ಕುಸ್ತಿಪಟುಗಳ ಪ್ರತಿಭಟನೆ: ನಮ್ಮ ಫೋನ್‌ಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ- ಬಜರಂಗ್ ಪುನಿಯಾ ಆರೋಪ
ದೆಹಲಿ ಮೇ 12: ಲೈಂಗಿಕ ಕಿರುಕುಳದ ಆರೋಪ ಮಾಡುವ ಮೂಲಕ ಕಳೆದ ಹಲವು ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಈ ನಡುವೆ ಹೊಸ ಆರೋಪವೊಂದು ಕೇಳಿ ಬಂದಿದೆ. ತಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಆರೋಪಿಸಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಕಳೆದ 18 ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಕುಸ್ತಿ ಪಟುಗಳು ನಡೆಸುತ್ತಿದ್ದಾರೆ. ಕುಸ್ತಿಪಟು ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಎಲ್ಲಾ ಪ್ರತಿಭಟನಾಕಾರರು ಇಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು ಎಂದು ಕುಸ್ತಿಪಟುಗಳು ಒತ್ತಾಯಿಸುತ್ತಿದ್ದಾರೆ. ಅಪ್ರಾಪ್ತ ಕುಸ್ತಿಪಟುವಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಅವರ ಮೇಲಿದೆ. ದೆಹಲಿ ಪೊಲೀಸರು ಈ ವಿಷಯದಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಒಂದು ಪೋಕ್ಸೊ ಕಾಯ್ದೆಯ ಸೆಕ್ಷನ್ 10 ರ ಅಡಿಯಲ್ಲಿ ದಾಖಲಾಗಿದೆ. ಮತ್ತೊಂದೆಡೆ ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ನಾವು ಇಂದು ಕರಾಳ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ. ಮುಂದೊಂದು ದಿನ ನಾವು ಗೆಲ್ಲುತ್ತೇವೆ ಎಂಬುದು ನಮಗೆ ಖಚಿತವಾಗಿದೆ. ಇಡೀ ದೇಶ ನಮ್ಮೊಂದಿಗೆ ಹೋರಾಡುತ್ತಿದೆ. ನಮ್ಮ ಚಳುವಳಿ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ನಮಗೆ ಖಂಡಿತ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ನಮ್ಮ ಫೋನ್ ನಂಬರ್ ಗಳನ್ನು ಟ್ರ್ಯಾಕ್ ಮಾಡಲಾಗುತ್ತಿದ್ದು, ನಮ್ಮನ್ನು ಅಪರಾಧ ಮಾಡಿದಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಬಜರಂಗ್ ಪುನಿಯಾ ಹೇಳಿಕೊಂಡಿದ್ದಾರೆ. ನಮ್ಮೊಂದಿಗೆ ಸಂಪರ್ಕದಲ್ಲಿರುವ ಎಲ್ಲರನ್ನೂ ಟ್ರ್ಯಾಕ್ ಮಾಡಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಭಾರತ್ ಕಿಸಾನ್ ಯೂನಿಯನ್ ಏಕತಾದ ಹೆಚ್ಚಿನ ಸಂಖ್ಯೆಯ ಜನರು ಪಂಜಾಬ್‌ನಿಂದ ಜಂತರ್ ಮಂತರ್ಗೆ ಕುಸ್ತಪಟುಗಳಿಗೆ ಬೆಂಬಲ ನೀಡಲು ಸಾಥ್ ನೀಡಿದ್ದಾರೆ. ಹೆಚ್ಚಾಗಿ ಮಹಿಳೆಯರು ಕುಸ್ತಿಪಟುಗಳಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ.
ನ್ಯಾಯಾಂಗಕ್ಕಿಂತ ದೊಡ್ಡದು ಯಾವುದೂ ಇಲ್ಲ. ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ನಮ್ಮ ಹೋರಾಟ ಸತ್ಯಕ್ಕಾಗಿ. ಭಾರತದಲ್ಲಿ ಈ ಹಿಂದೆ ಇಂತಹದ್ದೇನೂ ನಡೆದಿಲ್ಲ ಎಂದು ನಾನು ಭಾವಿಸುತ್ತೇನೆ. ದೇಶಾದ್ಯಂತ ಬೆಂಬಲ ಸಿಕ್ಕಾಗ ನಮಗೆ ಶಕ್ತಿ ಬರುತ್ತದೆ ಎಂದು ಪೂನಿಯಾ ಹೇಳಿದ್ದಾರೆ.
ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿದ್ದಾರೆ. ಆದ್ದರಿಂದ ಇದು ತುಂಬಾ ದುರದೃಷ್ಟಕರ ಮತ್ತು ದುಃಖಕರವಾಗಿದೆ. ಕಳೆದ 19 ದಿನಗಳಿಂದ ನಾವು ಪ್ರತಿಭಟನೆ ನಡೆಸುತ್ತಿರುವುದು ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications