NRC ವೇಳೆ ಘರ್ಜಿಸಿದ್ದ ಅಮಿತ್ ಶಾ, ಕೊರೊನಾ ವೇಳೆ ತೆರೆಮರೆಗೆ?
ಪೌರತ್ವ ತಿದ್ದುಪಡಿ ಮಸೂದೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅನುಮೋದನೆ ಪಡೆದುಕೊಂಡ ನಂತರ, ದೇಶದ ಹಲವು ಭಾಗಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.
ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯಲು ಸುತರಾಂ ಒಪ್ಪದ ಕೇಂದ್ರ ಸರಕಾರ, ಈ ವಾತಾವರಣವನ್ನು ಒಂದು ಹಂತಕ್ಕೆ ತಿಳಿಗೊಳಿಸಲು ಬಹುತೇಕ ಯಶಸ್ವಿಯಾಗಿತ್ತು ಕೂಡಾ. ಆ ವೇಳೆ, ಭಾರತೀಯರಿಗೆ ಕಾಡುತ್ತಿದ್ದ ಒಂದು ಪ್ರಶ್ನೆಯೆಂದರೆ, ದೇಶದ ಪ್ರಧಾನಿಯಾರು? ಮೋದಿಯೋ ಅಥವಾ ಅಮಿತ್ ಶಾ ಅವರೋ ಎಂದು.
ಆ ಮಟ್ಟಿಗೆ ಪರಿಸ್ಥಿತಿಯ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸದ್ಯ ದೇಶ ಎದುರಿಸುತ್ತಿರುವ ಕೊರೊನಾ ಎಮರ್ಜೆನ್ಸಿಯ ವೇಳೆ ಅಷ್ಟಾಗಿ ಸುದ್ದಿಯಲ್ಲೇ ಇಲ್ಲ ಎಂದರೆ, ಹತ್ತು ಹಲವು ಅನುಮಾನಗಳು ಕಾಡುವುದು ಸಹಜ.
ಪ್ರಧಾನಿ ನಂತರದ ಆಯಕಟ್ಟಿನ ಹುದ್ದೆಯೆಂದರೆ ಅದು ಗೃಹಖಾತೆ. ಎರಡನೇ ಅವಧಿಗೆ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ, ಹುತ್ತಕ್ಕೆ ಕೈಯಿಡುವಂತಹ ಹಲವು ಮಹತ್ವದ ಮಸೂದೆಯನ್ನು ಮೋದಿ ಸರಕಾರ ಜಾರಿಗೆ ತಂದಿತ್ತು. ಉಭಯ ಸದನಗಳಲ್ಲಿ ಮತ್ತು ರಾಷ್ಟ್ರಪತಿಗಳ ಬಳಿ ಅಂಕಿತ ಹಾಕಿಸಿಕೊಳ್ಳುವಲ್ಲೂ ಯಶಸ್ವಿಯಾಗಿತ್ತು. ಇವೆಲ್ಲದರೆ ಹಿಂದೆ, ಸ್ಪಷ್ಟವಾಗಿ ಅಮಿತ್ ಶಾ ಕ್ರಿಯಾಶೀಲತೆ ಎದ್ದು ಕಾಣುತ್ತಿತ್ತು.

ಅಮಿತ್ ಶಾ ಚುರುಕುತನ ಕಾಣಿಸುತ್ತಿಲ್ಲ
ಆದರೆ, ಈಗ ಕೊರೊನಾ ಸಂಕಷ್ಟದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುನ್ನಲೆಯಲ್ಲಿರುವಂತಹ ಯಾವುದೇ ವಿದ್ಯಮಾನಗಳು ಕಾಣಿಸುತ್ತಿಲ್ಲ. ಎಲ್ಲಾ ರಾಜ್ಯಗಳ ಸಿಎಂಗಳ ಸಭೆಯಲ್ಲಿ ಪ್ರಧಾನಿ ಮೋದಿ ಜೊತೆ ಕಾಣಿಸಿಕೊಂಡಿರುವುದನ್ನು ಬಿಟ್ಟರೆ, ಅಮಿತ್ ಶಾ ಅಥವಾ ಅವರ ಕಚೇರಿಯ ಚುರುಕುತನ ಕಾಣಿಸುತ್ತಿಲ್ಲ. ಮಾಧ್ಯಮ ಗೋಷ್ಠಿಯೂ ನಡೆಯುತ್ತಿಲ್ಲ.

ಮೋದಿ ಸರಕಾರದ ಕಾರ್ಯಕ್ರಮ
ಎರಡನೇ ಅವಧಿಗೆ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ, ಮೋದಿ ಸರಕಾರದ ಕಾರ್ಯಕ್ರಮಗಳನ್ನೆಲ್ಲಾ ಕಾರ್ಯಗತಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿಕೊಂಡು ಬರುತ್ತಿರುವ ಅಮಿತ್ ಶಾ, ಕೊರೊನಾ ವಿಚಾರದಲ್ಲಿ ಮಿಸ್ಸಿಂಗ್ ಇನ್ ಆಕ್ಷನ್ ಎಂದು ಹೇಳಬಹುದು. ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಪಿಎಂ ಕಾರ್ಯಾಲಯದ ಜೊತೆ, ಬೆನ್ನಿಗೆ ನಿಂತಿರಬೇಕಾದ ಗೃಹ ಇಲಾಖೆ ಯಾಕೋ ಸೈಲೆಂಟ್ ಆದಂತಿದೆ.

ದೆಹಲಿಯ ತಬ್ಲಿಘಿ ಘಟನೆ
ದೆಹಲಿಯ ತಬ್ಲಿಘಿ ಘಟನೆಯ ವೇಳೆಯೂ ಅಮಿತ್ ಶಾ ಸುದ್ದಿಗೆ ಬಂದಿದ್ದು ಕಮ್ಮಿ. ಅನುಮತಿ ಇಲ್ಲದೇ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದು, ವೀಸಾ ಉಲ್ಲಂಘನೆ ಇಂತಹ ಹಲವು ಆಪಾದನೆಗಳು ಆ ಸಂಘಟನೆಗಳ ಮೇಲೆ ಇದ್ದರೂ, ಗೃಹ ಮಂತ್ರಾಲಯ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಎಡವಿತೇ ಎನ್ನುವ ಪ್ರಶ್ನೆ ಮೂಡುವಂತಿತ್ತು.

ಆಕ್ರಮಣಕಾರಿ ನಿರ್ಧಾರಕ್ಕೆ ಹೆಸರಾದ ಅಮಿತ್ ಶಾ
ಇಡೀ ಜಗತ್ತು ಎದುರಿಸುತ್ತಿರುವ ಕೊರೊನಾ ಸಾಂಕ್ರಾಮಿಕ ದಾಳಿಯ ವೇಳೆ, ಪರಿಸ್ಥಿತಿಯನ್ನು ನಿಭಾಯಿಸುವ ವಿಚಾರದಲ್ಲಿ, ಗೃಹ ಇಲಾಖೆಯ ವ್ಯಾಪ್ತಿ ಬಹಳ ದೊಡ್ಡದು. ಎನ್ಡಿಎ ಸರಕಾರದ ಕಾರ್ಯಶೈಲಿಯಲ್ಲಿ ಮೋದಿಯದ್ದು ಒಂದು ಮುಖ, ಅಮಿತ್ ಶಾ ಅವರದ್ದು ಇನ್ನೊಂದು ಮುಖ ಎನ್ನುವುದು ಗೊತ್ತಿರುವ ವಿಚಾರ. ಕಠಿಣ, ಹಾರ್ಡ್ಲೈನ್, ಆಕ್ರಮಣಕಾರಿ ನಿರ್ಧಾರಕ್ಕೆ ಹೆಸರಾದ ಅಮಿತ್ ಶಾ ಯಾಕೆ ತೆರೆಮೆರೆಗೆ ಸರಿಯುತ್ತಿದ್ದಾರೆ ಎನ್ನುವುದೇ ಇಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ..












Click it and Unblock the Notifications