Defence Analysis: ರಷ್ಯಾದ ಯುದ್ಧದಲ್ಲಿ ಭಾರತೀಯರೇಕೆ ಪ್ರಾಣವನ್ನು ಪಣವಾಗಿಡುತ್ತಿದ್ದಾರೆ?

ಸೆಪ್ಟೆಂಬರ್ 30ರ ಬುಧವಾರದಂದು, ವಿದೇಶಾಂಗ ಸಚಿವಾಲಯ ಸದ್ಯದಲ್ಲಿ ಮುಗಿಯುವ ಲಕ್ಷಣವೇ ಇಲ್ಲದ ದುರಂತವೊಂದಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣವಾದ ಪ್ರಯಾಣ ಸಲಹೆಗಳನ್ನು ನೀಡಿದೆ. ಭಾರತೀಯರು ರಷ್ಯಾಗೆ ತೆರಳಿ, ರಷ್ಯನ್ ಸೇನೆಗೆ ಸೇರ್ಪಡೆಯಾಗಲು ಪ್ರಯತ್ನಿಸುವುದನ್ನು ಸರ್ಕಾರ ಎಚ್ಚರಿಕೆ ನೀಡಿದೆ. ರಷ್ಯನ್ ಸೇನೆಗೆ ಸೇರ್ಪಡೆಯಾದರೆ ಅಲ್ಲಿ 'ಪ್ರಾಣಾಂತಿಕ ಅಪಾಯ' ನಿಮ್ಮನ್ನು ಕಾದಿದೆ ಎಂದೂ ಸರ್ಕಾರ ಎಚ್ಚರಿಸಿದೆ.

ರಷ್ಯಾ - ಉಕ್ರೇನ್ ಯುದ್ಧಭೂಮಿಯಲ್ಲಿ ಸೆಣಸಲು ಭಾರತೀಯರ ಸೇರ್ಪಡೆ ದಿನೇ ದಿನೇ ಹೆಚ್ಚಾಗುವುದನ್ನು ಮಾಸ್ಕೋದಲ್ಲಿನ ಭಾರತದ ರಾಯಭಾರ ಕಚೇರಿ ಗುರುತಿಸಿದ್ದು, ಇದರ ಪರಿಣಾಮವಾಗಿ ಭಾರತ ತನ್ನ ಅತ್ಯಂತ ಕಠಿಣ ಎಚ್ಚರಿಕೆಯನ್ನು ರವಾನಿಸಿದೆ. ಈಗಾಗಲೇ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿದ್ದರೂ, ಪ್ರತಿ ತಿಂಗಳೂ ಭಾರತೀಯರು ರಷ್ಯನ್ ಸೇನೆಗೆ ಸೇರ್ಪಡೆಯಾಗುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಸಚಿವಾಲಯ ಹೇಳಿದೆ.

Why are Indians Risking Their Lives in the Russian Army Defense Analyst Girish Linganna Explains

"ಇದೊಂದು ಅಪಾಯಕಾರಿ ಹೆಜ್ಜೆ ಎಂದು ಪದೇ ಪದೇ ಸೂಚಿಸಲಾಗಿದ್ದು, ರಷ್ಯನ್ ಸೇನೆಗೆ ಸೇರುವುದನ್ನು ಸರ್ಕಾರ ಬಲವಾಗಿ ತಿರಸ್ಕರಿಸುತ್ತದೆ" ಎಂದು ಸರ್ಕಾರದ ಸೂಚನೆ ಹೇಳಿದೆ. "ಯಾವುದೇ ವ್ಯಕ್ತಿಯಾದರೂ ಇಂತಹ ಕ್ರಮಗಳ ಗಂಭೀರ ಪರಿಣಾಮವನ್ನು ಪರಿಗಣಿಸಿ, ತಾವು ಎಂತಹ ಅಪಾಯಕ್ಕೆ ತುತ್ತಾಗಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು" ಎಂದೂ ಸೂಚನೆ ತಿಳಿಸಿದೆ.

ಅದೇ ದಿನದಂದು, ತೆಲಂಗಾಣದ ನಾಲ್ವರು ವ್ಯಕ್ತಿಗಳು ತಮ್ಮನ್ನು ಮೋಸದಿಂದ ಉಕ್ರೇನಿಯನ್ ಪಡೆಗಳ ವಿರುದ್ಧ ಯುದ್ಧಕ್ಕೆ ತಳ್ಳಲಾಗಿದೆ ಎಂದಿದ್ದಾರೆ.

