ದೆಹಲಿಯಲ್ಲಿ ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯ: ಎಷ್ಟು ವಿಸ್ತೀರ್ಣ, ಏನು ವೈಶಿಷ್ಟ್ಯ, ಎಷ್ಟು ಸಾವಿರ ವರ್ಷಗಳ ಇತಿಹಾಸ ಅನಾವರಣ
ನವದೆಹಲಿ, ಜುಲೈ 28: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಮಿಸಲಾಗುವ ಯುಗೇ ಯುಗೀನ್ ಭಾರತ್ ರಾಷ್ಟ್ರೀಯ ವಸ್ತು ಸಂಗ್ರಹಾಲಯವು ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 5,000 ವರ್ಷಗಳ ಹಿಂದಿನ ಭಾರತದ ಕಥೆಯನ್ನು ಹೇಳುವ ಎಂಟು ವಿಷಯಾಧಾರಿತ ವಿಭಾಗಗಳನ್ನು ಈ ವಸ್ತು ಸಂಗ್ರಹಾಲಯ ಹೊಂದಿರುತ್ತದೆ ಎಂದು ಹೇಳಿದ್ದಾರೆ.
ದೇಶದ ರಾಜಧಾನಿಯ ಹೃದಯ ಭಾಗದಲ್ಲಿರುವ ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳಲ್ಲಿ ಹೊಸ ವಸ್ತು ಸಂಗ್ರಹಾಲಯವು ನಿರ್ಮಾಣವಾಗುತ್ತಿದೆ. ಇದು 1.17 ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ನೆಲಮಾಳಿಗೆಯಲ್ಲಿ 950 ಕೊಠಡಿಗಳು ಇರಲಿವೆ. ಇದು ಮೂರು ಮಹಡಿಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 18 ರಂದು ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಚಾರದ ಕುರಿತು ತಿಳಿಸಿದರು. ದೆಹಲಿಯ ಪ್ರಗತಿ ಮೈದಾನದಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ಮ್ಯೂಸಿಯಂ ಎಕ್ಸ್‌ಪೋವನ್ನು ಉದ್ಘಾಟಿಸಿದ ನಂತರ ಅವರು ಈ ಬಗ್ಗೆ ಘೋಷಣೆ ಮಾಡಿದರು. ಇದೇ ವೇಳೆ, ಮುಂಬರುವ ವಸ್ತುಸಂಗ್ರಹಾಲಯದ ವರ್ಚುವಲ್ ವಾಕ್‌ಥ್ರೂಗೆ ಚಾಲನೆ ನೀಡಿದರು.
ಬುಧವಾರ ಸಂಜೆ, ಪ್ರಧಾನಿ ಮೋದಿ ಅವರು ಸುಮಾರು 123 ಎಕರೆ ಕ್ಯಾಂಪಸ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ (ಐಇಸಿಸಿ) ಸಂಕೀರ್ಣವನ್ನು ಉದ್ಘಾಟಿಸಿದರು. ಸುಮಾರು ₹ 2,700 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಕನ್ವೆನ್ಷನ್ ಸೆಂಟರ್‌ಗೆ ಭಾರತ್ ಮಂಟಪವೆಂದು ಹೆಸರಿಡಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಯುಗೇ ಯುಗೀನ್ ಭಾರತ್ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ಘೋಷಿಸಿದರು.

ವಸ್ತು ಸಂಗ್ರಹಾಲಯವು ಎಂಟು ವಿಷಯಾಧಾರಿತ ವಿಭಾಗಗಳನ್ನು ಹೊಂದಿರುತ್ತದೆ. 5,000 ವರ್ಷಗಳ ಕಾಲ ವ್ಯಾಪಿಸಿರುವ ಭಾರತದ ಶ್ರೀಮಂತ ನಾಗರಿಕ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಚೀನ ಭಾರತ, ಪ್ರಾಚೀನದಿಂದ ಮಧ್ಯಯುಗ, ಮಧ್ಯಕಾಲೀನದಿಂದ ಪರಿವರ್ತನೆಯ ಕಾಲ, ಆಧುನಿಕ ಭಾರತ, ವಸಾಹತುಶಾಹಿ ಆಳ್ವಿಕೆ (ಡಚ್, ಬ್ರಿಟಿಷರು, ಪೋರ್ಚುಗೀಸರು ಮತ್ತು ಇತರರು ಭಾರತದಲ್ಲಿ ಆಡಳಿತ ನಡೆಸಿದ ಸಮಯ), ಸ್ವಾತಂತ್ರ್ಯ ಹೋರಾಟದ ನೂರು ವರ್ಷಗಳು ಮತ್ತು ಅದರ ಆಚೆಗಿನ ಇತಿಹಾಸವನ್ನು ಈ ವಸ್ತು ಸಂಗ್ರಹಾಲಯವ ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯೂಸಿಯಂ ಪೂರ್ಣಗೊಂಡ ನಂತರ, ಅದರಲ್ಲಿರುವ ಗ್ಯಾಲರಿಗಳು ಮತ್ತು ಉದ್ಯಾನಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದನ್ನು ವಸ್ತು ಸಂಗ್ರಹಾಲಯದ ವರ್ಚುವಲ್ ಪ್ರದರ್ಶನವು ತಿಳಿಸಿಕೊಡುತ್ತದೆ. ಪ್ರಾಚೀನ ನಗರ ಯೋಜನೆ ವ್ಯವಸ್ಥೆಗಳು, ವೇದಗಳು, ಉಪನಿಷತ್ತುಗಳು, ಪ್ರಾಚೀನ ವೈದ್ಯಕೀಯ ಜ್ಞಾನ ಇತ್ಯಾದಿಗಳ ಬಗ್ಗೆ ಈ ಪ್ರದರ್ಶನಗಳು ತಿಳಿಸುತ್ತವೆ ಎಂದು ಹೇಳಿದ್ದಾರೆ.

ಮೌರ್ಯ, ಗುಪ್ತ, ವಿಜಯನಗರ, ಮೊಘಲ್ ಸಾಮ್ರಾಜ್ಯ ಮತ್ತು ಹಲವಾರು ಇತರ ರಾಜವಂಶಗಳ ಆಳ್ವಿಕೆಯನ್ನು ಈ ಪ್ರದರ್ಶನದಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿನ ಜನಪಥ್‌ನಲ್ಲಿರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಪ್ರಾಚೀನ ಕಲಾಕೃತಿಗಳು ಮತ್ತು ಇತರ ಶ್ರೀಮಂತ ಸಂಗ್ರಹಗಳನ್ನು ಹೊಸ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೌತ್ ಬ್ಲಾಕ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯವಿದ್ದು, ನಾರ್ತ್ ಬ್ಲಾಕ್ ಹಣಕಾಸು ಮತ್ತು ಗೃಹ ಸಚಿವಾಲಯಗಳನ್ನು ಹೊಂದಿದೆ.

ಪ್ರಸ್ತುತ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಕಟ್ಟಡವು ಕರ್ತವ್ಯ ಪಥದ ಭಾಗವಾಗಲಿದೆ ಎಂದು ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಪ್ರಸ್ತುತ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಕಟ್ಟಡದ ಅಡಿಪಾಯವನ್ನು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮೇ 12, 1955 ರಂದು ಹಾಕಿದರು.ಕರ್ತವ್ಯ ಪಥವನ್ನು ಹಿಂದೆ ರಾಜಪಥ ಎಂದು ಕರೆಯಲಾಗುತ್ತಿತ್ತು.












Click it and Unblock the Notifications