ಗೋವಾಕ್ಕೆ ಹನಿಮೂನ್ ಪ್ಲಾನ್ ಮಾಡಿ ಅಯೋಧ್ಯೆಗೆ ಕರೆದೊಯ್ದ ಪತಿ: ವಿಚ್ಛೇದನ ಕೇಳಿದ ಪತ್ನಿ
ಇತ್ತೀಚಿಗೆ ವಿಚ್ಛೇದನ ಎನ್ನುವುದು ತೀರಾ ಸಾಮಾನ್ಯವಾದ ವಿಷಯವಾಗಿದೆ. ನನ್ನ ಗಂಡ ಅತಿಯಾಗಿ ಗೊರಕೆ ಹೊಡೆಯುತ್ತಾನೆ, ನನ್ನ ಪತ್ನಿ ಹೆಚ್ಚು ಮೊಬೈಲ್ ಬಳಸುತ್ತಾಳೆ, ಪ್ರತಿ ನಿತ್ಯ ಸ್ನಾನ ಮಾಡಲ್ಲ, ಒದ್ದೆ ಬಟ್ಟೆಯನ್ನು ಬೆಡ್ ಮೇಲೆ ಹಾಕುತ್ತಾನೆ, ಅತಿಯಾಗಿ ತಿನ್ನುತ್ತಾನೆ, ಮನೆಯಲ್ಲಿ ಅಡುಗೆ ಮಾಡಲ್ಲ, ಹೀಗೆ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೋರಿ ದಂಪತಿ ಕೋರ್ಟ್ ಮೆಟ್ಟಿಲೇರುವುದು ಹೆಚ್ಚಾಗುತ್ತಿದೆ.
ವಿಚ್ಛೇದನ ಕೋರಿ ಬಂದ ದಂಪತಿಯ ಕಾರಣ ಕೇಳಿ ನ್ಯಾಯಾಧೀಶರು ಹಾಗೂ ವಕೀಲರು ಸುಸ್ತು ಬೀಳುತ್ತಿದ್ದಾರೆ. ಹೀಗಾಗಿ ಲೋಕ ಅದಾಲತ್ ನಡೆಸುವ ಮೂಲಕ ಇಂತಹ ಸಣ್ಣ ವಿಚಾರದ ವಿಚ್ಛೇದನ ಪ್ರಕರಣವನ್ನು ರದ್ದು ಮಾಡುತ್ತಿದ್ದಾರೆ. ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಂದು ನವ ವಿವಾಹಿತೆ ಗಂಡ ಹನಿಮೂನ್‌ಗೆ ಗೋವಾ ಬದಲು ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ವಿಚ್ಛೇದನ ಕೋರಿದ್ದಾಳೆ.

ಮಧ್ಯಪ್ರದೇಶದ ಮಹಿಳೆಯೊಬ್ಬರು ವಿವಾಹವಾದ ಐದು ತಿಂಗಳು ಕಳೆಯುಷ್ಟರಲ್ಲೇ ಪತಿಯಿಂದ ವಿಚ್ಛೇದನವನ್ನು ಕೋರಿದ್ದಾರೆ. ಹನಿಮೂನ್‌ಗೆ ಗೋವಾ ಬದಲು ಅಯೋಧ್ಯೆ ಮತ್ತು ವಾರಣಾಸಿಗೆ ಕರೆದೊಯ್ದಿದ್ದಾರೆ ಎನ್ನುವ ಕಾರಣಕ್ಕೆ ಮಹಿಳೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಜನವರಿ 19 ರಂದು ಭೋಪಾಲ್ ಕೌಟುಂಬಿಕ ನ್ಯಾಯಾಲಯಕ್ಕೆ ಈ ಪ್ರಕರಣ ಬಂದಿದ್ದು, ವಿಚಾರಣೆ ಮುಂದುವರಿದಿದೆ.