ಈಗ ನಮ್ಮ ಮುಂದೆ ಒಂದು ಪ್ರಶ್ನೆ ಪ್ರತಿ ತಿಂಗಳೂ ಹೆಚ್ಚು ದೊಡ್ಡದಾಗಿ ಕಾಡುತ್ತಿದೆ. ನಮ್ಮ ಯುವ ಜನರು ಅದೇಕೆ ಬೇರೊಂದು ದೇಶದ ಯುದ್ಧದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾರೆ?

ಈ ಪ್ರಶ್ನೆಗಿರುವ ಮೊದಲ ಉತ್ತರ ಹಣ. ಬಹಳಷ್ಟು ಭಾರತೀಯರು ಮೇಲ್ನೋಟಕ್ಕೆ 'ಆಕರ್ಷಕವಾಗಿ' ಕಾಣುವ, ಆದರೆ ವಾಸ್ತವವಾಗಿ ಅವರನ್ನು ಹಾದಿ ತಪ್ಪಿಸಲು ನೇಮಕಾತಿ ಏಜೆಂಟುಗಳು ಯೋಜಿಸಿರುವ ಕೆಲಸಗಳಿಗೆ ಬೀಳುತ್ತಿದ್ದಾರೆ ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ಇಂತಹ ಗಾಳ ಎಷ್ಟು ದೊಡ್ಡದಾಗಿರಬಹುದು ಎನ್ನುವುದನ್ನು ಕುಟುಂಬವೊಂದರ ಬ್ಯಾಂಕ್ ಖಾತೆಯಲ್ಲೇ ಕಾಣಬಹುದು. ಓರ್ವ ವ್ಯಕ್ತಿಗೆ ಮುಂಗಡವಾಗಿ 11,000 ಅಮೆರಿಕನ್ ಡಾಲರ್ ನೀಡಿ, ಬಳಿಕ ಒಂದು ವರ್ಷದ ಅವಧಿಗೆ ತಿಂಗಳಿಗೆ 2,800 ಡಾಲರ್‌ಗಳ ವೇತನ ನೀಡುವುದಾಗಿ ಹೇಳಲಾಗಿತ್ತು. ಆತನಿಗೆ ಯೋಧರಿಗೆ ಅಡುಗೆ ಮಾಡುವ ಕೆಲಸ ನೀಡಲಾಗುತ್ತದೆ ಎಂದ ಕಾರಣದಿಂದ ಆತ ಈ ಕೆಲಸವನ್ನು ಒಪ್ಪಿಕೊಂಡಿದ್ದ. ಇದು ಇಂತಹ ಒಂದು ಲಭ್ಯ ಪ್ರಕರಣವಷ್ಟೇ. ಆತನೊಡನೆ ಯಾವುದೇ ವೃತ್ತಿಪರ ಒಪ್ಪಂದವನ್ನೂ ಮಾಡಿಕೊಂಡಿರುವುದಿಲ್ಲ.

ಆದರೆ, ಸಾಲದ ಹೊರೆಗೆ ಸಿಲುಕಿರುವ, ಮತ್ತು ನಿರುದ್ಯೋಗದ ಸುಳಿಗೆ ಬಿದ್ದಿರುವ ವ್ಯಕ್ತಿಗೆ ಇಂತಹ ಉದ್ಯೋಗದ ಭರವಸೆ ಎಂತಹ ಅನುಮಾನಗಳನ್ನೂ ನಿರಾಕರಿಸಿಬಿಡುತ್ತದೆ.

