ನನ್ನ ಸಿದ್ಧಾಂತಕ್ಕಾಗಿ ನಿರಂತರವಾಗಿ ಹೋರಾಡುತ್ತೇನೆ: ರಾಹುಲ್ ಗಾಂಧಿ
ಭಿವಾಂಡಿ, ಜೂನ್ 12: 'ನಾನು ನನ್ನ ಸಿದ್ಧಾಂತಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇನೆ' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರೆಸ್ಸೆಸ್) ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆರೆಸೆಸ್ ಕಾರ್ಯಕರ್ತ ರಾಜೇಶ್ ಕುಂಟೆ ಎಂಬುವವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆಗೆಂದು ಮಹಾರಾಷ್ಟ್ರ ಭಿವಾಂಡಿ ಕೋರ್ಟಿಗೆ ಆಗಮಿಸಿದ್ದ ರಾಹುಲ್ ಗಾಂಧಿ, ವಿಚಾರಣೆಯ ನಂತರ ಈ ಹೇಳಿಕೆ ನೀಡಿದರು.
ಮಾರ್ಚ್ 6, 2014 ರಲ್ಲಿ ರಾಹುಲ್ ಗಾಂಧಿಯವರು ಸಭೆಯೊಂದರಲ್ಲಿ ಮಾತನಾಡುತ್ತ, 'ಮಹಾತ್ಮಾ ಗಾಂಧಿ ಹತ್ಯೆ ಹಿಂದೆ ಆರೆಸ್ಸೆಸ್ ಇದೆ' ಎಂದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.

"ಪ್ರಧಾನಿ ನರೇಂದ್ರ ಮೋದಿಯವರು ಹಣದುಬ್ಬರ ಮತ್ತು ಇಂಧನ ದರದ ಬಗ್ಗೆ ಮಾತನಾಡುವುದಿಲ್ಲ. ಅವರು ನನ್ನ ಮೇಲೆ ಎಷ್ಟೇ ಕೇಸುಗಳನ್ನು ಹಾಕಬಹುದು. ಆದರೆ ನಾನು ಮಾತ್ರ ನನ್ನ ಸಿದ್ಧಾಂತಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಇರುತ್ತೇನೆ. ನಾನು ಅವರ ವಿರುದ್ಧ ಹೋರಾಡಿ ಗೆಲ್ಲುತ್ತೇನೆ" ಎಂದು ಅವರು ಹೇಳಿದರು.
ಈ ಪ್ರಕರಣದ ವಿಚಾರಣೆಯನ್ನು ಭಿವಂಡಿ ನ್ಯಾಯಾಲಯ ಆಗಸ್ಟ್ 10 ಕ್ಕೆ ಮುಂದೂಡಿದೆ.












Click it and Unblock the Notifications