2024ರ ಲೋಕಸಭೆ ಚುನಾವಣೆಯಲ್ಲಿ ಶಶಿ ತರೂರ್‌ರನ್ನು ಸೋಲಿಸುತ್ತೇನೆ: ಕ್ರಿಕೆಟಿಗ ಶ್ರೀಶಾಂತ್
ನವದೆಹಲಿ, ಸೆಪ್ಟೆಂಬರ್ 29: ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಸೋಲಿಸುವುದಾಗಿ ಕ್ರಿಕೆಟಿಗ ಎಸ್. ಶ್ರೀಶಾಂತ್ ಹೇಳಿದ್ದಾರೆ.
'ದಿ ಇಂಡಿಯನ್ ಎಕ್ಸ್‌ಪ್ರೆಸ್'ಗೆ ನೀಡಿದ ಸಂದರ್ಶನದಲ್ಲಿ ಶ್ರೀಶಾಂತ್, 'ನಾನು ಶಶಿ ತರೂರ್ ಅವರ ದೊಡ್ಡ ಅಭಿಮಾನಿ. ಅವರು ನನ್ನ ಪರವಾಗಿ ನಿಂತಿದ್ದರು. ಆದರೆ ತಿರುವನಂತಪುರಂನ ಚುನಾವಣೆಯಲ್ಲಿ ನಾನು ಅವರನ್ನು ಸೋಲಿಸುತ್ತೇನೆ. ಈ ಬಗ್ಗೆ ಅನುಮಾನವೇ ಬೇಡ' ಎಂದಿದ್ದಾರೆ.
ಶ್ರೀಶಾಂತ್ ಅವರನ್ನು ತರೂರ್ ಹಲವು ಬಾರಿ ಹೊಗಳಿದ್ದರು. ಭಾರತ ತಯಾರಿಸಿದ ಅತ್ಯುತ್ತಮ ಬೌಲರ್‌ಗಳಲ್ಲಿ ಶ್ರೀಶಾಂತ್ ಒಬ್ಬರು ಮತ್ತು ಅವರು ಕೇರಳದ ಹೆಮ್ಮೆಯ ಪ್ರತೀಕ ಎಂದಿದ್ದರು. ಅಲ್ಲದೆ, ಶ್ರೀಶಾಂತ್ ಅವರ ಮೇಲಿನ ನಿಷೇಧ ತೆರವುಗೊಳಿಸುತ್ತಿರುವ ಸುದ್ದಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಅವರು ಮತ್ತೆ ಕ್ರಿಕೆಟ್‌ಗೆ ಮರಳಿ ಯಶಸ್ಸು ಪಡೆಯಲಿ ಎಂದು ಹಾರೈಸಿದ್ದರು.

ತಾವು ಜನರೊಂದಿಗೆ ಬೆರೆತು ಅವರ ಬೆಂಬಲ ಪಡೆದುಕೊಳ್ಳುವ ಪ್ರಯತ್ನದಲ್ಲಿ ನಿರತನಾಗಿರುವುದಾಗಿ ಶ್ರೀಶಾಂತ್ ತಿಳಿಸಿದ್ದಾರೆ. ತಮ್ಮ ಜೀವನದ ಬಗ್ಗೆ ವೆಬ್ ಸೀರೀಸ್, ಜೀವನಚರಿತ್ರೆ ಬರೆಯುವುದು, ಸಿನಿಮಾ ಮತ್ತು ನಿವೃತ್ತಿಯಾಗುವ ಮುನ್ನ ಒಂದು ಕೊನೆಯ ಕ್ರಿಕೆಟ್ ಪಂದ್ಯ ಆಡಬೇಕು ಎಂಬ ತಮ್ಮ ಭವಿಷ್ಯದ ಯೋಜನೆಗಳನ್ನು ಅವರು ಹಂಚಿಕೊಂಡಿದ್ದಾರೆ.
'ನಾನು ಎಂದಿಗೂ ಮ್ಯಾಚ್ ಫಿಕ್ಸಿಂಗ್ ಮಾಡಿರಲಿಲ್ಲ. 100 ಕೋಟಿ ಕೊಟ್ಟರೂ ಅದನ್ನು ಮಾಡುತ್ತಿರಲಿಲ್ಲ' ಎಂದು ಸ್ಪಾಟ್ ಫಿಕ್ಸಿಂಗ್ ಆರೋಪದ ಕುರಿತಾದ ಪ್ರಶ್ನೆಗೆ ಉತ್ತರಿಸಿದ್ದಾರೆ. 'ನನ್ನ ಕುಟುಂಬದ ಸದಸ್ಯರು ನಾನು ಪಂದ್ಯ ಆಡುವುದನ್ನು ನೋಡುತ್ತೇವೆ ಎಂಬ ಭರವಸೆಯನ್ನು ಕಳೆದುಕೊಂಡಿಲ್ಲ. ನನ್ನ ಅಮ್ಮ ಮತ್ತು ಅಪ್ಪ ಅದಕ್ಕಾಗಿ ಕಾಯುತ್ತಿದ್ದಾರೆ. ನನ್ನ ಪತ್ನಿ ಈ ಗಳಿಗೆಯನ್ನು ತುಂಬಾ ದಿನದಿಂದ ಕಲ್ಪಿಸಿಕೊಳ್ಳುತ್ತಿದ್ದಾಳೆ. ಹಾಗೆಯೇ ನನ್ನ ಮಕ್ಕಳೂ ಕೂಡ' ಎಂದಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಶ್ರೀಶಾಂತ್ ಅವರನ್ನು 2013ರಲ್ಲಿ ಕ್ರಿಕೆಟ್‌ನಿಂದ ನಿಷೇಧಿಸಲಾಗಿತ್ತು. 2019ರ ಮಾರ್ಚ್‌ನಲ್ಲಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ಏಳು ವರ್ಷಕ್ಕೆ ಇಳಿಸಿತ್ತು. ಈ ನಿಷೇಧದ ಅವಧಿಯು ಮುಂದಿನ ಸೆಪ್ಟೆಂಬರ್ ವೇಳೆಗೆ ಅಂತ್ಯಗೊಳ್ಳಲಿದೆ.
2016ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಶಾಂತ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 11,710 ಮತಗಳಿಂದ ಸೋಲು ಅನುಭವಿಸಿದ್ದರು.












Click it and Unblock the Notifications