1 ಲಕ್ಷ ರೂ. ಗ್ಯಾರಂಟಿ ಕಾರ್ಡ್‌ಗಾಗಿ ಕಾಂಗ್ರೆಸ್ ಕಚೇರಿ ಮುಂದೆ ಸಾಲುಗಟ್ಟಿದ ಮಹಿಳೆಯರು, ಸ್ಥಳದಲ್ಲೇ ಪ್ರತಿಭಟನೆ!
ಲಕ್ನೋ, ಜೂನ್. 05: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಅಚ್ಚರಿಯ ಫಲಿತಾಂಶ ಸಿಕ್ಕಿದೆ. ಬಿಜೆಪಿಗಿಂತ ಇಂಡಿಯಾ ಮೈತ್ರಿಕೂಟ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದ್ದು, ಆಡಳಿತರೂಢ ಬಿಜೆಪಿಗೆ ಮುಖಭಂಗವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ಗೆ ಅಲ್ಲಿನ ಮಹಿಳೆಯರು ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ.
ಒಟ್ಟು 80 ಲೋಕಸಭಾ ಸ್ಥಾನಗಳಲ್ಲಿ ಸಮಾಜವಾದಿ ಪಾರ್ಟಿ 37 ಸ್ಥಾನಗಳನ್ನು ಗಳಿಸಿದೆ. ಬಿಜೆಪಿ 33 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ. ಕಾಂಗ್ರೆಸ್ ಆರು ಸ್ಥಾನಗಳನ್ನು ಗಳಿಸಿದೆ. ವಿರೋಧ ಪಕ್ಷವಾದ ಇಂಡಿಯಾ ಒಕ್ಕೂಟ ಉತ್ತರ ಪ್ರದೇಶದಲ್ಲಿ 43 ಸ್ಥಾನಗಳನ್ನು ಗೆದ್ದಿದೆ. ಇದನ್ನು ಅರಗಿಸಿಕೊಳ್ಳಲು ಬಿಜೆಪಿ ಸಾಧ್ಯವಾಗುತ್ತಿಲ್ಲ. ಇದರ ಹೊತ್ತಲ್ಲೇ ಉತ್ತರ ಪ್ರದೇಶದ ಮಹಿಳೆಯರು ಒಂದು ಲಕ್ಷದ ಗ್ಯಾರಂಟಿ ಕಾರ್ಡ್‌ಗಳಿಗಾಗಿ ಕಾಂಗ್ರೆಸ್ ಕಚೇರಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

ಕಾಂಗ್ರೆಸ್ ಕಚೇರಿಗಳ ಮುಂದೆ ಮಹಿಳೆಯರ ಸಾಲು!
ಚುನಾವಣಾ ಫಲಿತಾಂಶ ಪ್ರಕಟವಾಗಿ ಇಂಡಿಯಾ ಮೈತ್ರಿಕೂಟದ ಸ್ಥಾನಗಳು ಹೆಚ್ಚಾಗುತ್ತಿದ್ದಂತೆ, ಲಕ್ನೋದಲ್ಲಿ ಹಲವಾರು ಮಹಿಳೆಯರು ಕಾಂಗ್ರೆಸ್ ಕಚೇರಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಪ್ರಚಾರದ ಸಮಯದಲ್ಲಿ ಪಕ್ಷವು ಭರವಸೆ ನೀಡಿದ 'ಗ್ಯಾರೆಂಟಿ ಕಾರ್ಡ್'ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಚುನಾವಣೆಯ ಪೂರ್ವಭಾವಿಯಾಗಿ, ಕಾಂಗ್ರೆಸ್ ಪ್ರತಿ ಬಡ ಕುಟುಂಬದ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿ ಹಲವಾರು ಮನೆಗಳಿಗೆ 'ಗ್ಯಾರಂಟಿ ಕಾರ್ಡ್'ಗಳನ್ನು ವಿತರಿಸಿತ್ತು. ಲಕ್ನೋದ ಕಾಂಗ್ರೆಸ್ ಕಚೇರಿಯ ಹೊರಗೆ ಬಿಸಿಲಿನ ಬೇಗೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು.
