ನಡುರಾತ್ರಿಯಲ್ಲಿ ಕುಸ್ತಿಪಟುಗಳನ್ನ ಭೇಟಿ ಮಾಡಿದ ಅಮಿತ್ ಶಾ: ಎರಡು ತಾಸು ಹಠ ಹಿಡಿದು ಕುಳಿತ ಕ್ರೀಡಾಳುಗಳ ಬೇಡಿಕೆ ಏನು?
ನವದೆಹಲಿ, ಜೂನ್ 05: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟ್ಟುಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ತಡರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕಾಗಿ ನೀಡಿದ್ದ ಐದು ದಿನಗಳ ಗಡುವು ಮುಗಿದ ಬಳಿಕ ಕುಸ್ತಿಪಟುಗಳನ್ನು ತಮ್ಮ ಮನೆಗೆ ಕರೆಯಿಸಿ ಅಮಿತ್ ಶಾ ಮಾತನಾಡಿದರು.
ಎರಡು ಗಂಟೆಗಳ ಕಾಲ ನಡೆದ ಸಭೆಯು ಮಧ್ಯರಾತ್ರಿಯ ಬಳಿಕ ಕೊನೆಗೊಂಡಿತು ಎಂದು ತಿಳಿದುಬಂದಿದೆ. ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ಹಲವಾರು ತರಬೇತುದಾರರು ಈ ಸಭೆಯಲ್ಲಿ ಭಾಗವಹಿಸಿದ್ದರು. ನಾವು ಗೃಹ ಸಚಿವರೊಂದಿಗೆ ಸಭೆ ನಡೆಸಿದ್ದೇವೆ. ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಯ ಎಂದು ಬಜರಂಗ್ 'ದಿ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ.

ಏಳು ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿ ಸಂಸದ ಬ್ರಿಜ್ ಭೂಷನ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಆರೋಪ ಹೊತ್ತಿರುವ ಸಿಂಗ್ ವಿರುದ್ಧ ಕಳೆದ ಕೆಲ ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ದೆಹಲಿ ಪೊಲೀಸರು ಏಪ್ರಿಲ್ 28 ರಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಕುಸ್ತಿಪಟುಗಳನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಶೀಘ್ರದಲ್ಲಿಯೇ ಬಂಧಿಸಬೇಕೆಂಬ ಒತ್ತಾಯಗಳು ನಾಗರಿಕ ವಲಯದಿಂದ ಕೇಳಿಬಂದಿವೆ.
ಒತ್ತಾಯಪೂರ್ವಕವಾಗಿ ಸ್ತನಗಳನ್ನು ಸ್ಪರ್ಶಿಸುವುದು, ಬಲವಂತವಾಗಿ ಹಾಸಿಗೆಗೆ ಕರೆಯುವುದು ಹಾಗೂ ಹಿಂಬಾಲಿಸುವುದು ಸೇರಿದಂತೆ ಕನಿಷ್ಠ 15 ಘಟನೆಗಳ ಬಗ್ಗೆ ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.

ಒಬ್ಬ ಒಲಿಂಪಿಯನ್, ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ, ಅಂತರರಾಷ್ಟ್ರೀಯ ರೆಫರಿ ಮತ್ತು ರಾಜ್ಯ ಮಟ್ಟದ ಕೋಚ್ ಸೇರಿ ಕನಿಷ್ಠ ಮೂವರು ಮಹಿಳಾ ಕುಸ್ತಿಪಟುಗಳು ಆರೋಪಗಳನ್ನು ದೃಢೀಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಿಂಗ್ ವಿರುದ್ಧ ಬಲವಾದ ಆರೋಪಪಟ್ಟಿಯನ್ನು ತ್ವರಿತವಾಗಿ ಸಲ್ಲಿಸಬೇಕು ಎಂಬ ಕುಸ್ತಿಪಟುಗಳು ಗೃಹ ಸಚಿವರಿಗೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಈ ವಿಚಾರದ ಕುರಿತು ಮಾತನಾಡಿದ್ದಾರೆ. ಕುಸ್ತಿಪಟುಗಳು 'ನ್ಯಾಯಯುತ ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕು' ಮತ್ತು 'ಕಾನೂನು ತನ್ನದೇ ಆದ ಹಾದಿಯನ್ನು ತೆಗೆದುಕೊಳ್ಳಲಿ' ಎಂದು ಹೇಳಿದ್ದಾರೆ.

ಹೊಸ ಸಂಸತ್ತಿನ ಉದ್ಘಾಟನೆಯ ದಿನದಂದು ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಘಟನೆಗೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಆ ನಂತರ ಹರಿದ್ವಾರಕ್ಕೆ ತೆರಳಿದ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯಲು ಮುಂದಾದರು. ಇದಕ್ಕೆ ತಡೆಯೊಡ್ಡಿದ ರೈತ ಮುಖಂಡರು ಕುಸ್ತಿಪಟುಗಳ ಮನ ಒಲಿಸುವಲ್ಲಿ ಸಫಲರಾಗಿದ್ದಾರೆ.
ಈ ಕುರಿತು ಮಹಾಪಂಚಾಯತ್‌ನಲ್ಲಿ ಮಾತನಾಡಿದ ರೈತ ನಾಯಕ ರಾಖೇಶ್ ಟಿಕಾಯತ್ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಸಂಸದ ಬ್ರಿಜ್ ಭೂಷನ್ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ, ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಬ್ರಿಜ್ ಭೂಷಣ್ ಸಿಂಗ್ ಪ್ರತಿಭಟನಾ ನಿರತ ಕುಸ್ತಿಪಟುಗಳು ತಮ್ಮ ಬೇಡಿಕೆಗಳನ್ನು ನಿರಂತರವಾಗಿ ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲಿನ ಆರೋಪಗಳಲ್ಲಿ ಒಂದಾದರೂ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ ಎಂಬ ಮಾತಗಳನ್ನಾಡಿದ್ದಾರೆ.












Click it and Unblock the Notifications