ನಾಳೆ ದೆಹಲಿಯಲ್ಲಿ ಮಹಾರಾಷ್ಟ್ರದ ನೂತನ ಸಿಎಂ ನಿರ್ಧಾರ
ಮಹಾರಾಷ್ಟ್ರ ವಿಧಾನಸಭೆ ಪೂರ್ಣಗೊಂಡಿದ್ದು, ಇದೀಗ ನೂತನ ಸಿಎಂ ಯಾರು? ಎಂಬ ವಿಚಾರವಾಗಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸದ್ಯ ಎಲೆಕ್ಷನ್‌ನಲ್ಲಿ ಮಾಡಿಕೊಂಡಿರುವ ಮೈತ್ರಿಯಿಂದಾಗಿ ಸಿಎಂ ಘೋಷಣೆ ಕಗ್ಗಂಟಾಗಿದೆ.
ಶಿವಸೇನೆ ಹಾಗೂ ಬಿಜೆಪಿ ನಡುವಿನ ಮೈತ್ರಿಯಿಂದಾಗಿ ಸಿಎಂ ಸ್ಥಾನದ ನಿರ್ಧಾರ ಗೊಂದಲದಲ್ಲಿದೆ. ಒಂದೆಡೆ ಈವರೆಗೆ ಸಿಎಂ ಸ್ಥಾನದಲ್ಲಿದ್ದ ಏಕನಾಥ್ ಶಿಂಧೆಗೆ ಈ ಬಾರಿ ಕುರ್ಚಿ ಕೈತಪ್ಪುವ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಬಿಜೆಪಿಯ ದೇವೇಂದ್ರ ಫಡ್ನವೀಸ್‌ಗೆ ಸಿಎಂ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ಶುರುವಾಗಿದೆ.

ಅಲ್ಲಿ ಸದ್ಯ ಕುರ್ಚಿ ಕಿತ್ತಾಟ ಜೋರಾಗಿದ್ದು, ಈ ಗೊಂದಲ ಪರಿಹರಿಸಲು ನಾಳೆ ಎಲ್ಲರೂ ದೆಹಲಿಯಲ್ಲಿ ಸೇರಲಿದ್ದಾರೆ. ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ ನಡೆಯಲಿದ್ದು, ಇಲ್ಲಿಯೇ ಮಹಾರಾಷ್ಟ್ರದ ಮುಂದಿನ ಸಿಎಂ ಘೋಷಣೆಯಾಗುವ ಸಾಧ್ಯತೆಯೂ ಇದೆ. ಹಾಗಾಗಿ ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ ಹಾಗೂ ಅಜಿತ್ ಪವಾರ್ ನಾಳೆ ದೆಹಲಿಗೆ ಹಾರಲಿದ್ದಾರೆ.
ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ ಹಾಗೂ ನಾನು ನಾಳೆ ದೆಹಲಿಗೆ ಹೋಗುತ್ತಿದ್ದೇವೆ. ಅಲ್ಲಿ ಹೆಚ್ಚಿನ ಚರ್ಚೆ ನಡೆಯಲಿದೆ. ಸಿಎಂ ಸ್ಥಾನ ಹಾಗೂ ಸರ್ಕಾರ ರಚನೆಯ ಕುರಿತು ಚರ್ಚೆ ನಡೆಯಲಿದೆ ಎಂದು ಮಹಾರಾಷ್ಟ್ರದ ಮಾಜಿ ಡಿಸಿಎಂ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಹೇಳಿದ್ದಾರೆ. ನಾಳೆ ದೆಹಲಿಗೆ ಹೋಗುತ್ತೇವೆ. ಅಲ್ಲಿ ಎಲ್ಲ ಚರ್ಚೆಗಳು ನಡೆಯುತ್ತವೆ. ನಾಳೆ ಚರ್ಚೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ನಾಳೆ ಅಮಿತ್ ಶಾ ಅವರೊಂದಿಗೆ ಎಲ್ಲ ಮೂರು ಪಕ್ಷಗಳ (ಮಹಾಯುತಿಯ) ಸಭೆ ನಡೆಯಲಿದೆ ಎಂದು ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂಧೆ ಹೇಳಿದ್ದಾರೆ. ಆ ಸಭೆಯಲ್ಲಿ ವಿವರವಾದ ಚರ್ಚೆಗಳು ನಡೆಯುತ್ತವೆ. ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ನಮ್ಮ ಬಗ್ಗೆ ಏನೇನೋ ವದಂತಿ ಹಬ್ಬುತ್ತಿದೆ. ನಾವು ಬೇಸರಗೊಳ್ಳುವ ಜನರಲ್ಲ. ನಾನು ನಿನ್ನೆ ಪ್ರಧಾನಿಯವರೊಂದಿಗೆ ಮಾತನಾಡಿದ್ದೇನೆ. ಸರ್ಕಾರ ರಚನೆಗೆ ನಮ್ಮ ಕಡೆಯಿಂದ ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದ್ದೇನೆ. ಬಿಜೆಪಿಯ ತೀರ್ಮಾನವೇ ಅಂತಿಮ. ಎನ್‌ಡಿಎ ನಾಯಕ ಯಾರು? ಪ್ರಧಾನಿ ಮೋದಿ ಮತ್ತು ಎಚ್‌ಎಂ ಅಮಿತ್ ಶಾ ಅವರು. ಹೀಗಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ನಮ್ಮ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಪುನರುಚ್ಛರಿಸಿದ್ದಾರೆ.

ನಾನು ಇಬ್ಬರಿಗೂ ಹೇಳಿದ್ದೇನೆ. ನೀವು ನಿರ್ಧಾರ ಮಾಡಿ, ನಾವು ನಿಮ್ಮ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ. ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕರು ಏನೇ ನಿರ್ಧಾರ ಕೈಗೊಂಡರೂ ಅವರ ಅಭ್ಯರ್ಥಿಗೆ ಶಿವಸೇನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಶಿಂಧೆ ಸ್ಪಷ್ಟನೆ ನೀಡಿದ್ದಾರೆ.
ಮಹಾಯುತಿಯನ್ನು ಬೆಂಬಲಿಸಿ, ನಮಗೆ ಅಭೂತಪೂರ್ವ ವಿಜಯವನ್ನು ನೀಡಿದ ಮಹಾರಾಷ್ಟ್ರದ ಎಲ್ಲ ಮತದಾರರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ಅಭೂತಪೂರ್ವ ಗೆಲುವು. ಸಾಮಾನ್ಯ ಶಿವಸೈನಿಕನನ್ನು ಸಿಎಂ ಮಾಡುವ ಬಾಳಾಸಾಹೇಬ್ ಠಾಕ್ರೆಯವರ ಕನಸನ್ನು ಅಮಿತ್ ಶಾ ಮತ್ತು ಪ್ರಧಾನಿ ಮೋದಿ ನನಸು ಮಾಡಿದ್ದಾರೆ. ಅವರು ಯಾವಾಗಲೂ ನನ್ನೊಂದಿಗೆ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications