NEP: ₹10,000 ಕೋಟಿ ಕೊಟ್ಟರೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಲ್ಲ; ಎಂಕೆ ಸ್ಟಾಲಿನ್
ಕೇಂದ್ರ ಸರ್ಕಾರ ತಮಿಳುನಾಡಿಗೆ 10,000 ಕೋಟಿ ರೂಪಾಯಿ ಕೊಟ್ಟರೂ ನಾವು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲ್ಲ, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರಿಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುವ ವಿಚಾರದಲ್ಲಿ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷದ ನಡುವೆಯೇ ಮುಖ್ಯಮಂತ್ರಿಯ ಹೇಳಿಕೆ ಬಂದಿದೆ.
ತಮಿಳುನಾಡಿನ ಕಡಲೂರಿನಲ್ಲಿ ನಡೆದ ಪೋಷಕರ-ಶಿಕ್ಷಕರ ಸಂಘದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಂ.ಕೆ. ಸ್ಟಾಲಿನ್, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ನಮ್ಮ ನಾಡಿನ ಮಕ್ಕಳ ಮೇಲೆ ಹಿಂದಿ ಹೇರಿಕೆ ಮಾಡುವುದು ಮಾತ್ರವಲ್ಲದೆ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾಮಾಜಿಕ ನ್ಯಾಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಹಲವು ಸಂಗತಿಗಳಿವೆ ಎಂದು ಹೇಳಿದರು.

ನಾವು ಯಾವುದೇ ಭಾಷೆಯನ್ನು ವಿರೋಧ ಮಾಡುವುದಿಲ್ಲ, ಆದರೆ ಹೇರಿಕೆಯನ್ನು ವಿರೋಧಿಸುವಲ್ಲಿ ನಮ್ಮ ನಿರ್ಧಾರ ದೃಢವಾಗ್ಇದೆ. ಹಿಂದಿಯನ್ನು ಹೇರುವ ಒಂದೇ ಕಾರಣಕ್ಕೆ ನಾವು ಎನ್‌ಇಪಿಯನ್ನು ವಿರೋಧಿಸುತ್ತಿಲ್ಲ. ಹಲವು ಇತರ ವಿಚಾರಗಳಲ್ಲೂ ಎನ್‌ಇಪಿ ನಮ್ಮ ಮಕ್ಕಳಿಗೆ ವಿರುದ್ಧವಾಗಿದೆ, ಇದು ವಿದ್ಯಾರ್ಥಿಗಳನ್ನು ಶಾಲೆಯಿಂದ ವಿಮುಖರಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಎಸ್‌ಸಿ/ಎಸ್‌ಟಿ ಮತ್ತು ಬಿಸಿ ವಿದ್ಯಾರ್ಥಿಗಳಿಗೆ ಈಗ ನೀಡುತ್ತಿರುವ ಆರ್ಥಿಕ ನೆರವನ್ನು ನಿಲ್ಲಿಸುವ ಜೊತೆಗೆ, ಎನ್‌ಇಪಿ ಮೂರು, ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವಂತೆ ಹೇಳುತ್ತದೆ. ಕಲಾ ಮತ್ತು ವಿಜ್ಞಾನ ಕಾಲೇಜುಗಳಿಗೆ ಪ್ರವೇಶ ಪಡೆಯಲು ಕೂಡ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕು ಎನ್ನುತ್ತದೆ ಎಂದು ಸ್ಟಾಲಿನಿ ತಿಳಿಸಿದರು.
2000 ಕೋಟಿ ರೂಪಾಯಿ ಅನುದಾನಕ್ಕೆ ತಡೆ
ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಮತ್ತು ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ವಿವಾದ ತೀವ್ರಗೊಂಡಿದೆ. ತಮಿಳುನಾಡಿನಲ್ಲಿ ಎನ್‌ಪಿಇಯನ್ನು ಜಾರಿ ಮಾಡದೇ ಇದ್ದರೆ ಕೇಂದ್ರ ಪ್ರಾಯೋಜಿತ ಉಪಕ್ರಮವಾದ ಸಮಗ್ರ ಶಿಕ್ಷಾ ಅಭಿಯಾನಕ್ಕೆ 2,000 ಕೋಟಿ ರೂಪಾಯಿ ಅನುದಾನವನ್ನು ತಡೆಹಿಡಿಯುವುದಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬೆದರಿಕೆ ಹಾಕಿದ್ದಾರೆ ಎಂದು ಸಿಎಂ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯವು ಎನ್‌ಇಪಿ ಜಾರಿಗೆ ತಂದರೆ ತಮಿಳುನಾಡಿಗೆ 2,000 ಕೋಟಿ ರೂಪಾಯಿ ಸಿಗುತ್ತದೆ ಎಂದು ಕೇಂದ್ರ ಹೇಳಿದೆ. ಆದರೆ 10,000 ಕೋಟಿ ರೂಪಾಯಿ ಕೊಟ್ಟರು ನಾವು ಎನ್‌ಇಪಿಯನ್ನು ಒಪ್ಪುವುದಿಲ್ಲ. ಎನ್‌ಇಪಿಗೆ ಅವಕಾಶ ನೀಡುವ ಮೂಲಕ ತಮಿಳುನಾಡನ್ನು 2000 ವರ್ಷಗಳಷ್ಟು ಹಿಂದಕ್ಕೆ ತಳ್ಳುವ ಪಾಪದ ಕೆಲಸ ಮಾಡಲ್ಲ ಎಂದು ಹೇಳಿದರು.
ಎನ್‌ಇಪಿಯನ್ನು ಶಿಕ್ಷಣ ವ್ಯವಸ್ಥೆ ಸುಧಾರಿಸಲು ಅಲ್ಲ, ಹಿಂದಿಯನ್ನು ಬೆಳೆಸಲು ತರಲಾಗಿದೆ. ಇದನ್ನು ಶಿಕ್ಷಣ ನೀತಿಯ ಹೆಸರಿನಲ್ಲಿ ಎಲ್ಲರ ಮೇಲೆ ಹೇರಲು ಮುಂದಾಗಿದೆ. ನೇರವಾಗಿ ಮಾಡಿದರೆ ವಿರೋಧ ಎದುರಾಗುತ್ತದೆ ಎಂದು ಹಿಂಬಾಗಿಲಿನಿಂದ ಬರುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications