ಲಕ್ನೋಕ್ಕೆ ಹೋದ ಮೋದಿ ಲಖಿಂಪುರ ಖೇರಿಗೆ ಏಕೆ ಹೋಗಿಲ್ಲ; ರಾಹುಲ್
ನವದೆಹಲಿ, ಅಕ್ಟೋಬರ್ 06; ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ 8 ಜನರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ಪ್ರತಿಪಕ್ಷಗಳು ಈ ವಿಚಾರದಲ್ಲಿ ಒಗ್ಗಟ್ಟಾಗಿದ್ದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕುರಿತು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ.
ಬುಧವಾರ ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದರು. ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಸೇರಿದಂತೆ ಐವರ ನಿಯೋಗ ಬುಧವಾರ ಲಖಿಂಪುರ ಖೇರಿಗೆ ಭೇಟಿ ನೀಡಲು ತೀರ್ಮಾನಿಸಿದೆ. ಆದರೆ ಉತ್ತರ ಪ್ರದೇಶ ಸರ್ಕಾರ ಸೆಕ್ಷನ್ 144 ನೆಪ ಹೇಳಿ ರಾಹುಲ್ ಭೇಟಿಗೆ ಅನುಮತಿ ನಿರಾಕರಿಸಿದೆ. ಆದರೂ ರಾಹುಲ್ ಲಕ್ನೋಗೆ ಹೊರಟಿದ್ದಾರೆ.
ಅಕ್ಟೋಬರ್ 3ರ ಘಟನೆ ಬಳಿಕ ಲಖಿಂಪುರ ಖೇರಿ ಪ್ರದೇಶದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಲಖಿಂಪುರ ಖೇರಿಗೆ ಭೇಟಿ ನೀಡಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಸರ್ಕಾರ ಅವಕಾಶ ನೀಡಿಲ್ಲ.

ಮೋದಿಗೆ ರಾಹುಲ್ ಗಾಂಧಿ ಪ್ರಶ್ನೆ
"ರೈತರು ಜೀಪ್‌ನ ಅಡಿ ಸಿಲುಕಿದರು. ಅವರನ್ನು ಕೊಲೆ ಮಾಡಲಾಯಿತು. ಲಖಿಂಪುರ ಖೇರಿ ಘಟನೆಯಲ್ಲಿ ಕೇಂದ್ರ ಸಚಿವ, ಅವರ ಪುತ್ರನ ಹೆಸರು ಹೇಳಿ ಬರುತ್ತಿದೆ. ನಿನ್ನೆ ಪ್ರಧಾನಿ ಮೋದಿ ಲಕ್ನೋದಲ್ಲಿದ್ದರು. ಆದರೆ ಲಖಿಂಪುರಕ್ಕೆ ಭೇಟಿ ಕೊಡಲಿಲ್ಲ. ಇದು ರೈತರ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಉತ್ತರ ಪ್ರದೇಶಕ್ಕೆ ಹೊರಟ ಕಾಂಗ್ರೆಸ್ ನಿಯೋಗ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 5 ಜನರ ನಿಯೋಗ ಬುಧವಾರ ಲಖಿಂಪುರ ಖೇರಿಗೆ ಭೇಟಿ ನೀಡಲಿದೆ. ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಈ ನಿಯೋಗದಲ್ಲಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ನಿಯೋಗ ಉತ್ತರ ಪ್ರದೇಶದತ್ತ ಹೊರಟಿದೆ.

ರೈತರಿಗೆ ನಮ್ಮ ಬೆಂಬಲವಿದೆ
"ಲಖಿಂಪುರ ಖೇರಿ ಪರಿಸ್ಥಿತಿ ತಿಳಿಯಲು ಇಬ್ಬರು ಮುಖ್ಯಮಂತ್ರಿಗಳನ್ನು ಒಳಗೊಂಡ ನಿಯೋಗ ಇಂದು ಅಲ್ಲಿಗೆ ಭೇಟಿ ನೀಡಲಿದೆ. ನಾವು ರೈತರಿಗೆ ಬೆಂಬಲ ನೀಡಲಿದ್ದೇವೆ. ಪ್ರಿಯಾಂಕಾರನ್ನು ವಶದಲ್ಲಿ ಇಟ್ಟುಕೊಳ್ಳಲಾಗಿದೆ. ಆದರೆ ಇದು ರೈತರಿಗೆ ಸಂಬಂಧಿಸಿದ ವಿಚಾರವಾಗಿದೆ. ನಾವು ಭೇಟಿ ನೀಡುತ್ತೇವೆ" ಎಂದು ರಾಹುಲ್ ಗಾಂಧಿ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಹೇಳಿದರು.
|
ಮಾಧ್ಯಮಗಳಿಗೆ ರಾಹುಲ್ ಪ್ರಶ್ನೆ
"ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದ ಬಗ್ಗೆ ಮಾಧ್ಯಮಗಳು ಧ್ವನಿ ಎತ್ತಬೇಕು. ಆದರೆ ನಾವು ಪ್ರಶ್ನೆ ಮಾಡಿದರೆ ಅದನ್ನು ಮಾಧ್ಯಮಗಳು ರಾಜಕೀಯ ಎಂದು ಹೇಳುತ್ತೀರಿ" ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಗೆ ಮನವಿ ಮಾಡುತ್ತೇವೆ
"ಸರ್ಕಾರ ರಾಹುಲ್ ಗಾಂಧಿ ಲಖಿಂಪುರ ಖೇರಿಗೆ ಭೇಟಿ ನೀಡುವುದಕ್ಕೆ ಅನುಮತಿ ನಿರಾಕರಿಸಿದೆ. ಅವರು ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದರೆ ನಾವು ಲಖಿಂಪುರ ಖೇರಿಗೆ ಭೇಟಿ ನೀಡದಂತೆ ಮನವಿ ಮಾಡುತ್ತೇವೆ. ಲಖಿಂಪುರ ಎಸ್‌ಪಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಹುಲ್ ಗಾಂಧಿ ತಡೆಯುವಂತೆ ನಮಗೆ ಮನವಿ ಮಾಡಿದ್ದಾರೆ" ಎಂದು ಲಕ್ನೋ ಪೊಲೀಸ್ ಆಯುಕ್ತ ಡಿ. ಕೆ. ಠಾಕೂರ್ ಹೇಳಿದ್ದಾರೆ.












Click it and Unblock the Notifications