ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬರುವ ಪಕ್ಷ ಯಾವುದು, ಚುನಾವಣಾ ಪೂರ್ವ ಸಮೀಕ್ಷಾ ವಿವರ ಬಹಿರಂಗ
ಜೈಪುರ, ನವೆಂಬರ್ 23: ರಾಜಸ್ಥಾನ ವಿಧಾನಸಭಾ ಚುನಾವಣೆ ಕಣ ರಂಗೇರಿದ್ದು, ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಅಧಿಕಾರ ಹಿಡಿಯುವ ಬಿಜೆಪಿ ಹಿರಿಯ ನಾಯಕರನ್ನು ಸ್ಪರ್ಧೆಗಿಳಿಸಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ಮತಯಾಚನೆ ಮಾಡುತ್ತಿದೆ.
ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರ ಬಿದ್ದಿದೆ. ಈ ನಿಟ್ಟಿನಲ್ಲಿ ಲೋಕ್‌ಪೋಲ್ ತನ್ನ ವರದಿ ಬಿಡುಗಡೆ ಮಾಡಿದೆ. ಅದರ ವಿವರಗಳು ಈಗ ಬಹಿರಂಗವಾಗಿದೆ. ಆ ವರದಿ ಪ್ರಕಾರ ಆಡಳಿತರೂಢ ಕಾಂಗ್ರೆಸ್ 87ರಿಂದ 93 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದರೆ ವಿಪಕ್ಷ ಬಿಜೆಪಿ 92ರಿಂದ 98 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿದು ಬಂದಿದೆ. ಇನ್ನು ಇತರರು 12ರಿಂದ 18 ಮಂದಿ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.

ಈ ಸಮೀಕ್ಷೆಗಾಗಿ ಲೋಕ್‌ಪೋಲ್ ಸುಮಾರು 62,500 ಜನರ ಅಭಿಪ್ರಾಯ ಸಂಗ್ರಹಿಸಿರುವುದಾಗಿ ತಿಳಿಸಿದೆ. ಮತ್ತೆ ಅಧಿಕಾರ ಹಿಡಿದೇ ತೀರುವ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ರಾಜಸ್ಥಾನ ಮಾತ್ರವಲ್ಲದೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜಾತಿ ಗಣತಿ ನಡೆಸುವುದಾಗಿ ಹೇಳಿಕೊಂಡಿದೆ.
ಇದಲ್ಲದೆ ಕರ್ನಾಟಕದಲ್ಲಿ ಘೋಷಣೆ ಮಾಡಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ರಾಜಸ್ಥಾನದಲ್ಲೂ ಜಾರಿ ಮಾಡುವುದಾಗಿ ತಿಳಿಸಿದೆ. ಇದಕ್ಕೆ ಪ್ರತಿತಂತ್ರವಾಗಿ ರಾಜ್ಯದಲ್ಲಿ ಗೋಧಿಗೆ ಕ್ವಿಂಟಲ್‌ಗೆ 2015 ರೂ. ಬೆಂಬಲ ಇದ್ದು, ತಾವು ಅಧಿಕಾರಕ್ಕೆ ಬಂದರೆ 2800 ರೂ.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ. ವಿವಿಧ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಸಮಗ್ರ ಪರಿಹಾರ ಯೋಜನೆ ರೂಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.
ಇದಲ್ಲದೆ ಮಹಿಳೆಯರ ಸುರಕ್ಷತೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್ ಸ್ಥಾಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ. ಣ್ಣು ಮಕ್ಕಳ ಯೋಗಕ್ಷೇಮವನ್ನು ಉತ್ತೇಜಿಸುವ ಯೋಜನೆಯನ್ನು ಬಿಜೆಪಿ ಘೋಷಿಸಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 500 ರೂ.ನಿಂದ 950 ರೂ.ಗೆ ಸಬ್ಸಿಡಿ ಹೆಚ್ಚಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.
ರಾಜಸ್ಥಾನದಲ್ಲಿ ನವೆಂಬರ್ 25 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 6 ಕೊನೆಯ ದಿನವಾಗಿದೆ. ನವೆಂಬರ್ 9 ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಪ್ರಸ್ತುತ ರಾಜಸ್ಥಾನ ವಿಧಾನಸಭೆಯ ಅಧಿಕಾರಾವಧಿಯು ಜನವರಿ 2024 ರಲ್ಲಿ ಕೊನೆಗೊಳ್ಳಲಿದೆ. ರಾಜಸ್ಥಾನ ವಿಧಾನಸಭೆ ಚುನಾವಣೆಯು 200 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ.
2018 ರ ಚುನಾವಣೆಯಲ್ಲಿ, ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದುಕೊಂಡಿತು. ಬಹುಮತಕ್ಕೆ ಕೇವಲ ಎರಡು ಸೀಟುಗಳು ಕಡಿಮೆಯಾಗಿತ್ತು. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಶಾಸಕರಿಂದ ಬೆಂಬಲ ಪಡೆದು ಕಾಂಗ್ರೆಸ್ ಅಧಿಕಾರ ಹಿಡಿಯಿತು. ಮತ್ತೊಂದೆಡೆ ಭಾರತೀಯ ಜನತಾ ಪಕ್ಷವು 73 ಸ್ಥಾನಗಳಲ್ಲಿ ಜಯಗಳಿಸಿ ವಿರೋಧ ಪಕ್ಷವಾಗಿ ಹೊರಹೊಮ್ಮಿತು.
ರಾಜ್ಯದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತೆ ಸಿಎಂ ಆಗಲಿ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ ಎಂದು ಕೆಲವು ಸಮೀಕ್ಷೆಗಳು ವಿವರಿಸಿದ್ದು, ಭರದ ಪ್ರಚಾರ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ವಸುಂದರಾ ರಾಜೇ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ವರ್ಚಸ್ಸು ಈ ಚುನಾವಣೆಯಲ್ಲಿ ಕೆಲಸ ಮಾಡಬಹುದು ಎನ್ನಲಾಗುತ್ತಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ರಾಜಸ್ಥಾನದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಇದು ಬಿಜೆಪಿ ಪರ ಅಲೆಯನ್ನು ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications