ಕಾರ್ಪೊರೇಟ್ ಕೆಲಸದ ಒತ್ತಡದ ನಡುವೆ UPSC ಪಾಸ್: ಕೋಚಿಂಗ್ ಇಲ್ಲದೇ ವಿಪ್ರೋ ಉದ್ಯೋಗಿ ಶ್ವೇತಾ ಭಾರತಿ ಈಗ IAS ಅಧಿಕಾರಿ
ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯು ದೇಶದ ಅತ್ಯಂತ ಕಠಿಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಗಾಗಿ ದಿನದ 10 ರಿಂದ 12 ಗಂಟೆಗಳ ಕಾಲ ಕೋಚಿಂಗ್ ಸೆಂಟರ್ಗಳ ಮೊರೆ ಹೋಗಿ ಅಭ್ಯಾಸ ಮಾಡುತ್ತಾರೆ. ಇಂತಹ ಕಠಿಣ ಪರೀಕ್ಷೆಯನ್ನು ಯಾವುದೇ ದುಬಾರಿ ಕೋಚಿಂಗ್ ಇಲ್ಲದೆ, ದಿನನಿತ್ಯದ 9 ಗಂಟೆಗಳ ಕಠಿಣ ಕಾರ್ಪೊರೇಟ್ ಉದ್ಯೋಗದ ಒತ್ತಡದ ನಡುವೆಯೂ ಯಶಸ್ವಿಯಾಗಿ ಮುಗಿಸಿ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ ಶ್ವೇತಾ ಭಾರತಿ. ಇವರ ಈ ಅಸಾಧಾರಣ ಯಶೋಗಾಥೆ ಸದ್ಯ ದೇಶಾದ್ಯಂತ ಲಕ್ಷಾಂತರ ಐಎಎಸ್ ಆಕಾಂಕ್ಷಿಗಳಿಗೆ ಮತ್ತು ಉದ್ಯೋಗಿಗಳಿಗೆ ದೊಡ್ಡ ಪ್ರೇರಣೆಯಾಗಿದೆ.
ಬಿಹಾರದ ರಾಜ್ಗೀರ್ ಮೂಲದವರಾದ ಶ್ವೇತಾ ಭಾರತಿ ಅವರು ಪ್ರಖ್ಯಾತ ಐಟಿ ಸಂಸ್ಥೆಯಾದ ವಿಪ್ರೋ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದರು. ಪ್ರತಿದಿನ ಒಂಬತ್ತು ಗಂಟೆಗಳ ಕಾಲ ಕಚೇರಿಯ ಕೆಲಸದ ಒತ್ತಡದ ನಡುವೆಯೂ ದೇಶ ಸೇವೆ ಮಾಡುವ ತಮ್ಮ ಕನಸನ್ನು ಅವರು ಕೈಬಿಡಲಿಲ್ಲ. ಉದ್ಯೋಗವನ್ನು ಬಿಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುವ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ, ಕೆಲಸದ ಜೊತೆಜೊತೆಗೇ ಓದುವುದನ್ನು ರೂಢಿಸಿಕೊಂಡರು. ಸಮಯದ ಅಭಾವವಿದ್ದರೂ ಧೃತಿಗೆಡದ ಶ್ವೇತಾ, ಕಟ್ಟುನಿಟ್ಟಾದ ಸಮಯ ಪಾಲನೆ ಮತ್ತು ಮುಂಜಾನೆ ಹಾಗೂ ರಾತ್ರಿಯ ಸಮಯವನ್ನು ಸಂಪೂರ್ಣವಾಗಿ ಓದಿಗಾಗಿ ಮೀಸಲಿಟ್ಟರು.

ಕೋಚಿಂಗ್ ಇಲ್ಲದೆ ಸ್ವ ಅಧ್ಯಯನಕ್ಕೆ ಆದ್ಯತೆ
ಇಂದಿನ ದಿನಗಳಲ್ಲಿ ಯುಪಿಎಸ್ಸಿ ಪಾಸ್ ಮಾಡಬೇಕಾದರೆ ಲಕ್ಷಾಂತರ ರೂಪಾಯಿ ಸುರಿದು ಕೋಚಿಂಗ್ ಪಡೆಯುವುದು ಅನಿವಾರ್ಯ ಎಂಬ ನಂಬಿಕೆ ಸಾರ್ವಜನಿಕರಲ್ಲಿದೆ. ಆದರೆ ಶ್ವೇತಾ ಭಾರತಿ ಈ ವಾದ ಸುಳ್ಳು ಎಂದು ನಿರೂಪಿಸಿದ್ದಾರೆ. ಯಾವುದೇ ದುಬಾರಿ ಕೋಚಿಂಗ್ ಸೆಂಟರ್ಗಳ ಸಹಾಯ ಪಡೆಯದ ಅವರು, ಕೇವಲ ಸ್ವಯಂ ಅಧ್ಯಯನದ ಮೂಲಕವೇ ಸಿದ್ಧತೆ ನಡೆಸಿದರು. ಮಾರುಕಟ್ಟೆಯಲ್ಲಿ ಲಭ್ಯವಿರುವ ಗುಣಮಟ್ಟದ ಪ್ರಮಾಣಿತ ಪುಸ್ತಕಗಳು, ಇಂಟರ್ನೆಟ್ ಸಂಪನ್ಮೂಲಗಳನ್ನು ಬಳಸಿಕೊಂಡು ಮತ್ತು ವ್ಯವಸ್ಥಿತವಾದ ಯೋಜನೆಯನ್ನು ಮಾಡಿಕೊಂಡು ಮುನ್ನಡೆದರು. ವಿಷಯದ ಆಳವಾದ ತಿಳುವಳಿಕೆ ಮತ್ತು ನಿರಂತರವಾದ ಅಭ್ಯಾಸವೇ ಅವರ ಯಶಸ್ಸಿನ ಹಿಂದಿನ ರಹಸ್ಯವಾಗಿತ್ತು.
ಕನಸು ನನಸಾದ ಕ್ಷಣ: ಸಿಕ್ಕಿತು 356 ನೇ ರ್ಯಾಂಕ್
ಶ್ವೇತಾ ಅವರ ವರ್ಷಗಳ ಕಠಿಣ ಪರಿಶ್ರಮ ಮತ್ತು ತ್ಯಾಗಕ್ಕೆ ಅಂತಿಮವಾಗಿ ಯಶಸ್ಸು ಸಿಕ್ಕಿದೆ. ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಅವರು ಅಖಿಲ ಭಾರತ ಮಟ್ಟದಲ್ಲಿ 356 ನೇ ಶ್ರೇಣಿಯನ್ನು ಭದ್ರಪಡಿಸಿಕೊಂಡು ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು. ಪ್ರಸ್ತುತ ಅವರು ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ವೇತಾ ಭಾರತಿ ಅವರ ಶಿಕ್ಷಣ ಮತ್ತು ಕೌಟುಂಬಿಕ ಹಿನ್ನೆಲೆ
ಬಿಹಾರದ ನಳಂದಾ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಶ್ವೇತಾ ಭಾರತಿ, ಪಾಟ್ನಾದ ಇಶಾನ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಭಾಗಲ್ಪುರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದ ಅವರು, ಬಳಿಕ ವಿಪ್ರೋ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದರು.
ಯುಪಿಎಸ್ಸಿ ಸಾಧನೆಗೂ ಮುನ್ನ 2020ರಲ್ಲಿ ಬಿಪಿಎಸ್ಸಿ ಪರೀಕ್ಷೆಯಲ್ಲಿ 65ನೇ ರ್ಯಾಂಕ್ ಪಡೆದು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ತಮ್ಮ ಐಎಎಸ್ ಕನಸಿಗಾಗಿ ಸಾಮಾಜಿಕ ಜಾಲತಾಣಗಳು ಮತ್ತು ಸ್ಮಾರ್ಟ್ಫೋನ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದ ಶ್ವೇತಾ, 2021ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಒಟ್ಟು 942 ಅಂಕಗಳನ್ನು ಪಡೆದು ಇತಿಹಾಸ ಸೃಷ್ಟಿಸಿದರು. ಕೌಟುಂಬಿಕ ಜವಾಬ್ದಾರಿಗಳು, ಸೌಲಭ್ಯಗಳ ಕೊರತೆ ಮತ್ತು ಕಾರ್ಪೊರೇಟ್ ಕೆಲಸದ ಒತ್ತಡಗಳ ನಡುವೆಯೂ ದೃಢಸಂಕಲ್ಪ ಮತ್ತು ಶಿಸ್ತಿದ್ದರೆ ಎಂತಹ ಕಠಿಣ ಗುರಿಯನ್ನೂ ತಲುಪಬಹುದು ಎಂಬುದಕ್ಕೆ ಪ್ರಸ್ತುತ ಐಎಎಸ್ ಅಧಿಕಾರಿಯಾಗಿರುವ ಶ್ವೇತಾ ಭಾರತಿ ಅವರೇ ಉದಾಹರಣೆ












Click it and Unblock the Notifications