Maharashtra Election: ಚುನಾವಣಾ ಕಣದಲ್ಲಿರೋ ಬಾಬಾ ಸಿದ್ದಿಕ್ ಪುತ್ರನ ಆಸ್ತಿ ಎಷ್ಟು?
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆ ಇತ್ತೀಚೆಗೆ ಗುಂಡಿನ ದಾಳಿಯಲ್ಲಿ ಮೃತಪಟ್ಟ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಪುತ್ರ ಜೀಶಾನ್ ಸಿದ್ದಿಕ್ ಬಾಂದ್ರಾ ಪೂರ್ವ ಕ್ಷೇತ್ರದಿಂದ ಎನ್‌ಸಿಪಿ ಕಣಕ್ಕಿಳಿಸಿದೆ. ಶಿವಸೇನಾ (ಯುಬಿಟಿ) ಅಭ್ಯರ್ಥಿ ವರುಣ್ ಸರ್ದೇಸಾಯಿ ಎದುರು ಜೀಶಾನ್ ತೊಡೆತಟ್ಟಿದ್ದಾರೆ.
ವರುಣ್ ಸರ್ದೇಸಾಯಿ ಅವರು ಆದಿತ್ಯ ಠಾಕ್ರೆಯವರ ಸೋದರ ಸಂಬಂಧಿ ಎನ್ನಲಾಗಿದೆ. ಜೀಶಾನ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು. ಆದರೆ ನಂತರ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಜೀಶಾನ್, ನನ್ನ ತಂದೆ ಬಾಬಾ ಸಿದ್ದಿಕ್ ಜೀ ಅವರು ಯಾವಾಗಲೂ ಸಮಾಜದ ಬಡ ಮತ್ತು ದುರ್ಬಲ ವರ್ಗದವರಿಗಾಗಿ ಹೋರಾಡಿದರು. ಅವರು ಕಠಿಣ ಪರಿಶ್ರಮವನ್ನು ಬಲವಾಗಿ ನಂಬಿದ್ದರು. ನಾನು ಈ ಚುನಾವಣೆಯಲ್ಲಿ ಗೆಲ್ಲುವುದು ಅವರ ದೊಡ್ಡ ಕನಸಾಗಿತ್ತು ಎಂದು ನೆನೆದಿದ್ದಾರೆ.
ಈ ಹಿಂದೆ ನಾವು ಬಾಂದ್ರಾ ಪೂರ್ವ ಕ್ಷೇತ್ರದಲ್ಲಿ ಮಾಡಿದ ಎಲ್ಲ ಕೆಲಸಗಳನ್ನು ಜನ ನೋಡಿದ್ದಾರೆ. ಈಗ ನನ್ನ ತಂದೆಯವರ ಕನಸು ಈಡೇರಲಿದ್ದು, ಬಾಂದ್ರಾ ಪೂರ್ವ ಕ್ಷೇತ್ರದ ಜನರ ಸೇವೆ ಮಾಡುವುದು ನನ್ನ ಕರ್ತವ್ಯ ಎಂದಿದ್ದಾರೆ.

ಜೀಶಾನ್ ಆಸ್ತಿ ಎಷ್ಟು?: 2019ರಲ್ಲಿ ಜೀಶಾನ್ ಸಲ್ಲಿಸಿದ್ದ ಅಫಿಡವಿಟ್ ಮಾಹಿತಿಯ ಪ್ರಕಾರ, ಕಳೆದ ಚುನಾವಣೆಯ ನಂತರ ಸಿದ್ದಿಕ್ ಅವರ ನಿವ್ವಳ ಮೌಲ್ಯ ಸುಮಾರು 9 ಕೋಟಿ ರೂಪಾಯಿ ಎನ್ನಲಾಗಿದೆ. ಬ್ಯಾಂಕ್ ಠೇವಣಿ ಮತ್ತು ಷೇರುಗಳನ್ನು ಒಳಗೊಂಡ ಚರಾಸ್ತಿ ಸುಮಾರು 1.74 ಕೋಟಿ ರೂಪಾಯಿ ಎನ್ನಲಾಗಿದೆ.
ಸುಮಾರು 7.24 ಕೋಟಿ ಮೌಲ್ಯದ ಸ್ಥಿರಾಸ್ತಿಗಳು, ಮುಖ್ಯವಾಗಿ ವಸತಿ ಕಟ್ಟಡಗಳು ಜೀಶಾನ್ ಒಡೆತನದಲ್ಲಿದೆ. ಈ ಅಂಕಿಅಂಶಗಳು ಈಗ ಬದಲಾಗಿರಬಹುದು. ಇದಲ್ಲದೆ, ಜೀಶನ್ ಸಿದ್ದಿಕ್ 76 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.
ಸಿದ್ದಿಕ್ ಪ್ರಸ್ತುತ ಬಾಂದ್ರಾ ಪೂರ್ವದಿಂದ ಶಾಸಕರಾಗಿದ್ದಾರೆ. 2019ರ ಚುನಾವಣೆಯಲ್ಲಿ ಆಗಿನ ಮುಂಬೈ ಮೇಯರ್ ಆಗಿದ್ದ ಶಿವಸೇನೆಯ ವಿಶ್ವನಾಥ್ ಮಹದೇಶ್ವರ್ ಅವರನ್ನು 5,790 ಮತಗಳ ಅಂತರದಿಂದ ಮಣಿಸಿದ್ದರು. ಈಗ ಮತ್ತೆ ಅದೇ ಕ್ಷೇತ್ರದಿಂದ ಜೀಶಾನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಅಜಿತ್ ಪವಾರ್ ಅವರ ಎನ್‌ಸಿಪಿ ಬಣದ ಹಿರಿಯ ನಾಯಕ ಬಾಬಾ ಸಿದ್ದಿಕ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಮುಂಬೈನ ಬಾಂದ್ರಾದಲ್ಲಿ ಬಾಬಾ ಅವರ ಮೇಲೆ ಮೂವರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿಗೆ ಬಾಬಾ ಸಿದ್ದಿಕ್ ಪ್ರಾಣ ಬಿಟ್ಟಿದ್ದರು.
ಗುಂಡಿನ ದಾಳಿ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟೊತ್ತಿಗೆ ಬಾಬಾ ಅವರು ಜೀವಬಿಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದರು. ಮುಂಬೈ ಪೊಲೀಸರ ಪ್ರಕಾರ ಬಾಬಾ ಸಿದ್ದಿಕ್ ಅವರ ಮೇಲಿನ ಗುಂಡಿನ ದಾಳಿಗೆ ಆರೋಪಿಗಳು 9.9 ಎಂಎಂ ಪಿಸ್ತೂಲ್ ಬಳಸಿದ್ದರು.












Click it and Unblock the Notifications