Wrestlers protest: ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ನಾಳೆ ಉತ್ತರ ಪ್ರದೇಶದಲ್ಲಿ ರೈತ ಮುಖಂಡರ ಮಹತ್ವದ ಸಭೆ
ಲಕ್ನೋ, ಮೇ. 31: ಬಿಜೆಪಿ ಸಂಸದನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಕುಸ್ತಿಪಟುಗಳ ಪ್ರತಿಭಟನೆಗೆ ರೈತ ಸಂಘಟನೆಗಳು ಬೆಂಬಲ ನೀಡಿವೆ. ಮಹಿಳಾ ಕುಸ್ತಿಪಟುಗಳ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಮುಖ ರೈತ ಸಂಘಟನೆಗಳು ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಸೌರಮ್ ಪಟ್ಟಣದಲ್ಲಿ ಗುರುವಾರ ಪ್ರಮುಖ ಸಭೆಯನ್ನು ಕರೆದಿದೆ.
ದೇಶದ ಕೆಲವು ಉನ್ನತ ಕುಸ್ತಿಪಟುಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಪರಿಹಾರ ಹುಡುಕಲು, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನ ನಾಯಕ ಮತ್ತು ಬಲ್ಯಾನ್ ಖಾಪ್ ಮುಖ್ಯಸ್ಥ ನರೇಶ್ ಟಿಕಾಯತ್ ಅವರು ಐತಿಹಾಸಿಕ ಸೌರಮ್ ಚೌಪಾಲ್‌ನಲ್ಲಿ ಮಹಾಪಂಚಾಯತ್‌ನಲ್ಲಿ ಕುಸ್ತಿ ಪ್ರತಿಭಟನೆಯನ್ನು ಕೇಂದ್ರ ವಿಷಯವಾಗಿ ಚರ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.

ಈ ವರ್ಷದ ಜನವರಿಯಲ್ಲಿ ನವದೆಹಲಿಯಲ್ಲಿ ತಮ್ಮ ಪ್ರತಿಭಟನೆಯನ್ನು ಆರಂಭಿಸಿದ ಕುಸ್ತಿಪಟುಗಳು, ಮಹಿಳಾ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತದ ರೆಸ್ಲಿಂಗ್ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಭಾನುವಾರ ಸಂಸತ್ತಿನ ಮುಂದೆ ಪ್ರತಿಭಟನೆ ನಡಸಲು ಹೋಗಿದ್ದವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮನ್ನು ತುಂಬ ಆಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕ್ರಿಡಾಪಟುಗಳು ಮಂಗಳವಾರ ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಹರಿದ್ವಾರದ ಗಂಗಾ ನದಿಯ ದಡದಲ್ಲಿ ಜಮಾಯಿಸಿದರು. ತಮ್ಮ ಪದಕಗಳನ್ನು ಗಂಗೆಯಲ್ಲಿ ಬಿಡುವುದಾಗಿ ಘೋಷಿಸಿದ್ದರು.

ಆಡಳಿತಾರೂಢ ಬಿಜೆಪಿಯ ಸಂಸತ್ ಸದಸ್ಯ ಬ್ರಿಜ್ ಭೂಷಣ್ ಸಿಂಗ್ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿರುವಲ್ಲಿ ಹಿಂದೆಟು ಹಾಕುತ್ತಿರುವುದನ್ನು ವಿರೋಧಿಸಿ ಅವರು ತಮ್ಮ ವಿಶ್ವ ಮತ್ತು ಒಲಿಂಪಿಕ್ ಪದಕಗಳನ್ನು ಪವಿತ್ರ ನದಿಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದರು. ಇದಾದ ನಂತರ ನರೇಶ್ ಟಿಕಾಯತ್ ಮತ್ತು ಇತರ ಖಾಪ್ ಮತ್ತು ರೈತ ಮುಖಂಡರು ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರಕ್ಕೆ ಐದು ದಿನಗಳಲ್ಲಿ ಗಡುವು ನೀಡಿದ್ದಾರೆ.
ಮಹಾಪಂಚಾಯತ್‌ನಲ್ಲಿ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ದೆಹಲಿಯ ವಿವಿಧ ಖಾಪ್‌ಗಳ ಪ್ರತಿನಿಧಿಗಳು ಮತ್ತು ಅವರ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆಯಿದೆ. ಮಹತ್ವದ ಸಭೆಯಲ್ಲಿ ಕುಸ್ತಿ ಪ್ರತಿಭಟನೆಯ ಮುಂದಿನ ಹಂತಗಳನ್ನು ನಿರ್ಧರಿಸಲಾಗುತ್ತದೆ.
ದೆಹಲಿ ಪೊಲೀಸರು ಮೇ 28 ರಂದು ಹಲವಾರು ಕುಸ್ತಿಪಟುಗಳನ್ನು ಬಂಧಿಸಿದ ನಂತರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು, ಕುಸ್ತಿಯ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯಾದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW), ಕುಸ್ತಿಪಟುಗಳ ಬಂಧನವನ್ನು ಖಂಡಿಸಿದೆ ಮತ್ತು ಬ್ರಿಜ್ ಭೂಷಣದ ಸಿಂಗ್ ವಿರುದ್ಧದ ತನಿಖೆಗಳಲ್ಲಿ ಫಲಿತಾಂಶದ ಕೊರತೆಯನ್ನು ಟೀಕಿಸಿದೆ. ಜೊತೆಗೆ ಭಾರತೀಯ ಕುಸ್ತಿ ಫೆಡರೇಶನ್ ಅನ್ನು ಅಮಾನತುಗೊಳಿಸಬಹುದು ಎಂದು ಎಚ್ಚರಿಸಿದೆ.
ಮುಂದಿನ ಚುನಾಯಿತ ಸಾಮಾನ್ಯ ಸಭೆಯ ಬಗ್ಗೆ ಮಾಹಿತಿ ನೀಡದಿದ್ದರೆ ಭಾರತದ ಕುಸ್ತಿ ಫೆಡರೇಶನ್ ಅನ್ನು ಅಮಾನತುಗೊಳಿಸುವುದಾಗಿ ವಿಶ್ವ ಕುಸ್ತಿ ಆಡಳಿತ ಮಂಡಳಿ ಬೆದರಿಕೆ ಹಾಕಿದೆ. ಕುಸ್ತಿಪಟುಗಳ ಆರಂಭಿಕ ಪ್ರತಿಭಟನೆಯ ನಂತರ ಕ್ರೀಡಾ ಸಚಿವಾಲಯವು ಡಬ್ಲ್ಯುಎಫ್‌ಐ ಮತ್ತು ಅದರ ಚಟುವಟಿಕೆಗಳನ್ನು ಅಮಾನತುಗೊಳಿಸಿದ ನಂತರ ಮುಂದಿನ ಚುನಾಯಿತ ಸಾಮಾನ್ಯ ಸಭೆಯನ್ನು ನಡೆಸಲು 45 ದಿನಗಳ ಗಡುವನ್ನು ಜನವರಿಯಲ್ಲಿ ನಿಗದಿಪಡಿಸಲಾಗಿದೆ.
ಇಷ್ಟು ದಿನಗಳ ಕಾಲ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದ ಜಂತರ್ ಮಂತರ್ ಸ್ಥಳವನ್ನು ಮೇ 28 ರ ಭಾನುವಾರದಂದು ಪೊಲೀಸರು ಪ್ರತಿಭಟನಾ ಪ್ರದೇಶವನ್ನು ತೆರವುಗೊಳಿಸಿದರು. ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.












Click it and Unblock the Notifications