ಚಿನ್ನದ ಬೆಲೆ ಗಗನಕ್ಕೆ; ಮಹಿಳೆಯರು ಈ ಮೂರೇ ಆಭರಣ ಧರಿಸಬೇಕು; ಇಲ್ಲದಿದ್ದರೇ 50,000 ದಂಡ ಫಿಕ್ಸ್!
2025ರ ಆರಂಭದಿಂದಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಡಾಲರ್ ದುರ್ಬಲತೆ, ಹಾಗೂ ಹಬ್ಬದ ಸಮಯದ ಬೇಡಿಕೆಯಂತಹ ಕಾರಣಗಳಿಂದ ಚಿನ್ನದ ಬೆಲೆ ಗಗನಕ್ಕೇರಿದೆ. ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯಕ್ಕೆ ಚಿನ್ನದ ಆಭರಣಗಳನ್ನ ಖರೀದಿಸಲು ಮಹಿಳೆಯವರು ಇಷ್ಟ ಪಡುತ್ತಾರೆ. ಆದರೆ, ಚಿನ್ನದ ಬೆಲೆ ಹೆಚ್ಚಳದಿಂದಾಗಿ ಆಭರಣ ಪ್ರಿಯರಿಗೆ ಭಾರೀ ನಿರಾಸೆಯುಂಟಾಗಿದೆ.
ಚಿನ್ನದ ಬೆಲೆ ಗಗನಕ್ಕೇರಿರುವ ನಡುವೆ, ಉತ್ತರಾಖಂಡದ ಕಂಧಾರ್ ಹಾಗೂ ಇಂದ್ರಾಣಿ ಗ್ರಾಮಗಳ ಪಂಚಾಯತ್ ಗಳು ಹೊಸ ರೀತಿಯ ಸಾಮಾಜಿಕ ನಿಯಮ ಜಾರಿಗೆ ತಂದಿವೆ. ಶುಭಕಾರ್ಯವಾದ ಮದುವೆ ಅಥವಾ ಇತರ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮೂರಕ್ಕಿಂತ ಹೆಚ್ಚು ಚಿನ್ನದ ಆಭರಣ ಧರಿಸುವುದನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಲಾಗಿದೆ. ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಚಕ್ರತ ಪ್ರದೇಶದ ಬುಡಕಟ್ಟು ಗ್ರಾಮ ಕಂದಾರ್‌ನಲ್ಲಿ ಮದುವೆ ಅಥವಾ ಇತರೆ ಶುಭ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮೂರಕ್ಕಿಂತ ಹೆಚ್ಚು ಚಿನ್ನದ ಆಭರಣ ಧರಿಸಿದರೆ ₹50,000 ದಂಡ ವಿಧಿಸಲಾಗುತ್ತದೆ.

ಉತ್ತರಾಖಂಡದ ಕಂಧಾರ್ ಹಾಗೂ ಇಂದ್ರಾಣಿ ಗ್ರಾಮ ಪಂಚಾಯತ್‌ನ ಹೊಸ ನಿಯಮ ಪ್ರಕಾರ ಮಹಿಳೆಯರು ಕೇವಲ ಮಂಗಳಸೂತ್ರ, ಮೂಗುತಿ ಮತ್ತು ಕಿವಿಯೋಲೆಗಳು ಮಾತ್ರ ಧರಿಸಬಹುದು. ಈ ನಿರ್ಧಾರವು ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿಯೇ ಕೈಗೊಳ್ಳಲಾಗಿದ್ದು, ಬಡ ಕುಟುಂಬಗಳ ಮೇಲೆ ಬರುವ ಆರ್ಥಿಕ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ಆದೇಶವನ್ನ ಹೊರಡಿಸಲಾಗಿದೆ.
