ಭಾರತೀಯ ರಾಜಕೀಯವನ್ನೇ ನಡುಗಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ ನಡೆ!
ಭಾರತದಲ್ಲಿ ಲೋಕಸಭಾ ಚುನಾವಣೆ 2024ರ ಮೊದಲು ಭಾರಿ ದೊಡ್ಡ ಸಂಚಲನವೆ ಸೃಷ್ಟಿ ಆಗಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು. ಈಗ ನಿತೀಶ್ ಅವರ ನಡೆ ಇಂತಹ ಸಂಚಲನ ಸೃಷ್ಟಿ ಮಾಡಿದೆ. ಹಾಗಾದರೆ ನಿತೀಶ್ ಕುಮಾರ್‌ರ ಅಂತಹ ನಿರ್ಧಾರ ಏನು? ಇದರಿಂದ ಭಾರತೀಯ ರಾಜಕೀಯದಲ್ಲಿ, ಏನೆಲ್ಲಾ ಬದಲಾವಣೆ ಎದುರಾಗಲಿದೆ? ಬನ್ನಿ ತಿಳಿಯೋಣ.
ಬಿಹಾರ ಸಿಎಂ ನಿತೀಶ್ ಕುಮಾರ್ ಮನಸ್ಸಿಗೆ ಬಂದಂತೆ ಪಕ್ಷ ಬದಲಾವಣೆ ಮಾಡುತ್ತಾರೆಂಬ ಆರೋಪ ಇದೆ. ಹಲವು ಬಾರಿ ಬಿಜೆಪಿ ಜೊತೆ ಮತ್ತು ಕೆಲವು ಬಾರಿ ಕಾಂಗ್ರೆಸ್ & ಆರ್‌ಜೆಡಿ ಜೊತೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಕೈಜೋಡಿಸಿದ್ದಾರೆ. ಅದೇ ರೀತಿ ಇದೀಗ ನಿತೀಶ್ ಕುಮಾರ್ ಮತ್ತೊಮ್ಮೆ ಕಾಂಗ್ರೆಸ್ & ಆರ್‌ಜೆಡಿಗೆ ಕೈಕೊಟ್ಟು ಬಿಜೆಪಿ ಜೊತೆಗೆ ಹೋಗಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಇದೀಗ ಅಸ್ತಿತ್ವದಲ್ಲಿ ಇರುವ ಆರ್‌ಜೆಡಿ, ಕಾಂಗ್ರೆಸ್, ಜೆಡಿಯು ಸರ್ಕಾರವನ್ನೂ ವಿಸರ್ಜನೆ ಮಾಡಿ ಜನವರಿ 28ಕ್ಕೆ ಬಿಜೆಪಿ ಜೊತೆಗೆ ಸೇರಿ ನಿತೀಶ್ ಕುಮಾರ್ ಹೊಸ ಸರ್ಕಾರ ರಚಿಸಲಿದ್ದಾರೆ ಎನ್ನಲಾಗಿದೆ.

ಏನಾಯ್ತೋ.. ಇದೇನಾಯ್ತೋ..?
ಪ್ರತಿಪಕ್ಷಗಳ ಒಗ್ಗಟ್ಟು ಛಿದ್ರವಾಗಿ, ಒಡೆದ ಮನೆಯಾಗಿದೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ 2024ರ ಚುನಾವಣೆಯಲ್ಲಿ ಬಿಸಿ ಮುಟ್ಟಿಸಿ, ಮೋದಿ ಸರ್ಕಾರವನ್ನು ಸೋಲಿಸುತ್ತೇವೆ ಅಂತಾ ವಿಪಕ್ಷಗಳು ತೊಡೆ ತಟ್ಟಿವೆ. ಆದರೆ ವಿರೋಧ ಪಕ್ಷಗಳ ಬುಡವೇ ಗಟ್ಟಿಯಾಗಿಲ್ಲ ಅನ್ನೋದು ಮತ್ತೆ ಸಾಬೀತು ಆಗಿದ್ದು, ಬಿಹಾರ ಸಿಎಂ ನಿತೀಶ್ ಕುಮಾರ್ ಈಗ ಇಂಡಿಯಾ ಮೈತ್ರಿಕೂಟಕ್ಕೆ ಗುಡ್‌ಬೈ ಹೇಳಿ ಮತ್ತೆ ಬಿಜೆಪಿ ಜೊತೆ ಸೇರಲು ಮುಂದಾಗಿದ್ದಾರೆ ಎನ್ನಲಾಗಿದೆ. ಹಾಗೇ ಜನವರಿ 28ಕ್ಕೆ ಬಿಜೆಪಿ ಜೊತೆಗೆ ಸೇರಿ ನಿತೀಶ್ ಕುಮಾರ್ ಹೊಸ ಸರ್ಕಾರ ರಚಿಸಲಿದ್ದಾರೆ ಎನ್ನುವ ಸುದ್ದಿ ಈಗ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಸಂಪರ್ಕಕ್ಕೆ ಸಿಗದ ನಿತೀಶ್!
ಈಗಾಗಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಡಿಸೈಡ್ ಮಾಡಿದಂತೆ ಕಾಣುತ್ತಿದೆ. ಯಾಕಂದ್ರೆ ಲೋಕಸಭೆ ಚುನಾವಣೆ ಸಮಯದಲ್ಲಿ ನಿತೀಶ್ ಕುಮಾರ್ ಅವರ ಬೆಂಬಲ ಬಿಜೆಪಿ ಅಗತ್ಯವಿದೆ. ಇದೇ ಸಮಯದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೂ ನಿತೀಶ್ ಕುಮಾರ್ ಮುನಿಸನ್ನು ಮುಂದುವರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ನಿತೀಶ್ ಕುಮಾರ್ ದಿಢೀರ್ ಎಸ್ಕೇಪ್ ಆಗಿ, ಮತ್ತೆ ಬಿಜೆಪಿ ಜೊತೆ ಸೇರುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ 2024ಕ್ಕೆ ಮೊದಲು ಭಾರತೀಯ ರಾಜಕೀಯ ಶೇಕ್ ಆಗಿದೆ. ಹಾಗೇ ಕಾಂಗ್ರೆಸ್ ನಾಯಕರಿಗೂ ನಿತೀಶ್ ಸಂಪರ್ಕ ಸಾಧ್ಯವಾಗಿಲ್ಲ.
ವಿರೋಧ ಪಕ್ಷಗಳಿಗೆ ಮೊದಲೇ ಸೋಲು?
2024ರ ಲೋಕಸಭೆ ಚುನಾವಣೆಯಲ್ಲಿ BJP ವಿರುದ್ಧ ಜಯ ಸಾಧಿಸುವುದು ವಿಪಕ್ಷಗಳ ಒನ್‌ಲೈನ್ ಅಜೆಂಡಾ. ಇದೇ ಹಿನ್ನೆಲೆ ವಿರೋಧ ಪಕ್ಷಗಳ ನಡುವೆ ಒಗ್ಗಟ್ಟನ್ನೂ ಮೂಡಿಸಿ, ಲೋಕಸಭೆಗಾಗಿ ಸಜ್ಜಾಗಲು ಮೀಟಿಂಗ್ ಮೇಲೆ ಮೀಟಿಂಗ್ ಮಾಡಲಾಗಿತ್ತು. ಹೀಗಿದ್ದಾಗ, ನಿತೀಶ್ ಕುಮಾರ್‌ಗೆ ಗಾಳ ಹಾಕಲು ಬಿಜೆಪಿ ನಾಯಕರು ಮೊದಲಿಂದ ಯತ್ನಿಸಿದ್ದರು ಎನ್ನುವ ಮಾತು ಹರಿದಾಡಿ ಸಂಚಲನ ಸೃಷ್ಟಿಯಾಗಿತ್ತು. ಆದರೆ ಇದೀಗ ಅದು ನಡೆದೇ ಹೋಗಿದೆ. ನಿತೀಶ್ ಕುಮಾರ್‌ಗೆ ಬಿಜೆಪಿ ಸೇರಲು ರೆಡ್ ಕಾರ್ಪೆಟ್ ಹಾಸಲಾಗಿದೆ.
ಒಟ್ನಲ್ಲಿ ಲೋಕಸಭೆ ಚುನಾವಣೆಗೆ ಮೊದಲು, ವಿರೋಧ ಪಕ್ಷಗಳ ಒಕ್ಕೂಟಕ್ಕೆ ಮತ್ತೊಂದು ಭಾರಿ ದೊಡ್ಡ ಆಘಾತ ಎದುರಾಗಿದೆ. ಬಿಹಾರದಲ್ಲಿ ಈ ರೀತಿ ಸ್ಥಿತಿ ಎದುರಾಗಿದ್ದು ಇಂಡಿಯಾ ಒಕ್ಕೂಟಕ್ಕೆ ಶಾಕ್ ಕೊಟ್ಟಿದೆ. ಮತ್ತೊಂದ್ಕಡೆ ಈಗಾಗಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಎಎಪಿ ಪಕ್ಷ ಕೂಡ ಕಾಂಗ್ರೆಸ್ ಹೊರತು ಲೋಕಸಭೆ ಚುನಾವಣೆ ಎದುರಿಸಲು ನಿರ್ಧರಿಸಿದೆ. ಮತ್ತೊಂದು ಕಡೆ ನಿತೀಶ್ ಕುಮಾರ್ ಕಾಂಗ್ರೆಸ್‌ಗೆ ಕೈಕೊಟ್ಟು ಹೋಗುತ್ತಿದ್ದಾರೆ.












Click it and Unblock the Notifications