Nirbhaya Scheme: ನಿರ್ಭಯಾ ನಿಧಿ ಎಂದರೇನು? ಭಾರತದಲ್ಲಿ ಮಹಿಳೆಯರ ಸುರಕ್ಷತೆಗೆ ಇದರ ಕೊಡುಗೆ ಏನು?
ನವದೆಹಲಿ, ಆಗಸ್ಟ್ 01: ಭಾರತದಲ್ಲಿ ಮಹಿಳೆಯ ಅಭಿವೃದ್ಧಿ ಹಾಗೂ ಸುರಕ್ಷತೆಗೆಂದು ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಹೊರತಂದಿದೆ. ಅದರಲ್ಲಿ ನಿರ್ಭಯಾ ನಿಧಿ ಯೋಜನೆಯೂ ಒಂದು. ಈ ಯೋಜನೆಯು ಮಹಿಳೆಯ ಸುರಕ್ಷತೆಗೆ ಮಹತ್ವದ ಕೊಡುಗೆ ನೀಡಿದೆ.
ಭಾರತದಲ್ಲಿ ಮಹಿಳೆಯರ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ನಿರ್ಭಯಾ ನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ನಿರ್ಭಯಾ ನಿಧಿ ಅಡಿಯಲ್ಲಿ ಮಹಿಳೆಯ ಸುರಕ್ಷತೆಗೆಂದು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 2012 ರಲ್ಲಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ನಿರ್ಭಯಾ ಹೆಸರಿನಡಿ ಈ ಮಹತ್ವದ ಯೋಜನೆಯನ್ನು ಘೋಷಿಸಲಾಗಿದೆ.

ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಆರ್ಥಿಕ ವ್ಯವಹಾರಗಳ ಇಲಾಖೆಯು ನಿಧಿಯ ಜವಾಬ್ದಾರಿಯನ್ನು ಹೊಂದಿದೆ. ನಿರ್ಭಯಾ ನಿಧಿಯನ್ನು ಹೇಗೆ ಹಂಚಬೇಕು, ಯಾವ ಉಪಕ್ರಮಕ್ಕೆ ಹಂಚಬೇಕು ಎಂಬುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ( ಇದು ನೋಡಲ್ ಏಜನ್ಸಿಯಾಗಿ ಕೆಲಸ ಮಾಡುತ್ತದೆ ) ನಿರ್ಧರಿಸುತ್ತದೆ.
ನಿರ್ಭಯಾ ನಿಧಿಯ ಅಡಿಯಲ್ಲಿ ಮಂಜೂರಾದ ಯೋಜನೆಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡುವುದು, ಪರಿಶೀಲಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ನೋಡಲ್ ಏಜನ್ಸಿಯ ಕೆಲಸವಾಗಿದೆ. ನಿರ್ಭಯ ಯೋಜನೆಯಡಿಯಲ್ಲಿ ರಾಜ್ಯಗಳು ಸಲ್ಲಿಸಿದ ಕಾರ್ಯಕ್ರಮಗಳನ್ನು ಪರಿಶೀಲಿಸುತ್ತದೆ. ಅವುಗಳನ್ನು ಅನುಮೋದಿಸುತ್ತದೆ. ಹಣವನ್ನು ಹಂಚಿಕೆ ಮಾಡಲು ಆರ್ಥಿಕ ವ್ಯವಹಾರಗಳ ಇಲಾಖೆಗೆ ಶಿಫಾರಸು ಮಾಡುತ್ತದೆ.
ನಿರ್ಭಯಾ ನಿಧಿಯ ಅಡಿಯಲ್ಲಿ, ಕೇಂದ್ರವು ರಾಜ್ಯಗಳಿಗೆ ಹಣವನ್ನು ನೀಡುತ್ತದೆ. ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಕಾರ್ಯಕ್ರಮಗಳಿಗೆ ಈ ಹಣವನ್ನು ಖರ್ಚು ಮಾಡಲಾಗುತ್ತದೆ.
ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸಾರ್ವತ್ರಿಕ ಸಹಾಯವಾಣಿಯನ್ನು ನೀಡಲಾಗಿದೆ. ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಜಾರಿಗೊಳಿಸಿದ ಯೋಜನೆಯಾಗಿದೆ. ಅತ್ಯಾಚಾರ ಸಂತ್ರಸ್ತರ ಪರಿಹಾರ ನಿಧಿಯನ್ನು ನಿರ್ಭಯಾ ನಿಧಿ ಅಡಿಯಲ್ಲಿ ನೀಡಲಾಗುತ್ತದೆ.
ನಿರ್ಭಯಾ ನಿಧಿಯ ಅಡಿಯಲ್ಲಿ ಮೂರು ಯೋಜನೆ
ಸಂಕಷ್ಟದಲ್ಲಿರುವ ಮಹಿಳೆಯರ ಕೈಹಿಡಿಯಲು ಸರಿಯಾದ ಕಾರ್ಯವಿಧಾನದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 3 ಯೋಜನೆಗಳನ್ನು ಜಾರಿಗೆ ತಂದಿದೆ.
- ಒನ್ ಸ್ಟಾಪ್ ಸೆಂಟರ್
- ಮಹಿಳಾ ಸಹಾಯವಾಣಿ
- ಮಹಿಳಾ ಪೊಲೀಸ್ ಸ್ವಯಂಸೇವಕಿ
ನಿರ್ಭಯಾ ನಿಧಿಯ ಅಡಿಯಲ್ಲಿ ಗೃಹ ಸಚಿವಾಲಯ ಅನುಷ್ಠಾನಗೊಳಿಸಿರುವ ಯೋಜನೆಗಳು ಈ ಕೆಳಗಿನಂತಿವೆ
- ಎಮರ್ಸೆನ್ಸಿ ರಿಸ್ಪಂಡ್ ಸಪೋರ್ಟ್ ಸಿಸ್ಟಮ್
- ಕೇಂದ್ರ ಸಂತ್ರಸ್ತರ ಪರಿಹಾರ ನಿಧಿ












Click it and Unblock the Notifications