ಮಕ್ಕಳ WhatsApp ಬಳಕೆಗೆ ಪೋಷಕರೇ ಕಣ್ಗಾವಲು: ಆನ್‌ಲೈನ್ ಸುರಕ್ಷತೆಗಾಗಿ ಮೆಟಾ ಬಿಗ್ ಅಪ್ಡೇಟ್
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಮಕ್ಕಳ ದಿನನಿತ್ಯ ಜೀವನದ ಭಾಗವಾಗಿಬಿಟ್ಟಿದೆ. ಆನ್‌ಲೈನ್ ತರಗತಿಗಳು, ಶಾಲಾ ಪ್ರಾಜೆಕ್ಟ್‌ಗಳು ಹಾಗೂ ಸ್ನೇಹಿತರ ಜೊತೆಗಿನ ಸಂಪರ್ಕಕ್ಕಾಗಿ ಮಕ್ಕಳು ವ್ಯಾಪಕವಾಗಿ ಮೆಸೇಜಿಂಗ್ ಆ್ಯಪ್‌ಗಳನ್ನ ಬಳಸುತ್ತಿದ್ದಾರೆ. ಆದರೆ, ಅಪರಿಚಿತರ ಸಂಪರ್ಕ, ಅನಗತ್ಯ ಗ್ರೂಪ್‌ಗಳು ಹಾಗೂ ಸೈಬರ್ ಸುರಕ್ಷತೆಯ ಕೊರತೆಯು ಪೋಷಕರಲ್ಲಿ ಸದಾ ಆತಂಕವನ್ನುಂಟುಮಾಡುತ್ತಿತ್ತು.
ಈ ಆತಂಕಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಶ್ವದ ಪ್ರಮುಖ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮಕ್ಕಳ ಖಾತೆಗಳನ್ನ ಸುರಕ್ಷಿತವಾಗಿರಿಸಲು ವಾಟ್ಸಾಪ್‌ನ ಮಾತೃಸಂಸ್ಥೆ ಮೆಟಾ ಪೋಷಕರ ನಿಯಂತ್ರಣ ಎನ್ನುವ ಹೊಸ ವ್ಯವಸ್ಥೆಯನ್ನ ಅಧಿಕೃತವಾಗಿ ಜಾರಿಗೆ ತಂದಿದೆ.

ವಾಟ್ಸಾಪ್ ಪೋಷಕರ ನಿಯಂತ್ರಣ: ಮಕ್ಕಳ ಸುರಕ್ಷತೆಗೆ ಹೊಸ ವಿಧಾನ
ಮೆಟಾ ಸಂಸ್ಥೆಯು ಪರಿಚಯಿಸಿರುವ ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶ ಮಕ್ಕಳನ್ನ ಆನ್‌ಲೈನ್ ಜಗತ್ತಿನಲ್ಲಿ ಸಂಭವಿಸಬಹುದಾದ ಅಪಾಯಗಳಿಂದ ರಕ್ಷಿಸುವುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಪ್ರಾಪ್ತ ವಯಸ್ಕರು ಸೋಶಿಯಲ್ ಮೀಡಿಯಾಗಳಲ್ಲಿ ಮೋಸ ಹೋಗುವುದು ಅಥವಾ ಅಹಿತಕರ ಘಟನೆಗಳಿಗೆ ಒಳಗಾಗುವುದು ಹೆಚ್ಚುತ್ತಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೆಟಾ, ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಖಾತೆಯ ಮೇಲೆ ಸೂಕ್ತ ಮೇಲ್ವಿಚಾರಣೆ ನಡೆಸಲು ಅನುಕೂಲವಾಗುವಂತೆ ಈ ಫೀಚರ್ ರೂಪಿಸಿದೆ. ಇದರ ಮೂಲಕ ಮಕ್ಕಳು ಯಾರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಮತ್ತು ಯಾವ ರೀತಿಯ ಗ್ರೂಪ್‌ಗಳಲ್ಲಿ ಭಾಗಿಯಾಗಿದ್ದಾರೆ ಎಂಬುದರ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ.
