ಕುಸ್ತಿಪಟುಗಳ ಪ್ರತಿಭಟನೆ: ಮೇ 28ಕ್ಕೆ ಮೋದಿ ಉದ್ಘಾಟಿಸಲಿರುವ ಹೊಸ ಸಂಸತ್ ಭವನದ ಮುಂದೆ ಮಹಿಳಾ ಮಹಾಪಂಚಾಯತ್
ದೆಹಲಿ ಮೇ 24: ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಮೇ 28 ರಂದು ಹೊಸ ಸಂಸತ್ ಭವನದ ಮುಂದೆ ಮಹಿಳಾ ಮಹಾಪಂಚಾಯತ್ ನಡೆಸಲು ನಿರ್ಧರಿಸಿದ್ದಾರೆ. ಹೊಸ ಸಂಸತ್ ಭವನವನ್ನು ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಮೇ 28 ರಂದು ಹೊಸ ಸಂಸತ್ತಿನ ಮುಂದೆ ಶಾಂತಿಯುತ ಮಹಿಳಾ ಮಹಾಪಂಚಾಯತ್ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಕುಸ್ತಿಪಟು ವಿನೇಶ್ ಫೋಗಟ್ ಮಂಗಳವಾರ ಜಂತರ್ ಮಂತರ್‌ನಿಂದ ಇಂಡಿಯಾ ಗೇಟ್‌ವರೆಗೆ ಮೆರವಣಿಗೆಯನ್ನು ಮುಕ್ತಾಯಗೊಳಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಮಹಾಪಂಚಾಯತ್‌ನ ನೇತೃತ್ವವನ್ನು ಮಹಿಳೆಯರು ವಹಿಸಲಿದ್ದಾರೆ ಎಂದು ವಿನೇಶ್ ಫೋಗಟ್ ಹೇಳಿದರು. "ಈ ಧ್ವನಿ ದೂರದವರೆಗೆ ತಲುಪಬೇಕು. ಇಂದು ದೇಶದ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದರೆ, ಮುಂಬರುವ ಪೀಳಿಗೆಗಳು ಅದರಿಂದ ಧೈರ್ಯವನ್ನು ಪಡೆದುಕೊಳ್ಳುತ್ತವೆ' ಎಂದು ವಿನೇಶ್ ಹೇಳಿದರು.
ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವಾರು ಉನ್ನತ ಕುಸ್ತಿಪಟುಗಳು ಏಪ್ರಿಲ್ 23 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಕೂಡಲೇ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ನಡೆದಿರುವ ಪ್ರತಿಭಟನೆಗೆ ಹಲವೆಡೆ ಬೆಂಬಲ ವ್ಯಕ್ತವಾಗಿದೆ.
ಈ ವಿಚಾರವಾಗಿ ಮಹಿಳಾ ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಬಳಿಕ ಏಪ್ರಿಲ್ 28 ರಂದು ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅಪ್ರಾಪ್ತ ಬಾಲಕಿಯೊಂದಿಗಿನ ಲೈಂಗಿಕ ಕಿರುಕುಳದ ವಿಷಯದಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪೋಸ್ಕೋ ಅಡಿಯಲ್ಲಿ ಒಂದು ಎಫ್‌ಐಆರ್ ದಾಖಲಾಗಿದ್ದರೆ, ಇತರ ದೂರುದಾರರೊಂದಿಗೆ ಲೈಂಗಿಕ ಕಿರುಕುಳಕ್ಕಾಗಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

ಈ ತಿಂಗಳ ಆರಂಭದಲ್ಲಿ, WFI ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳನ್ನು ತನಿಖೆ ಮಾಡಲು ದೆಹಲಿ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು. ಆದರೆ ಇದರಿಂದ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಆರೋಪಿಸಿ ಕುಸ್ತಪಟುಗಳು ದೆಹಲಿಯ ಜಂತರ ಮಂತರ್‌ನಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ತಾವು ಮಾಡಿರುವ ಆರೋಪಗಳನ್ನು ತನಿಖೆ ಮಾಡುವವರೆಗೂ ನಾವು ಯಾರನ್ನೂ ಕುರುಡಾಗಿ ನಂಬುವುದಿಲ್ಲ. ಕಳೆದ ಬಾರಿ ನಾವು ದಾರಿ ತಪ್ಪಿಸಿದ್ದೇವೆ. ಈ ಬಾರಿ ಈ ಪ್ರಕರಣದಲ್ಲಿ ಯಾವುದೇ ರಾಜಕೀಯವಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಹೇಳುತ್ತಾರೆ. ಈ ಬಾರಿ ಯಾರನ್ನೂ ತಿರಸ್ಕರಿಸುವುದಿಲ್ಲ. ತಮ್ಮ ಪ್ರತಿಭಟನೆಯನ್ನು ಬೆಂಬಲಿಸಲು ಬಯಸುವವರು ಬಂದು ಸೇರಬಹುದು ಎಂದು ಪ್ರತಿಭಟನಾಕಾರರು ಹೇಳಿದರು.

ಈ ಬಾರಿ, ಬಿಜೆಪಿ, ಕಾಂಗ್ರೆಸ್, ಎಎಪಿ, ಅಥವಾ ಯಾವುದೇ ಪಕ್ಷವಾಗಲಿ ನಮ್ಮ ಪ್ರತಿಭಟನೆಗೆ ಸೇರಲು ಎಲ್ಲಾ ಪಕ್ಷಗಳಿಗೆ ಸ್ವಾಗತವಿದೆ. ನಾವು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಹೇಳಿದ್ದಾರೆ. ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಏಳು ಮಹಿಳಾ ಕುಸ್ತಿಪಟುಗಳು ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಕುಸ್ತಿಪಟುಗಳ ಆರೋಪದ ತನಿಖೆ ಪೂರ್ಣಗೊಳ್ಳುವವರೆಗೆ ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್‌ನ ಎಲ್ಲಾ ಚಟುವಟಿಕೆಗಳನ್ನು ರದ್ದುಗೊಳಿಸಿದೆ.












Click it and Unblock the Notifications