Akhilesh Yadav: ಮೋದಿ ಸರ್ಕಾರ ಉಳಿಸಿಕೊಳ್ಳಲು ಆಂಧ್ರ ಪ್ರದೇಶ, ಬಿಹಾರಕ್ಕೆ ಮಾತ್ರ ವಿಶೇಷ ಪ್ಯಾಕೇಜ್..!
ಲಕ್ನೋ, ಜುಲೈ. 23: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಕನೌಜ್ ಸಂಸದ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದಿಲ್ಲ. ಎನ್‌ಡಿಎ ಸರ್ಕಾರ ರಚನೆಗೆ ಬಿಹಾರದ ಜೆಡಿಯು ಮತ್ತು ಆಂಧ್ರ ಪ್ರದೇಶದ ಟಿಡಿಪಿ ಪಕ್ಷಗಳು ಬೆಂಬಲ ನೀಡಿದ್ದು, ಈ ಬಾರಿ ಎನ್‌ಡಿಎ ಅಧಿಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದೇ ಕಾರಣಕ್ಕೆ ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದವು. ಈಗ ಬಜೆಟ್‌ನಲ್ಲಿಯೂ ವಿಶೇಷ ಪ್ಯಾಕೇಜ್ ಪಡೆದುಕೊಂಡಿವೆ. ಇದು ಪ್ರತಿಪಕ್ಷಗಳ ಕಣ್ಣು ಕೆಂಪಾಗಿಸಿದೆ.

ಸರ್ಕಾರವನ್ನು ಉಳಿಸಲು ಈ ಎರಡು ರಾಜ್ಯಗಳಿಗೆ ಬೃಹತ್ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2024 ಅನ್ನು ಟೀಕಿಸಿದ್ದಾರೆ. ಉತ್ತರ ಪ್ರದೇಶದ ಅಭಿವೃದ್ಧಿ ಯೋಜನೆಗಳನ್ನು ನಿರ್ಲಕ್ಷಿಸಲಾಗಿದೆ ಮತ್ತು ಯುವಕರು ಮತ್ತು ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಘೋಷಿಸಿದ ವಿಶೇಷ ಪ್ಯಾಕೇಜ್‌ಗಳಿಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಉತ್ತರ ಪ್ರದೇಶವು ನರೇಂದ್ರ ಮೋದಿಯವರು ಪ್ರಧಾನಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. ಆದರೂ, ರಾಜ್ಯದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದರೂ ಅವರ ಭಾಷಣದಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮುಂದುವರಿದು ಮಾತಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ "ಉತ್ತರ ಪ್ರದೇಶದ ರೈತರಿಗೆ ಇನ್ನೂ ಮಾರುಕಟ್ಟೆ ಇಲ್ಲ ಮತ್ತು ಬಿಹಾರದ ಬಕ್ಸರ್‌ನಿಂದ ಹೆದ್ದಾರಿಗಾಗಿ ಬಜೆಟ್‌ನ ಘೋಷಣೆಯು ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಗೆ ವಿಸ್ತರಿಸಬೇಕಾಗಿತ್ತು" ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ಆಡಳಿತಾರೂಢ ಟಿಡಿಪಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಭಾಗವಾಗಿದೆ. ಅವರು ತಮ್ಮ ರಾಜ್ಯಗಳಿಗೆ ಹಣಕಾಸಿನ ನೆರವಿಗೆ ಒತ್ತಾಯಿಸುತ್ತಿದ್ದಾರೆ. ಇದು ಇಂದಿನ ಬಜೆಟ್‌ನಲ್ಲಿ ಪ್ರತಿಫಲಿಸಿದೆ. ಅವರ ಮೈತ್ರಿಯನ್ನು ಉಳಿಸಿಕೊಳ್ಳಲು ಮತ್ತು ಅದರ ಸರ್ಕಾರವನ್ನು "ಉಳಿಸಲು" ರಾಜಕೀಯ ತಂತ್ರವಾಗಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಅಭಿವೃದ್ಧಿಗೆ ಸರ್ಕಾರದ ಬಳಿ ಏಕೆ ಯಾವುದೇ ಯೋಜನೆಗಳಿಲ್ಲ ಎಂದು ಪ್ರಶ್ನಿಸಿದ್ದಾರೆ. ಉದ್ಯೋಗ ಹೆಚ್ಚಳ ಮತ್ತು ಕೌಶಲ್ಯ ಯೋಜನೆಗಳ ಬಗ್ಗೆ ಬಜೆಟ್ ನಲ್ಲಿ ನೀಡಿರುವ ಅನುದಾನವನ್ನು ಒಪ್ಪದ ಅಖಿಲೇಶ್ ಯಾದವ್, ಯುವಕರಿಗೆ ಇಂಟರ್ನ್‌ಶಿಪ್‌ನಂತಹ ಅಲ್ಪಾವಧಿಯ ಕ್ರಮಗಳು ನಿರುದ್ಯೋಗ ಬಿಕ್ಕಟ್ಟನ್ನು ಪರಿಹರಿಸುವುದಿಲ್ಲ ಎಂದು ಹೇಳಿದ್ದಾರೆ.
"ಈ ಅಲ್ಪಾವಧಿಯ ಉದ್ಯೋಗ ಯೋಜನೆಗಳಿಗೆ ಮೀಸಲಾತಿ ನೀಡಲಾಗುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ. ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ಉತ್ತರ ಪ್ರದೇಶದ ಬಗ್ಗೆ ಮಾತನಾಡುವುದನ್ನು ಏಕೆ ಬಿಡುತ್ತಾರೆ ಎಂದು ಮತ್ತೊಬ್ಬ ಎಸ್‌ಪಿ ನಾಯಕ ರಾಮ್ ಗೋಪಾಲ್ ಯಾದವ್ ಪ್ರಶ್ನಿಸಿದ್ದಾರೆ. "ಉತ್ತರ ಪ್ರದೇಶವನ್ನು ಅಭಿವೃದ್ಧಿಪಡಿಸದೆ ಭಾರತವನ್ನು ಅಭಿವೃದ್ಧಿಪಡಿಸಲು ಸಾಧ್ಯವೇ?" ಎಂದು ಕೇಳಿದ್ದಾರೆ.












Click it and Unblock the Notifications