ಕಾಂಗ್ರೆಸ್‌ನ 'ಘರ್ ಘರ್ ಗ್ಯಾರಂಟಿ'
ಕೆಲವು ಮಹಿಳೆಯರು 'ಗ್ಯಾರಂಟಿ ಕಾರ್ಡ್'ಗೆ ಬೇಡಿಕೆ ಇಟ್ಟರೆ, ಕಾರ್ಡ್ ಪಡೆದವರು ತಮ್ಮ ಖಾತೆಗೆ ಹಣ ಪಡೆಯಲು ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಕೆಲವು ಮಹಿಳೆಯರು ಹಣ ಪಡೆಯಲು ವಿವರಗಳೊಂದಿಗೆ ತಮ್ಮ ನಮೂನೆಗಳನ್ನು ಸಲ್ಲಿಸಿದ ನಂತರ ಕಾಂಗ್ರೆಸ್ ಕಚೇರಿಯಿಂದ ರಸೀದಿಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಸುಮಾರು 8 ಕೋಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ 'ಘರ್ ಘರ್ ಗ್ಯಾರಂಟಿ' ಕಾರ್ಯಕ್ರಮವನ್ನು ಪ್ರಾರಂಭಿಸಿತು, ಅದರ ಅಡಿಯಲ್ಲಿ ಅದರ 25 ಗ್ಯಾರಂಟಿಗಳ ಬಗ್ಗೆ ಅವರಿಗೆ ಅರಿವು ಮೂಡಿಸಲು ಇಂಡಿಯಾ ಒಕ್ಕೂಟದ ನಾಯಕರಿಗೆ ಕೆಲಸ ನೀಡಲಾಗಿತ್ತು. ಈ ಗ್ಯಾರಂಟಿಗಳಲ್ಲಿ ಮಹಾಲಕ್ಷ್ಮಿ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ವರ್ಗಕ್ಕೆ ಸೇರಿದ ಕುಟುಂಬಗಳ ಮಹಿಳಾ ಮುಖ್ಯಸ್ಥರ ಖಾತೆಗೆ ತಿಂಗಳಿಗೆ 8,500 ರೂ.ಗಳನ್ನು ನೇರವಾಗಿ ಜಮಾ ಮಾಡಲಾಗುವುದು ಎಂದು ಪಕ್ಷವು ಭರವಸೆ ನೀಡಿತು.
ಗೃಹ ಲಕ್ಷ್ಮಿ ಯೋಜನೆ ಹೋಲುವ ಮಹಾಲಕ್ಷ್ಮಿ ಯೋಜನೆ
ಈ ಯೋಜನೆಯು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ಹೋಲುತ್ತದೆ. ಇದರಲ್ಲಿ ಬಡ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ 2,000 ರೂಪಾಯಿ ಪ್ರತಿ ತಿಂಗಳು ನೀಡಲಾಗುತ್ತದೆ. ಇತ್ತೀಚೆಗೆ, ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ ಕೇಂದ್ರದಲ್ಲಿ ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದರೆ ತಮ್ಮ ಖಾತೆಗಳಿಗೆ ಮಾಸಿಕ 8,500 ರೂಪಾಯಿ ಠೇವಣಿ ಇಡುವ ನಿರೀಕ್ಷೆಯಲ್ಲಿ ಹಲವಾರು ಮಹಿಳೆಯರು ಖಾತೆಗಳನ್ನು ತೆರೆಯಲು ಸಾಲುಗಟ್ಟಿದ್ದರು.
ಇನ್ನು, ಲೋಕಸಭಾ ಚುನಾವಣಾ ಫಲಿತಾಂಶದಂತೆ, ಎಕ್ಸಿಟ್ ಪೋಲ್‌ಗಳ ಭವಿಷ್ಯವನ್ನು ಸುಳ್ಳು ಮಾಡಿ ಇಂಡಿಯಾ ಬಣ 234 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ 292 ಸ್ಥಾನಗಳನ್ನು ಗೆದ್ದು, ಬಹುಮತದ 272 ಅನ್ನು ಮೀರಿದೆ. ಆದರೆ 400 ಸ್ಥಾನ ಗೆಲ್ಲುವ ಅದರ ಆಸೆ ನಿರಾಸೆಯಾಗಿದೆ. ಅದಲ್ಲದೆ ಬಿಜೆಪಿ ಒಂದೇ 300 ಸ್ಥಾನ ಗಳಿಸುವ ಕನಸು ಕೂಡ ನನಸಾಗಿಲ್ಲ.












Click it and Unblock the Notifications