ತಟ್ಟಿದ ಬೆಲೆ ಏರಿಕೆ ಬಿಸಿ: ಭಾರತದಿಂದ ಗೋಧಿ ರಫ್ತಿಗೆ ತಕ್ಷಣದಿಂದಲೇ ನಿರ್ಬಂಧ
ನವದೆಹಲಿ, ಮೇ 14: ಜಗತ್ತಿಗೆ ಅತಿಹೆಚ್ಚು ಗೋಧಿ ರಫ್ತು ಮಾಡುವ ಭಾರತದಲ್ಲೇ ಬೆಲೆ ಆಕಾಶಕ್ಕೆ ಏರಿದೆ. ಬೆಲೆ ಏರಿಕೆ ಹಿನ್ನೆಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತು ಮಾಡುವುದನ್ನು ನಿರ್ಬಂಧಿಸಲಾಗಿದೆ.
ಈಗಾಗಲೇ ನೀಡಲಾಗಿರುವ ಸಾಲ ಪತ್ರಗಳಿಗೆ ಗೋಧಿ ರವಾನೆಗೆ ಅನುಮತಿ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಫೆಬ್ರವರಿ ಅಂತ್ಯದಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ನಂತರ ಕಪ್ಪು ಸಮುದ್ರದ ಪ್ರದೇಶದಿಂದ ರಫ್ತು ಕುಸಿದಿದೆ. ಹೀಗಾಗಿ ಜಾಗತಿಕ ಖರೀದಿದಾರರು ಗೋಧಿ ಪೂರೈಕೆಗಾಗಿ ಭಾರತವನ್ನು ಅವಲಂಬಿಸಿದೆ.
ದೇಶದಲ್ಲಿ ಗೋಧಿ ಮತ್ತು ಗೋಧಿ ಉತ್ಪನ್ನಗಳ ಬೆಲೆಗಳು ಶೇಕಡಾ 15-20 ರಷ್ಟು ಏರಿಕೆಯಾಗಿದ್ದು, ಜಾಗತಿಕ ಗೋಧಿ ಬೆಲೆ 14 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಾಗತಿಕ ಗೋಧಿ ಬೆಲೆಗಳ ಏರಿಕೆಯು ನಡೆಯುತ್ತಿರುವ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯಿಂದ ಪ್ರೇರೇಪಿಸಲ್ಪಟ್ಟಿದೆ. ಉಕ್ರೇನ್‌ನ ಮೇಲಿನ ರಷ್ಯಾದ ಯುದ್ಧ ಇದು ಬೃಹತ್ ಪೂರೈಕೆ ಅಡೆತಡೆಗಳಿಗೆ ಕಾರಣವಾಗಿದೆ.

14 ವರ್ಷಗಳಲ್ಲೇ ಗೋಧಿ ಬೆಲೆ ದುಬಾರಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ವೆಚ್ಚಗಳು ಏರಿಕೆಯಾಗಿದ್ದು, ಸರಬರಾಜು ಮತ್ತು ಸಾಗಾಟದ ವೆಚ್ಚಗಳು ಅಧಿಕವಾಗಿವೆ. ಈ ಹಿನ್ನೆಲೆ ಗೋಧಿ ಮತ್ತು ಮೆಕ್ಕೆಜೋಳದ ಬೆಲೆಯೂ ದುಬಾರಿಯಾಗಿದೆ.
ಭಾರತದಲ್ಲಿ ಅಟ್ಟಾ ಬೆಲೆಗಳು ಕಳೆದ ತಿಂಗಳು ಜನವರಿ 2010 ರಿಂದ ಅತ್ಯಧಿಕ ಏರಿಕೆ ಕಂಡಿತು, ಏಕೆಂದರೆ ದೇಶದಲ್ಲಿ ಗೋಧಿಯ ಉತ್ಪಾದನೆ ಮತ್ತು ದಾಸ್ತಾನುಗಳು ಪ್ರಮಾಣದಲ್ಲಿ ಅತಿಹೆಚ್ಚು ಕುಸಿತ ಕಂಡು ಬಂದಿದೆ. ಕಳೆದ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದಲ್ಲಿ ಭಾರತವು 70 LMT ಗೋಧಿಯನ್ನು ರಫ್ತು ಮಾಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ, ರಷ್ಯಾ-ಉಕ್ರೇನ್ ಸಂಘರ್ಷವು ಜಾಗತಿಕವಾಗಿ ಪೂರೈಕೆಯ ಕೊರತೆಯನ್ನು ಸೃಷ್ಟಿಸಿರುವುದರಿಂದ ರಫ್ತು ಹೆಚ್ಚಾಗುವ ಸಾಧ್ಯತೆಯಿದೆ.

ಕಳೆದೊಂದು ವರ್ಷದಲ್ಲಿ ಗೋಧಿ ಬೆಲೆಯಲ್ಲಿ ಹೆಚ್ಚಳ
ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆಯು ಏರಿಕೆ ಕಂಡಿದೆ. ಕಳೆದ ಏಪ್ರಿಲ್‌ನಲ್ಲಿ ಭಾರತದಲ್ಲೂ ಗೋಧಿಯ ಬೆಲೆಯು ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ. ಗೋಧಿಯ ಚಿಲ್ಲರೆ ಬೆಲೆಗಳು 2021ರ ಮಾರ್ಚ್ ತಿಂಗಳ ವೇಳೆಯಲ್ಲಿ 27.90 ರೂಪಾಯಿಯಿಂದ 2022ರ ಮಾರ್ಚ್ ವೇಳೆಗೆ ಕೆಜಿಗೆ 28.67 ರೂಪಾಯಿ ಆಗಿದೆ. ಗೋಧಿ ಚಿಲ್ಲರೆ ಬೆಲೆಗಳು ಮಾರ್ಚ್ 2021 ರಲ್ಲಿ ಪ್ರತಿ ಕೆಜಿಗೆ 31.77 ರೂಪಾಯಿಯಿದ್ದು, 2022ರ ಮಾರ್ಚ್ ವೇಳೆಗೆ ಅದು 32.03 ರೂಪಾಯಿಗೆ ಏರಿಕೆ ಆಗಿದೆ.

ಮುಕ್ತ ಮಾರುಕಟ್ಟೆಯಲ್ಲಿ ಕೊರತೆ ಆಗದಂತೆ ಪೂರೈಕೆ
ಪ್ರಸಕ್ತ ತಿಂಗಳಿನಲ್ಲಿ ನಡೆಯುತ್ತಿರುವ ಸಂಗ್ರಹಣೆಯೊಂದಿಗೆ ಗೋಧಿಯ ದೇಶೀಯ ಬೆಲೆಗಳನ್ನು ಸರ್ಕಾರವೇ ನಿರಂತರವಾಗಿ ಪರಿಶೀಲನೆ ಮಾಡುತ್ತಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಯಾವುದೇ ಕೊರತೆ ಬಾರದ ರೀತಿಯಲ್ಲಿ ಗೋಧಿ ಮಾರಾಟವನ್ನು ನಿರ್ವಹಿಸಲಾಗುವುದು ಎಂದು ವರದಿಯಾಗಿದೆ.

ಗೋಧಿ ದಾಸ್ತಾನು ಮಾಡುವುದರಲ್ಲಿ ಸಮತೋಲನ
2022-23ನೇ ಸಾಲಿನಲ್ಲಿ 100 LMT ಗೋಧಿಯನ್ನು ಸಂಗ್ರಹಿಸುವ ಮೂಲಕ ಪೂರೈಕೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರದ ಎಲ್ಲ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಗೋಧಿಯನ್ನು ಪೂರೈಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.












Click it and Unblock the Notifications