ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಬಿಜೆಪಿ ನಾಯಕರು: ಹೇಗೆ ಗೊತ್ತಾ?
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲೀಗ ಸಂಚಲನ ಸೃಷ್ಟಿಯಾಗಿದೆ. ಶರದ್ ಪವಾರ್ ಆಪ್ತ ಅಜಿತ್ ಪವಾರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ, ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸಪೋರ್ಟ್ ಮಾಡಿದ್ದಾರೆ. ಮಹಾರಾಷ್ಟ್ರದ ಡಿಸಿಎಂ ಪಟ್ಟಕ್ಕೂ ಏರಿದ್ದಾರೆ. ಹಾಗಾದರೆ ಈ ಘಟನೆಗೆ ಕಾರಣವೇನು? ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬದಲಾವಣೆ ಹಿಂದೆ ಇರೋದು ಯಾರು? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಇಷ್ಟುದಿನ ಎನ್‌ಸಿಪಿ ಒಳಗೆ ಕುದಿಯುತ್ತಿದ್ದ ಕಿಚ್ಚು ಈಗ ಜ್ವಾಲೆಯಾಗಿದೆ. ಕಳೆದ ಕೆಲವು ತಿಂಗಳಿಂದ ಶರದ್ ಪವಾರ್ ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನಕ್ಕೆ ಈಗ ಅಂತಿಮ ಉತ್ತರ ಸಿಕ್ಕಿದೆ. ಲೋಕಸಭೆ ಚುನಾವಣೆಗೆ ಮೊದಲೇ ಮಹಾರಾಷ್ಟ್ರ ರಾಜಕೀಯ ದೇಶದ ಗಮನ ಸೆಳೆಯುತ್ತಿದೆ. ಮಹಾರಾಷ್ಟ್ರ ರಾಜಕಾರಣದಲ್ಲಿ ಒಂದಾನೊಂದು ಕಾಲದಲ್ಲಿ ಪ್ರಬಲ ಪಕ್ಷವಾಗಿ ಗುರುತಿಸಿಕೊಂಡಿದ್ದ ಎನ್‌ಸಿಪಿ, ಕೇಂದ್ರ ಸರ್ಕಾರ ರಚನೆಯಲ್ಲೂ ಪ್ರಭಾವ ಬೀರುವಷ್ಟು ಬಲವಾಗಿ ಬೆಳೆದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ NCP ಸ್ಥಿತಿ ಹದಗೆಟ್ಟಿದೆ. ಇದೇ ಸಂದರ್ಭದಲ್ಲಿ ಅಜಿತ್ ಪವಾರ್ ಕೂಡ ಕೈಕೊಟ್ಟಿದ್ದಾರೆ. ಆದರೆ ಅಜಿತ್ ಪವಾರ್ ಹೀಗೆ ದಿಢೀರ್ ಶರದ್ ಪವಾರ್‌ಗೆ ಕೈಕೊಟ್ಟಿದ್ದು ಏಕೆ? ಮುಂದೆ ಓದಿ.

ಮೊದಲೇ ಶುರುವಾಗಿತ್ತು ಫೈಟಿಂಗ್!
ಅಂದಹಾಗೆ ಕಳೆದ 2 ತಿಂಗಳಿಂದಲೂ ಪಕ್ಷದೊಳಗೆ ಅಸಮಾಧಾನ ಕುದಿಯುತ್ತಿತ್ತು. ಅಲ್ಲದೆ ಮೇ ತಿಂಗಳ ಆರಂಭದಲ್ಲಿ ಶರದ್ ಪವಾರ್ ಎನ್‌ಸಿಪಿ ಅಧ್ಯಕ್ಷ ಪಟ್ಟ ತೊರೆಯಲು ಮುಂದಾಗಿ ಗಮನ ಸೆಳೆದಿದ್ದರು. ರಾಜೀನಾಮೆ ಸಲ್ಲಿಸಿ ಮಹಾರಾಷ್ಟ್ರದ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದರು. ಕಡೆಗೆ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಶರದ್ ಪವಾರ್ ರಾಜೀನಾಮೆ ವಾಪಸ್ ಪಡೆದಿರುವುದಾಗಿ ಹೇಳಿದ್ರು. ಆಗಲೇ ಗೊತ್ತಾಗಿದ್ದು ಎನ್‌ಸಿಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ, ಪರಿಸ್ಥಿತಿ ಸರಿ ಹೋಗುವುದೂ ಇಲ್ಲ ಅನ್ನೋ ವಿಚಾರ. ಇದೀಗ ಅಜಿತ್‌ಗೆ ಡಿಸಿಎಂ ಸ್ಥಾನದ ಆಫರ್ ಸಿಗುತ್ತಿದ್ದಂತೆ ಪಕ್ಷ ಬಿಟ್ಟಿದ್ದಾರೆಂಬ ಆಕ್ರೋಶ ಮೂಡಿರುವಾಗಲೇ, ಮತ್ತೊಂದು ಕಟು ಸತ್ಯ ಸಂಚಲನ ಸೃಷ್ಟಿಸಿದೆ.
ಅಜಿತ್‌ಗೆ ಸಿಎಂ ಸ್ಥಾನ ಸಿಗುತ್ತಾ?