ವಾಟ್ಸಾಪ್ ಪ್ರೈವಸಿ ಸೆಟ್ಟಿಂಗ್ಸ್: ಪೋಷಕರ ಕೈಯಲ್ಲಿ ಸಂಪೂರ್ಣ ನಿಯಂತ್ರಣ
ಈ ಹೊಸ ನಿಯಮಗಳ ಪ್ರಕಾರ, ಪೋಷಕರು ತಮ್ಮ ಫೋನ್ ಮೂಲಕವೇ ಮಕ್ಕಳ ವಾಟ್ಸಾಪ್ ಪ್ರೈವಸಿ ಸೆಟ್ಟಿಂಗ್ಸ್‌ಗಳನ್ನ ಬದಲಾಯಿಸಬಹುದು. ಮಕ್ಕಳ ಪ್ರೊಫೈಲ್ ಫೋಟೋ, ಲಾಸ್ಟ್ ಸೀನ್ ಹಾಗೂ ಸ್ಟೇಟಸ್‌ಗಳನ್ನ ಯಾರು ನೋಡಬಹುದು ಎಂಬುದನ್ನ ಪೋಷಕರೇ ನಿರ್ಧರಿಸಲು ಸಾಧ್ಯವಿದೆ.
ಇದರ ಜೊತೆಗೆ, ಅಪರಿಚಿತರು ಮಕ್ಕಳನ್ನು ಯಾವುದೇ ಹೊಸ ಗ್ರೂಪ್‌ಗಳಿಗೆ ಸೇರಿಸದಂತೆ ನಿರ್ಬಂಧ ವಿಧಿಸುವ ಅಧಿಕಾರವೂ ಪೋಷಕರಿಗೆ ದೊರೆಯುತ್ತದೆ. ಕೇವಲ ಪರಿಚಿತರು ಮಾತ್ರ ಮಕ್ಕಳನ್ನು ಸಂಪರ್ಕಿಸುವಂತೆ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೊಳಿಸಲು ಇದು ನೆರವಾಗಲಿದೆ.
ಗ್ರೂಪ್ ನೋಟಿಫಿಕೇಶನ್ ಮತ್ತು ಚಾಟ್ ಗೌಪ್ಯತೆ
ಮಕ್ಕಳು ಯಾವುದೇ ವಾಟ್ಸಾಪ್ ಗ್ರೂಪ್‌ಗೆ ಹೊಸದಾಗಿ ಸೇರಿದಾಗ ಅಥವಾ ಇರುವ ಗ್ರೂಪ್‌ನಿಂದ ಹೊರಬಂದಾಗ (Exit ಆದಾಗ), ಪೋಷಕರ ಫೋನ್‌ಗೆ ತಕ್ಷಣವೇ ನೋಟಿಫಿಕೇಶನ್ ಮೂಲಕ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಇದರಿಂದ ಮಕ್ಕಳು ಯಾವ ಗುಂಪಿನಲ್ಲಿದ್ದಾರೆ ಎಂಬುದರ ನಿಖರ ಮಾಹಿತಿ ಪೋಷಕರಿಗೆ ಲಭ್ಯವಾಗುತ್ತದೆ.
ಅದೇ ಸಮಯದಲ್ಲಿ, ಮಕ್ಕಳ ವೈಯಕ್ತಿಕ ಗೌಪ್ಯತೆಗೂ ಕಂಪನಿ ಆದ್ಯತೆ ನೀಡಿದೆ. ಪೋಷಕರು ಮಕ್ಕಳ ಖಾತೆಯನ್ನ ನಿಯಂತ್ರಿಸಬಹುದಾದರೂ, ಮಕ್ಕಳು ಕಳುಹಿಸಿದ ಅಥವಾ ಸ್ವೀಕರಿಸಿದ ಸಂದೇಶಗಳನ್ನ ಓದಲು ಅವರಿಗೆ ಸಾಧ್ಯವಾಗುವುದಿಲ್ಲ. ವಾಟ್ಸಾಪ್‌ನ ಪ್ರಮುಖ ವೈಶಿಷ್ಟ್ಯವಾದ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ (End-to-End Encryption) ಹಾಗೆಯೇ ಉಳಿಯಲಿದ್ದು, ಸಂಭಾಷಣೆಯ ಗೌಪ್ಯತೆಗೆ ಯಾವುದೇ ಧಕ್ಕೆ ಬರುವುದಿಲ್ಲ.


Click it and Unblock the Notifications