ಚಿನ್ನದ ಬೆಲೆ ಏರಿಕೆಯಿಂದ ಜನರಲ್ಲಿ ಆರ್ಥಿಕ ಒತ್ತಡ ಹಾಗೂ ಸಾಮಾಜಿಕ ಸ್ಪರ್ಧೆ ಹೆಚ್ಚಾಗಿದೆ. ಸಂಪತ್ತಿನ ಪ್ರದರ್ಶನದ ಸಂಸ್ಕೃತಿಯಿಂದ ಬಡವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಅಸಮಾನತೆಯನ್ನು ತಗ್ಗಿಸಲು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಕಂಧಾರ್ ಗ್ರಾಮದ ಮುಖಂಡ ಅರ್ಜುನ್ ಸಿಂಗ್ ಹೇಳಿದರು. ಇನ್ನೂ ಈ ನಿರ್ಧಾರ ಮಹಿಳೆಯರಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ.
ಕಂದಾರ್ ಗ್ರಾಮದ 80 ವರ್ಷದ ನಿವಾಸಿ ಉಮಾ ದೇವಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಹೆಚ್ಚಿನವರು ಬಡವರಾಗಿದ್ದಾರೆ. ಚಿನ್ನದ ಬೆಲೆ ತುಂಬಾ ಹೆಚ್ಚಾಗಿದೆ, ಈ ನಿಯಮ ಸರಿಯಾದ ಕ್ರಮ ಎಂದು ತಿಳಿಸಿದರು. ಇನ್ನೂ ಮಹಿಳೆಯರ ಆಭರಣ ಧಾರಣೆಗೆ ಮಿತಿ ವಿಧಿಸುವಂತೆಯೇ ಪುರುಷರ ಮದ್ಯ ಸೇವನೆಯ ಮೇಲೂ ನಿಯಂತ್ರಣ ಇರಬೇಕು. ಚಿನ್ನ ಒಂದು ಹೂಡಿಕೆ, ಆದರೆ ಮದ್ಯದಿಂದ ಯಾವ ಲಾಭ? ಎಂದು ಜೌನ್ಸಾರ್ ನಿವಾಸಿ ಅಮಲಾ ಚೌಹಾಣ್ ಪ್ರಶ್ನಿಸಿದ್ದಾರೆ.
ಮತ್ತೊಬ್ಬ ನಿವಾಸಿ ನಿಶಾ ರಾವತ್ ಕೂಡ ಮದುವೆಗಳಲ್ಲಿ ಐಷಾರಾಮಿ ಪ್ರದರ್ಶನ ಹೆಚ್ಚುತ್ತಿರುವುದು ಉದ್ವಿಗ್ನತೆಗೆ ಕಾರಣ ಎಂದು ಹೇಳಿದ್ದಾರೆ, ವಿಶೇಷವಾಗಿ ದುಬಾರಿ ಮದ್ಯ ಮತ್ತು ಮಾಂಸವನ್ನು ದುಂದುಗಾರಿಕೆಯ ಸಂಕೇತಗಳಾಗಿ ತೋರಿಸುತ್ತಿದ್ದಾರೆ. "ಹಿಂದೆ, ಮನೆಯಲ್ಲಿ ತಯಾರಿಸಿದ ಮದ್ಯವನ್ನು ಮದುವೆಗಳಲ್ಲಿ ನೀಡಲಾಗುತ್ತಿತ್ತು, ಆದರೆ ಈಗ ಬ್ರಾಂಡೆಡ್ ಮದ್ಯ ಮತ್ತು ದುಬಾರಿ ಉಡುಗೊರೆಗಳ ಪ್ರದರ್ಶನ ಹೆಚ್ಚಾಗಿದೆ. ನಾವು ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡುತ್ತಿದ್ದರೆ, ಮದ್ಯ ಮತ್ತು ಮಾಂಸವನ್ನು ಸಹ ನಿಷೇಧಿಸಬೇಕು ಎಂದು ಪಿಟಿಐಗೆ ತಿಳಿಸಿದರು.












Click it and Unblock the Notifications