ದಿಲ್ಲಿ ರಾಜ್ಯ ಸರ್ಕಾರದ ಹೊಸ ಮುಖ್ಯಮಂತ್ರಿ ಯಾರು? ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ನವದೆಹಲಿ, ಸೆಪ್ಟೆಂಬರ್ 16: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎರಡು ದಿನಗಳ ನಂತರ ರಾಜೀನಾಮೆ ನೀಡುವುದಾಗಿ ಭಾನುವಾರ ಹೇಳಿದ್ದಾರೆ. ಮತ್ತು ಜನರು "ಪ್ರಾಮಾಣಿಕತೆಯ ಪ್ರಮಾಣಪತ್ರ" ನೀಡುವವರೆಗೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರಿಂದ ದೆಹಲಿಯಲ್ಲಿ ಶೀಘ್ರ ಚುನಾವಣೆಗೆ ಎದುರಾಗಲಿದೆ.
ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದು, ಆ ಜಾಗಕ್ಕೆ ಹೊಸಬರು ಯಾರು ಎನ್ನುವ ಚರ್ಚೆ ಇದೀಗ ಮುನ್ನಲೆಗೆ ಬಂದಿದೆ. ಅಬಕಾರಿ ನೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಶುಕ್ರವಾರ ತಿಹಾರ್‌ನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕೇಜ್ರಿವಾಲ್, ಜನರು ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡಿದ ನಂತರವೇ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದು, ಅಚ್ಚರಿಯ ನಿರ್ಧಾರದಿಂದ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ತಮ್ಮ ನಿರ್ಧಾರವನ್ನು ಪ್ರಕಟಿಸಿದ ಕೇಜ್ರಿವಾಲ್, ಇನ್ನೆರಡು ದಿನಗಳಲ್ಲಿ ಎಎಪಿ ಶಾಸಕರ ಸಭೆ ನಡೆಸುವುದಾಗಿ ಮತ್ತು ಪಕ್ಷದ ನಾಯಕರೊಬ್ಬರು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಸಿಎಂ ಗಾದಿಗೆ ಏರಲು ಎಎಪಿಯಲ್ಲಿ ನಾಯಕರ ದಂಡಿನ ನಡುವೆ ಲೆಕ್ಕಾಚಾರ ಶುರುವಾಗಿದೆ.
ದಿಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಸಮೀಪಿಸುತ್ತಿದೆ. 2025ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಕೇಜ್ರಿವಾಲ್ ಅವರು 2024ರ ನವೆಂಬರ್‌ನಲ್ಲೇ ಚುನಾವಣೆ ನಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮೂರು ತಿಂಗಳಿಗೆ ಮುನ್ನವೇ ಚುನಾವಣೆಗೆ ಹೋಗುವ ಕುರಿತಾಗಿ ಮಾತನಾಡುತ್ತಿದ್ಧಾರೆ. ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಸಮಯಕ್ಕೇ ದಿಲ್ಲಿ ವಿಧಾನಸಭಾ ಚುನಾವಣೆಯೂ ನಡೆಯಲಿ ಎಂದು ಕೇಜ್ರಿವಾಲ್ ಬಯಸುತ್ತಿದ್ದಾರೆ.
ಸಂಭಾವ್ಯ ಅಭ್ಯರ್ಥಿಗಳು ಇಲ್ಲಿವೆ
ಪ್ರಸ್ತುತ ದೆಹಲಿ ಶಾಸಕರಾದ ಅತಿಶಿ, ಸೌರಭ್ ಭಾರದ್ವಾಜ್, ಕೈಲಾಶ್ ಗಹ್ಲೋಟ್, ಗೋಪಾಲ್ ರೈ ಮತ್ತು ಇಮ್ರಾನ್ ಹುಸೇನ್ ಸೇರಿದ್ದಾರೆ. ಹೆಚ್ಚುವರಿಯಾಗಿ, ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಉನ್ನತ ಹುದ್ದೆಗೆ ಪರಿಗಣಿಸಬಹುದು ಎಂದು ಕೆಲವು ವರದಿಗಳು ಸೂಚಿಸುತ್ತವೆ. ಯಾವುದೇ ನಿರ್ದಿಷ್ಟ ಹೆಸರುಗಳನ್ನು ಉಲ್ಲೇಖಿಸದಿದ್ದರೂ ಮುಂದಿನ ಮುಖ್ಯಮಂತ್ರಿಯಾಗಿ ದಲಿತ ನಾಯಕನನ್ನು ನೇಮಿಸಬಹುದು ಎಂಬ ಊಹಾಪೋಹಗಳು ಸಹ ಕೇಳಿ ಬಂದಿವೆ.
ದಿಲ್ಲಿ ರಾಜ್ಯ ಸರ್ಕಾರದ ಸಚಿವೆ ಅತಿಶಿ ಅವರು ಸಿಎಂ ಸ್ಥಾನಕ್ಕೆ ಏರುವ ರೇಸ್‌ನಲ್ಲಿ ಮೊದಲ ಸಾಲಿನಲ್ಲಿ ಇದ್ದಾರೆ. ಶಿಕ್ಷಣ, ಲೋಕೋಪಯೋಗಿ ಸೇರಿದಂತೆ ಹಲವು ಪ್ರಮುಖ ಖಾತೆ ನಿಭಾಯಿಸುತ್ತಿರುವ ಅತಿಶಿಗೆ ಕೇಜ್ರಿವಾಲ್ ಅವರು ಪಟ್ಟ ಕಟ್ಟಬಹುದು ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಚಿವ ಸೌರಭ್ ಭಾರದ್ವಾಜ್ ಕೂಡಾ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಎಎಪಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಕೂಡಾ ರೇಸ್‌ನಲ್ಲಿ ಇದ್ದಾರೆ. ಎಎಪಿ ಸರ್ಕಾರದ ಹಿರಿಯ ಸದಸ್ಯ ಕೈಲಾಶ್ ಗೆಹ್ಲೋಟ್ ಕೂಡಾ ಸಿಎಂ ಪಟ್ಟದ ರೇಸ್‌ನಲ್ಲಿ ಪ್ರಮುಖರಾಗಿ ಗುರ್ತಿಸಿಕೊಂಡಿದ್ದಾರೆ. ಇದಲ್ಲದೆ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡಾ ಈ ಸಾಲಿನಲ್ಲಿ ಇದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ಘೋಷಿಸಿದ್ದು, ಒಂದು ವೇಳೆ ಚುನಾವಣಾ ಆಯೋಗ ನವೆಂಬರ್‌ನಲ್ಲೇ ಚುನಾವಣೆ ನಡೆಸಲು ಮುಂದಾದರೆ ಹೊಸ ಸಿಎಂ ಕೇವಲ ಮೂರು ತಿಂಗಳ ಕಾಲ ಮುಖ್ಯಮಂತ್ರಿ ಆಗಿರಲಿದ್ದಾರೆ. ಚುನಾವಣಾ ಆಯೋಗ 2025ರ ಫೆಬ್ರವರಿಯಲ್ಲೇ ಚುನಾವಣೆ ನಡೆಸಲು ಮನಸ್ಸು ಮಾಡಿದರೆ ಆಗ ನೂತನ ಸಿಎಂಗೆ ಆರು ತಿಂಗಳ ಕಾಲ ಸಿಎಂ ಸ್ಥಾನದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ.












Click it and Unblock the Notifications