ಜೂನ್ 15 ರವರೆಗೆ ಪ್ರತಿಭಟನೆ ಸ್ಥಗಿತಗೊಳಿಸಲು ಕುಸ್ತಿಪಟುಗಳ ಒಪ್ಪಿಗೆ: ಪ್ರಕರಣ ಕೈಬಿಡುತ್ತೇವೆ ಎಂದ ಅನುರಾಗ್ ಠಾಕೂರ್
ನವದೆಹಲಿ, ಜೂನ್. 07: ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆಯನ್ನು ಜೂನ್ 15 ರೊಳಗೆ ಪೊಲೀಸರು ಪೂರ್ಣಗೊಳಿಸುವವರೆಗೆ ಕಾಯುವಂತೆ ಸರಕಾರವು ಸೂಚಿಸಿದ ನಂತರ ಪ್ರತಿಭಟನಾನಿರತ ಕುಸ್ತಿಪಟುಗಳು ಬುಧವಾರ ತಮ್ಮ ಪ್ರತಿಭಟನೆಯನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದಾರೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗಿನ ಸುಮಾರು ಐದು ಗಂಟೆಗಳ ಸಭೆಯ ನಂತರ ಕುಸ್ತಿಪಟುಗಳು, ಮೇ 28 ರಂದು ಹೊಸ ಸಂಸತ್ ಭವನದತ್ತ 'ಮಹಿಳಾ ಸಮ್ಮಾನ್ ಮಹಾಪಚಾಯತ್' ನಡೆಸಲು ಅನುಮತಿಯಿಲ್ಲದೆ ಮೆರವಣಿಗೆ ನಡೆಸಿದಾಗ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ ಎಫ್‌ಐಆರ್‌ಗಳನ್ನು ಹಿಂಪಡೆಯುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ಅವರ ಪತಿ ಸತ್ಯವರ್ತ್ ಕಡಿಯಾನ್ ಮತ್ತು ಜಿತೇಂದರ್ ಕಿನ್ಹಾ ಉಪಸ್ಥಿತರಿದ್ದರು. ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ಪ್ರತಿಭಟನೆಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಡಬಲ್ ವರ್ಲ್ಡ್ ಪದಕ ವಿಜೇತ ವಿನೇಶ್ ಫೋಗಟ್ ಅವರು ಸಭೆಯಲ್ಲಿ ಭಾಗಿಯಾಗಿರಲಿಲ್ಲ.
"ಜೂನ್ 15 ರೊಳಗೆ ಪೊಲೀಸ್ ತನಿಖೆ ಪೂರ್ಣಗೊಳ್ಳಲಿದೆ ಎಂದು ನಮಗೆ ತಿಳಿಸಲಾಗಿದೆ. ಅಲ್ಲಿಯವರೆಗೆ, ಪ್ರತಿಭಟನೆಯನ್ನು ಅಮಾನತುಗೊಳಿಸುವಂತೆ ನಮಗೆ ತಿಳಿಸಲಾಗಿದೆ" ಎಂದು ಸಭೆಯ ನಂತರ ಸಾಕ್ಷಿ ಮಲಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಇಬ್ಬರೂ ತಮ್ಮ ಪ್ರತಿಭಟನೆ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದು, ಸರ್ಕಾರದ ವಿನಂತಿಯಂತೆ ಅವರು ಜೂನ್ 15 ರವರೆಗೆ ಮಾತ್ರ ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ.

ಕುಸ್ತಿಪಟುಗಳ ಸಭೆ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಪ್ರಕರಣದ ಆರೋಪ ಪಟ್ಟಿಯನ್ನು ಜೂನ್ 15 ರೊಳಗೆ ಸಲ್ಲಿಸಲಾಗುವುದು. ಜೂನ್ 30 ರೊಳಗೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಗೆ ಚುನಾವಣೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕುಸ್ತಿಪಟುಗಳ ಪ್ರತಿಯೊಂದು ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಿದ ಅವರು, ಡಬ್ಲ್ಯುಎಫ್‌ಐ ಮಹಿಳೆಯ ನೇತೃತ್ವದಲ್ಲಿ ಆಂತರಿಕ ದೂರು ಸಮಿತಿಯನ್ನು ಸಹ ಹೊಂದಿರುತ್ತದೆ. ಕುಸ್ತಿಪಟುಗಳು ವಿವಿಧ ಅಕಾಡೆಮಿಗಳು ಮತ್ತು ಕ್ರೀಡಾಪಟುಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಒತ್ತಾಯಿಸಿದ್ದಾರೆ. ಬ್ರಿಜ್‌ಭೂಷಣ್ ಶರಣ್ ಸಿಂಗ್ ಮತ್ತು ಅವರ ಸಹಚರರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.












Click it and Unblock the Notifications