ಇನ್ನು ಎರಡನೇ ಉತ್ತರವೆಂದರೆ, ಅಪಾಯಕಾರಿ ಲೆಕ್ಕಾಚಾರ. ಸರ್ಕಾರದ ಸುತ್ತೋಲೆಯ ಪ್ರಕಾರ, ಬಹಳಷ್ಟು ಭಾರತೀಯರು ತಾವೇ ಸ್ವ ಇಚ್ಛೆಯಿಂದ ರಷ್ಯನ್ ಸೇನಾ ಪಡೆಗಳಿಗೆ ಸೇರ್ಪಡೆಗೊಂಡಿದ್ದು, ಒಂದು ಬಾರಿ ಸಾಕಷ್ಟು ಹಣಕಾಸು ಪ್ರಯೋಜನ ಪಡೆದುಕೊಂಡ ಬಳಿಕ, ತಾವು ಭಾರತ ಸರ್ಕಾರವನ್ನು ಸಂಪರ್ಕಿಸಿ ಬಿಡುಗಡೆಗೊಳಿಸುವಂತೆ ಕೋರಬಹುದು ಎಂದುಕೊಂಡಿದ್ದಾರೆ. ಇದು ಒಂದು ರೀತಿಯಲ್ಲಿ ನದಿ ತೀರದಲ್ಲಿ ಓರ್ವ ಜೀವರಕ್ಷಕ ಯಾವಾಗಲೂ ಇರುತ್ತಾನೆ ಎಂದುಕೊಂಡು ವೇಗವಾಗಿ ಹರಿಯುವ ನದಿಗೆ ಜಿಗಿದಂತಾಗುತ್ತದೆ.

ಯುದ್ಧದ ಸಮಯದ ಮಿಲಿಟರಿ ಒಪ್ಪಂದ ಎನ್ನುವುದು ತನಗೆ ಬೇಡವೆಂದಾಗ ರಾಜೀನಾಮೆ ನೀಡಿ ಹೊರಬರುವಂತಹ ಕಚೇರಿ ಕೆಲಸವಲ್ಲ. ಅದಲ್ಲದೆ, ಒಂದು ವಿದೇಶೀ ಸೇನಾಪಡೆ ಓರ್ವ ವ್ಯಕ್ತಿ ತನ್ನ ಮನ ಬದಲಾಯಿಸಿದ ಎಂದ ಮಾತ್ರಕ್ಕೆ ಆತನನ್ನು ಕೆಲಸದಿಂದ ಮುಕ್ತಗೊಳಿಸುವುದೂ ಇಲ್ಲ.

ಮೂರನೇ ವಿಚಾರವೆಂದರೆ, ಹೊಸ ದೇಶದ ಪೌರತ್ವ ಪಡೆಯಬಹುದು ಎನ್ನುವ ಕನಸು. ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತದಿಂದ ಹೊರನಡೆಯುವ ಒಂದಷ್ಟು ಜನರು ರಷ್ಯನ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ ಬಳಿಕವಷ್ಟೇ ಸಹಾಯಕ್ಕಾಗಿ ಭಾರತೀಯ ರಾಯಭಾರ ಕಚೇರಿಯ ಮೊರೆ ಹೋಗಿದ್ದಾರೆ.

ಈ ಬೆಳವಣಿಗೆ ನಿಜಕ್ಕೂ ಅತ್ಯಂತ ಕ್ರೂರವಾದದ್ದು ಎನ್ನಬಹುದು. ಏಕೆಂದರೆ, ಒಂದು ಬಾರಿ ಓರ್ವ ವ್ಯಕ್ತಿ ರಷ್ಯನ್ ಪೌರತ್ವವನ್ನು ಪಡೆದುಕೊಂಡರೆ, ಆತನ ಬಿಡುಗಡೆಗಾಗಿ ಆಗ್ರಹಿಸಲು ಭಾರತಕ್ಕೆ ಹೆಚ್ಚಿನ ಅವಕಾಶವೇ ಇರುವುದಿಲ್ಲ. ಮಾಸ್ಕೋ ಆತನನ್ನು ತನ್ನದೇ ಪ್ರಜೆಯಂತೆ ಪರಿಗಣಿಸಬಹುದು.

ನಾಲ್ಕನೇ ಅಂಶವೆಂದರೆ, ಅನಧಿಕೃತ ಮಧ್ಯವರ್ತಿಗಳು. ಇಂತಹ ಸೇನಾ ನೇಮಕಾತಿಗಳು ಕೇವಲ ಅಧಿಕೃತ ರಷ್ಯನ್ ಸೇನಾ ಸಂಸ್ಥೆಗಳಿಗೆ ಮಾತ್ರವೇ ಸೀಮಿತವಾಗಿಲ್ಲ ಎಂದು ಭಾರತ ಸರ್ಕಾರ ಎಚ್ಚರಿಸಿದೆ. ಬಹಳಷ್ಟು ಸರ್ಕಾರೇತರ ಸಂಸ್ಥೆಗಳು, ಸ್ವಯಂಸೇವಕ ಗುಂಪುಗಳೂ ಸಹ ವಿದೇಶಿಗರನ್ನು ಸೇನೆಗೆ ಸೇರ್ಪಡೆಗೊಳಿಸುವ ಕೆಲಸದಲ್ಲಿ ತೊಡಗಿದ್ದು, ಇಂತಹ ಅನಧಿಕೃತ ಉದ್ಯೋಗ ಅವಕಾಶಗಳನ್ನು ಒಪ್ಪಿಕೊಳ್ಳುವ ಭಾರತೀಯರಿಗೆ ಅತ್ಯಂತ ಸೀಮಿತ ಪ್ರಮಾಣದ ರಕ್ಷಣೆ ಲಭಿಸುತ್ತದಷ್ಟೇ. ಅವರ ಪಾಲಿಗೆ ಯಾವುದೇ ನಂಬಿಕಾರ್ಹ ಉದ್ಯೋಗ ಒಪ್ಪಂದವೂ ಇರುವುದಿಲ್ಲ, ದೂರು ಸಲ್ಲಿಸಲು ಜವಾಬ್ದಾರಿಯುತ ಕಚೇರಿಯೂ ಸಿಗುವುದಿಲ್ಲ.

ಇದಕ್ಕೆ ತೆರಬೇಕಾದ ಬೆಲೆಯನ್ನು ನಾವು ಜೀವದಲ್ಲೇ ಅಳೆಯಬೇಕಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಸಂಸತ್ತಿಗೆ ವಿದೇಶಾಂಗ ಸಚಿವಾಲಯ ನೀಡಿರುವ ಅಂಕಿಅಂಶಗಳ ಪ್ರಕಾರ, 2022ರ ಬಳಿಕ ಕನಿಷ್ಠ 202 ಭಾರತೀಯರು ರಷ್ಯನ್ ಸೇನೆಗೆ ಸೇರ್ಪಡೆಯಾಗಿದ್ದಾರೆ. ಅವರ ಪೈಕಿ 26 ಜನರು ಸಾವಿಗೀಡಾಗಿದ್ದು, ಏಳು ಜನರು ಕಾಣೆಯಾಗಿದ್ದಾರೆ. ಆ ಬಳಿಕ ಸೇನಾ ಸೇರ್ಪಡೆ, ಸಾವುನೋವಿನ ಸಂಖ್ಯೆಯೂ ಏರುಮುಖವಾಗಿಯೇ ಸಾಗಿದೆ.

ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟಿಗೆ ನೀಡಿದ ಮಾಹಿತಿಯಲ್ಲಿ ಸರ್ಕಾರ 217 ಭಾರತೀಯರು ರಷ್ಯನ್ ಸೇನೆಗೆ ಸೇರ್ಪಡೆಗೊಂಡಿದ್ದು, 49 ಜನರು ಸಾವಿಗೀಡಾಗಿದ್ದಾರೆ ಎಂದಿದೆ. ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು 227 ಜನರು ಸೇರ್ಪಡೆಗೊಂಡಿದ್ದು, 51 ಜನರು ಸಾವಿಗೀಡಾಗಿದ್ದಾರೆ, 139 ಜನರು ಬಿಡುಗಡೆಯಾಗಿದ್ದಾರೆ ಎಂದಿದ್ದಾರೆ. ಇಂತಹ ಪ್ರತಿಯೊಂದು ಸಂಖ್ಯೆಯ ಹಿಂದೆಯೂ ಫೋನಿನ ಬಳಿಯಲ್ಲೇ ಕಾದು ಕುಳಿತಿರುವ ತಾಯಂದಿರು ಇರುತ್ತಾರೆ, ಯಾರೋ ಏಜೆಂಟ್‌ಗೆ ಹಣ ಪಾವತಿಸಲು ಭೂಮಿಯನ್ನು ಮಾರಿದ ತಂದೆಯರು ಇರುತ್ತಾರೆ.

ಈಗಾಗಲೇ ಸಿಕ್ಕಿಹಾಕಿಕೊಂಡವರನ್ನು ನವದೆಹಲಿ ಕೈಬಿಟ್ಟಿಲ್ಲ. ಭಾರತ ಸರ್ಕಾರ ರಷ್ಯನ್ ಮಿಲಿಟರಿಯಲ್ಲಿ ಸೇರ್ಪಡೆಗೊಂಡಿರುವ ಎಲ್ಲ ಭಾರತೀಯರ ಕ್ಷಿಪ್ರ ಮತ್ತು ಸುರಕ್ಷಿತ ಬಿಡುಗಡೆಗಾಗಿ ರಷ್ಯನ್ ಸರ್ಕಾರದೊಡನೆ ಸಕ್ರಿಯವಾಗಿ ಚರ್ಚಿಸುತ್ತಿದೆ ಎಂದು ಸರ್ಕಾರ ತಿಳಿಸಿದೆ. ರಾಜತಾಂತ್ರಿಕತೆ ನಿಧಾನವಾಗಿ ಸಾಗುತ್ತದಾದರೂ, ಮದ್ದುಗುಂಡುಗಳು ನಿಧಾನವಾಗಿ ಚಲಿಸುವುದಿಲ್ಲವಲ್ಲ? ವಿದೇಶದ ಸೇನಾ ಕಂದಕದಲ್ಲಿ ಕುಳಿತಿರುವ ಪ್ರತಿಯೊಬ್ಬ ನಾಗರಿಕನೂ ಎರಡು ದೇಶಗಳ ನಡುವಿನ ಹಳೆಯ ಸ್ನೇಹವನ್ನು ಪರೀಕ್ಷೆಗೆ ಒಡ್ಡುತ್ತಿದ್ದಾನೆ. ಆದ್ದರಿಂದಲೇ ಈ ವಿಚಾರ ಆಯಾ ವ್ಯಕ್ತಿಗಳ ಕುಟುಂಬದಿಂದ, ಮನೆಗಿಂತಲೂ ಹೆಚ್ಚಿನ ತೂಕವನ್ನು ಹೊಂದಿದೆ.

ಈ ಬೆಳವಣಿಗೆಯ ಹಿಂದೆ ಗಮನಿಸಬೇಕಾದ ಅಂಶವೆಂದರೆ ಅವರ ಕುಟುಂಬಗಳ ನಿರಂತರ ಪ್ರಯತ್ನ. ಅವರು ಪ್ರತಿಯೊಂದು ಬಾಗಿಲನ್ನೂ ಬಡಿಯುತ್ತಿದ್ದು, ಎಲ್ಲ ವೀಡಿಯೋಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಕುಟುಂಬವನ್ನು ಬಡತನದಿಂದ ಮೇಲೆತ್ತುವ ಏಕೈಕ ಉದ್ದೇಶದಿಂದ ತೆರಳಿರುವ ಮಕ್ಕಳನ್ನು ಮರಳಿ ಕರೆತರಲು ಪ್ರಯತ್ನ ಮುಂದುವರಿಸಿದ್ದಾರೆ. ಅವರ ಧೈರ್ಯಕ್ಕೆ ಒಂದು ಪ್ರಾಮಾಣಿಕ ಉತ್ತರ ನೀಡಲೇಬೇಕು. ಎಷ್ಟೇ ದೊಡ್ಡ ಸಂಬಳವಾದರೂ ಅದು ಜೀವಕ್ಕಿಂತ ದೊಡ್ಡದಲ್ಲ. ಬೇರೆ ಯಾವುದೋ ದೇಶದ ಯುದ್ಧ ಭೂಮಿಯಲ್ಲಿ ಕೊನೆಯಾಗುವ ಉದ್ಯೋಗ ಉದ್ಯೋಗವೇ ಅಲ್ಲ. ಆದ್ದರಿಂದ, ನಮ್ಮ ದೇಶದೊಳಗೆ ಇರುವ ಉದ್ಯೋಗ ಎಷ್ಟೇ ಸಣ್ಣ ಸಂಬಳದ ಕೆಲಸವೇ ಆದರೂ, ವಿದೇಶೀ ಯುದ್ಧ ಭೂಮಿಯಲ್ಲಿ ಸಿಗುವ ದೊಡ್ಡ ವೇತನಕ್ಕಿಂತ ಎಷ್ಟೋ ಪಟ್ಟು ಮಿಗಿಲಾಗಿದೆ.

ಬರಹ: ಗಿರೀಶ್ ಲಿಂಗಣ್ಣ
ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+