ಅಜಿತ್ ಹೀಗೆ ದಿಢೀರ್ ಪಕ್ಷ ಬಿಟ್ಟಿದ್ದು ಏಕೆ? ಕೇವಲ ಡಿಸಿಎಂ ಸ್ಥಾನಕ್ಕಾಗಿ ಪಕ್ಷ ಬಿಟ್ಟರಾ? ಇಲ್ಲ ಬೇರೆ ಏನಾದರೂ ರಣತಂತ್ರ ಇದೆಯಾ? ಹೀಗೆ ಸಾಲು ಸಾಲು ಪ್ರಶ್ನೆಗಳು ಇದೀಗ ನೆರೆ ರಾಜ್ಯ ಮಹಾರಾಷ್ಟ್ರ ರಾಜಕಾರಣವನ್ನ ಕಾಡುತ್ತಿದೆ. ಇದಕ್ಕೆಲ್ಲಾ ಒನ್‌ಲೈನ್ ಉತ್ತರವೆಂದರೆ ಅಧಿಕಾರ! ಯೆಸ್.. ಎನ್‌ಸಿಪಿ ಒಳಗೆ ಅಧಿಕಾರಕ್ಕಾಗಿ ಕಿತ್ತಾಟ ಶುರುವಾದಂತೆ ಕಾಣುತ್ತಿದೆ. ಅತ್ತ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಹಾಗೂ ಅಜಿತ್ ಪವಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು ಎಂಬ ಆರೋಪವಿತ್ತು. ಅದಕ್ಕೆ ಬಲ ನೀಡುವಂತೆ ಶರದ್ ಪಕ್ಷದ ಒಳಗೆ ಜಗಳ ಶುರುವಾಗಿತ್ತು. ಇನ್ನೊಂದ್ಕಡೆ ಈಗ ಪಕ್ಷ ಬಿಟ್ಟಿರುವ ಅಜಿತ್ ಪವಾರ್‌ಗೆ ಸಿಕ್ಕಿರುವ ಡಿಸಿಎಂ ಪಟ್ಟ ಮುಂದೆ ಸಿಎಂ ಪಟ್ಟವಾಗಿ ಪರಿವರ್ತನೆ ಆಗಲೂಬಹುದು.
ಒಂದೇ ಕಲ್ಲು.. ಎರಡು ಹಕ್ಕಿ..!
ಲೋಕಸಭೆ ಮೇಲೆ ಕಣ್ಣಿಟ್ಟಿರುವ ಮಹಾರಾಷ್ಟ್ರದ ಬಿಜೆಪಿ ನಾಯಕರಿಗೆ ಈಗ ಪ್ರಮುಖವಾದ ಎದುರಾಳಿ ಎನ್‌ಸಿಪಿ. ಹೇಗೆಂದರೆ ಈಗಾಗಲೇ ಶಿವಸೇನೆ ಛಿದ್ರವಾಗಿದ್ದು, ತನ್ನ ಮತ್ತೊಬ್ಬ ಎದುರಾಳಿಗೆ ಠಕ್ಕರ್ ಕೊಡಲು ಸ್ಥಳೀಯ ಬಿಜೆಪಿ ನಾಯಕರು ಈ ತಂತ್ರ ಅನುಸರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲೂ ಲೋಕಸಭೆ ಚುನಾವಣೆ ನಡೆದು 5-6 ತಿಂಗಳ ಒಳಗೆ ಮಹಾರಾಷ್ಟ್ರ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಇದೇ ಕಾರಣಕ್ಕೆ ಅಜಿತ್ ಪವಾರ್‌ಗೆ ಗಾಳ ಹಾಕಿದ್ದ ಸ್ಥಳೀಯ ನಾಯಕರು, ಈಗ ಡಿಸಿಎಂ ಸ್ಥಾನ ನೀಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಅಕಸ್ಮಾತ್ ಈ ರಣತಂತ್ರ ನಿಜವಾಗಿದ್ದೇ ಆದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗೆ ಗುರಿ ಇಟ್ಟಂತಾಗಿದೆ.

ಈಗ ನೀಡಿರುವ ಡಿಸಿಎಂ ಪಟ್ಟವೇ ಫೈನಲ್ ಅಲ್ಲ, ಏಕೆಂದರೆ ಮುಂದೆ ಏಕನಾಥ್ ಶಿಂಧೆ ನಿಯಂತ್ರಣಕ್ಕೆ ಅಜಿತ್ ಪವಾರ್ ಪವರ್ ನೀಡಬಹುದು. ಇತ್ತೀಚೆಗೆ ಏಕನಾಥ್ ಶಿಂಧೆ ಮತ್ತು ಬಿಜೆಪಿ ನಾಯಕರ ನಡುವೆಯೇ ಕಿತ್ತಾಟ ಜೋರಾಗಿದೆ. ಇಂತಹ ಪರಿಸ್ಥಿತಿ ಬಂದ್ರೆ ಏನಾದ್ರೂ ಬದಲಾವಣೆ ಎದುರಾದರೆ, ಮುಂದೆ ಅಜಿತ್‌ಗೆ ಸಿಎಂ ಸ್ಥಾನ ಸಿಕ್ಕರೂ ಸಿಗಬಹುದು. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಅಜಿತ್ ಪವಾರ್ ಬಲ ಸಿಗಲಿದೆ. ಈ ಎಲ್ಲಾ ಕಾರಣದಿಂದ ಈಗ ಅಜಿತ್ ಪವಾರ್ ಸೇರ್ಪಡೆ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಪವರ್ ನೀಡಿದೆ. ಈ ಬೆಳವಣಿಗೆ ವಿರುದ್ಧ ಶರದ್ ಪವಾರ್ ಯಾವ ದಾಳವನ್ನ ಉರುಳಿಸಲಿದ್ದಾರೆ? ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications