೇಟಿವ್ ಅರ್ಜಿ ತಿರಸ್ಕೃತವಾಗಿದ್ದರಿಂದ, ಮಹಾರಾಷ್ಟ್ರ ರಾಜ್ಯಪಾಲ ಮತ್ತು ಭಾರತದ ರಾಷ್ಟ್ರಪತಿ ತಿರಸ್ಕರಿಸಿದ್ದ ಕ್ಷಮಾಪಣಾ ಅರ್ಜಿಗಳೂ ಲೆಕ್ಕಕ್ಕಿಲ್ಲದಂತಾಗಿವೆ. ಈ ಕಾರಣದಿಂದಾಗಿ ಯಾಕೂಬ್ ಮೆಮನ್ ಮತ್ತೊಬ್ಬ ಕ್ಷಮಾಪಣಾ ಅರ್ಜಿ ಸಲ್ಲಿಸಲು ಅರ್ಹ ಎಂಬುದು.

ಒಟ್ಟಿನಲ್ಲಿ ಈ ಪ್ರಕರಣ ಈಗ ಮುಖ್ಯ ನ್ಯಾಯಮೂರ್ತಿ ದತ್ತು ಅವರ ಅಂಗಳಕ್ಕೆ ಬಂದಿದ್ದು, ಅವರು ನಿಯೋಜಿಸಲಿರುವ ತ್ರಿಸದಸ್ಯ ಪೀಠ ಈ ಗೊಂದಲಗಳಿಗೆ ಇತಿಶ್ರೀ ಹಾಡಬೇಕಾಗಿದೆ. ಇದು ತೀರ್ಮಾನವಾದ ನಂತರವಷ್ಟೇ ಯಾಕೂಬ್ ಮೆಮನ್ ನನ್ನು ನಾಗಪುರ ಜೈಲಿನಲ್ಲಿ ಗಲ್ಲಿಗೇರಿಸಲು ಸಾಧ್ಯ. [ಕಸಬ್‌ನಿಗೆ ವಿದಾಯ ಹೇಳಿದ ವ್ಯಕ್ತಿಯೇ ಯಾಕೂಬ್ ಕತ್ತಿನ ಹಗ್ಗ ಎಳೆಯಲಿದ್ದಾನೆ]

English summary
Justice Joseph Kurian has given unexpected twist to the case of Yakub Memon death sentence. He has said that Curative petition of Yakub Memon was improperly dismissed and the judgement was not circulated to other two judges who heard review petition in Supreme Court of India. Yakub was supposed to be hanged on July 30th at Nagpur jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X