ತನ್ನ ಪತಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮ ಸಂಬಳ ಪಡೆಯುತ್ತಿದ್ದಾರೆ. ತಾನೂ ಕೂಡ ದುಡಿಯುತ್ತಿದ್ದು, ಚೆನ್ನಾಗಿ ಸಂಪಾದಿಸುತ್ತಿದ್ದೇನೆ. ಹನಿಮೂನ್‌ಗೆ ವಿದೇಶಕ್ಕೆ ಹೋಗುವುದು ನಮಗೆ ದೊಡ್ಡ ವಿಷಯವಾಗಿರಲಿಲ್ಲ. ಯಾವುದೇ ಹಣಕಾಸಿನ ಅಡಚಣೆಯೂ ಇರಲಿಲ್ಲ. ಆದರೆ ನನ್ನ ಪತಿ ವಿದೇಶಕ್ಕೆ ಕರೆದೊಯ್ಯಲು ನಿರಾಕರಿಸಿದ್ದು, ಭಾರತದಲ್ಲಿಯೇ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದರು ಎಂದು ಮಹಿಳೆ ವಿಚ್ಛೇದನ ಅರ್ಜಿಯಲ್ಲಿ ತಿಳಿಸಿದ್ದಾಳೆ.
ತಮ್ಮ ಹೆತ್ತವರನ್ನು ನೋಡಿಕೊಳ್ಳಬೇಕು ಎನ್ನುವ ಕಾರಣ ನೀಡಿದ ಪತಿ ಹನಿಮೂನ್‌ಗಾಗಿ ಗೋವಾ ಅಥವಾ ದಕ್ಷಿಣ ಭಾರತಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದು, ಪತ್ನಿಯೂ ಅದನ್ನು ಒಪ್ಪಿಕೊಂಡಿದ್ದಳು. ಆದರೆ ಪ್ರವಾಸದ ಒಂದು ದಿನದ ಮೊದಲು ಪತಿ ಪತ್ನಿಗೆ ಶಾಕ್ ನೀಡಿದ್ದಾನೆ. ಗೋವಾ ಬದಲು ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿರುವುದು ಪತ್ನಿಗೆ ತಿಳಿದು ಬಂದಿದೆ. ಇದರಿಂದ ಆಕೆ ನೊಂದುಕೊಂಡಿದ್ದಳು.

ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಮೊದಲು ತಾಯಿ ಅಯೋಧ್ಯೆ ನೋಡಲು ಬಯಸಿದರು ಎನ್ನುವ ಕಾರಣಕ್ಕೆ ಆತ ಪತ್ನಿಯೊಂದಿಗಿನ ಗೋವಾ ಟ್ರಿಪ್ ಕ್ಯಾನ್ಸಲ್ ಮಾಡಿ ಕುಟುಂಬಸ್ಥರೊಂದಿಗೆ ಅಯೋಧ್ಯೆ ಟ್ರಿಪ್‌ಗೆ ತೆರಳಿದ್ದಾರೆ. ಈ ವೇಳೆ ಪತಿಯೊಂದಿಗೆ ಹೋದ ಪತ್ನಿ ಏನು ಮಾತನಾಡದೇ ಸುಮ್ಮನಿದ್ದಳು ಎನ್ನಲಾಗಿದೆ.
ಆ ಸಮಯದಲ್ಲಿ ಪ್ರವಾಸಕ್ಕೆ ವಿರೋಧ ವ್ಯಕ್ತಪಡಿಸದೇ, ಏನು ತಕರಾರು ಮಾಡದೇ ಮಹಿಳೆ ಪತಿ ಹಾಗೂ ಕುಟುಂಬಸ್ಥರೊಂದಿಗೆ ಅಯೋಧ್ಯೆಗೆ ತೆರಳಿದ್ದಾಳೆ. ಆದರೆ ಈ ಯಾತ್ರಾ ಸ್ಥಳಗಳಿಂದ ಹಿಂತಿರುಗಿದ ಕೂಡಲೇ ಆಕೆ ತನ್ನ ಪತಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ನನ್ನ ಪತಿ ನನಗಿಂತ ಕುಟುಂಬಸ್ಥರ ಬಗ್ಗೆ ಹೆಚ್ಚು ಕಾಳಜಿ, ಹೆಚ್ಚು ಯೋಜಿಸುತ್ತಾನೆ ಎಂದು ಮಹಿಳೆ ವಿಚ್ಛೇದನ ಅರ್ಜಿಯಲ್ಲಿ ತಿಳಿಸಿದ್ದಾಳೆ. ಇನ್ನು ಪತಿ ಕೂಡ ಪತ್ನಿ ಸುಮ್ಮನೆ ಗಲಾಟೆ ಮಾಡುತ್ತಾಳೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ಸದ್ಯ ದಂಪತಿ ಪ್ರಕರಣ ಭೋಪಾಲ್ ಕೌಟುಂಬಿಕ ನ್ಯಾಯಾಲಯದಲ್ಲಿದ್ದು, ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications