• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಮತ್ತು ದೇಶದಾದ್ಯಂತ ಇರುವ ಮುಸ್ಲಿಮರಿಗೆ ಬಿಜೆಪಿ ನೀಡುತ್ತಿರುವ ಸಂದೇಶವೇನು?

|
Google Oneindia Kannada News

ಗುಜರಾತ್ ಚುನಾವಣೆ ಇನ್ನೇನು ದೂರವಿಲ್ಲ. ಮತದಾನಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಕಮಲ ಅರಳಿಸಲು ಭಾರಿ ಕಸರತ್ತು ನಡೆಸಿದೆ. ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್ ಮಾತ್ರವಲ್ಲದೆ ಎಎಪಿ ಕೂಡ ಬಿಜೆಪಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಈ ತ್ರಿಕೋನ ಸ್ಪರ್ಧೆಯಲ್ಲಿ ಜನ ಯಾರ ಕೈ ಹಿಡಿಯುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಇನ್ನೂ ಹಲವಾರು ಯೋಜನೆಗಳ ಮೂಲಕ ಮೂರು ಪ್ರಬಲ ಪಕ್ಷಗಳು ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಅದರಲ್ಲೂ ಬಿಜೆಪಿಗೆ ಗುಜರಾತ್ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದಂತೆ ಗುಜರಾತ್‌ನಲ್ಲೂ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಇದರ ಮಧ್ಯೆ ವೋಟ್‌ಬ್ಯಾಂಕ್ ಲೆಕ್ಕಾಚಾರಗಳು ನಡೆಯುತ್ತಿವೆ.

ಗುಜರಾತ್ ಚುನಾವಣೆ 2022: ಎಎಪಿಯಿಂದ 1 ಕ್ಷೇತ್ರಬಿಟ್ಟು ಮತ್ತೆಲ್ಲೆಡೆ ಅಭ್ಯರ್ಥಿಗಳ ಘೋಷಣೆ ಗುಜರಾತ್ ಚುನಾವಣೆ 2022: ಎಎಪಿಯಿಂದ 1 ಕ್ಷೇತ್ರಬಿಟ್ಟು ಮತ್ತೆಲ್ಲೆಡೆ ಅಭ್ಯರ್ಥಿಗಳ ಘೋಷಣೆ

ಜೊತೆಗೆ ಕೇಂದ್ರ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲೂ ಅಧಿಕಾರ ನಡೆಸುತ್ತಿರುವ ಬಿಜೆಪಿ ದೇಶದ ಜನರಿಗೆ ಮುಸ್ಲಿಂ ಸಮುದಾಯದ ಬಗ್ಗೆ ಹುಟ್ಟು ಹಾಕುತ್ತಿರುವ ಭಾವನೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಯಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣ, ನರೋಡಾ ಪಾಟಿಯಾ ಪ್ರಕರಣ, ಗುಜರಾತ್ 2002ರ ಹಿಂಸಾಚಾರ ಪ್ರಮುಖವಾಗಿವೆ.

ಬಿಜೆಪಿ ಮಾಡಿದ್ದೇನು?

ಬಿಜೆಪಿ ಮಾಡಿದ್ದೇನು?

ಮೊದಲನೆಯದಾಗಿ 2002ರಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಬಗ್ಗೆ ನೋಡುವುದಾದರೆ ಇದೊಂದು ಮನುಕುಲವೇ ತಲೆ ತಗ್ಗಿಸುವಂತ ಘಟನೆ. ಈ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಲು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಒಗ್ಗೂಡಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿದ ಪುರುಷರ ಗುಂಪು ಅದೆಂತ ಘೋರ ಅಪರಾಧ ಮಾಡಿತ್ತೆಂದರೆ ಅದನ್ನ ಯಾರೂ ಕೂಡ ಊಹಿಸಿರಲಿಲ್ಲ. ಅವರು ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಒಂದೇ ರಾತ್ರಿಯಲ್ಲಿ ಒಂಬತ್ತು ಸದಸ್ಯರನ್ನು ಕೊಂದ ಅಪರಾಧಿಗಳಾಗಿದ್ದಾರೆ. ಜೊತೆಗೆ ಅವರು ಆಕೆಯ (ಬಿಲ್ಕಿಸ್ ಬಾನೊ) ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬವನ್ನು ಕೊಲೆ ಮಾಡಿದ್ದರು.

ಇಂಥ ಅಪರಾಧಿಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡುವ ಜೊತೆಗೆ ಅವರ ಬಿಡುಗಡೆಯ ನಂತರ ಅವರಿಗೆ ಹೂಮಾಲೆ ಹಾಕಿ ಸಿಹಿ ಹಂಚಿ ಸಂಭ್ರಮಿಸುವ ಮೂಲಕ ಸ್ವಾಗತಿಸಲಾಗಿತ್ತು. ಈ ವಿಕೃತತೆಯ ಬಗ್ಗೆ ವ್ಯಾಪಕ ಆಕ್ರೋಶದ ಹೊರತಾಗಿಯೂ, ಬಿಜೆಪಿ ಅದನ್ನು ನಿರ್ಲಕ್ಷಿಸಿದೆ. ಬಿಡುಗಡೆಯ ಬಳಿಕ ಅತ್ಯಾಚಾರಿ-ಕೊಲೆಗಾರರು ಮುಕ್ತವಾಗಿ ತಿರುಗಾಡುವುದನ್ನು ಮುಂದುವರೆಸಿದ್ದಾರೆ. ಆದರೆ ಸಂತ್ರಸ್ತೆ ಬಿಲ್ಕಿಸ್ ಬಾನೊ ಮಾತ್ರ ರಾಜ್ಯ ಮತ್ತು ಆಡಳಿತ ಪಕ್ಷದ ನಿರ್ಧಾರದಿಂದ ಭಯ ಮತ್ತು ಹತಾಶೆಯಲ್ಲಿ ವಾಸಿಸುತ್ತಿದ್ದಾರೆ.

ಅಪರಾಧಿ ಮಗಳು ಚುನಾವಣಾ ಅಭ್ಯರ್ಥಿ

ಅಪರಾಧಿ ಮಗಳು ಚುನಾವಣಾ ಅಭ್ಯರ್ಥಿ

ಬಿಜೆಪಿಯಿಂದ ಮುಸ್ಲಿಮರ ಮನಸ್ಸಿನ ಮೇಲೆ ಅತ್ಯಂತ ಘೋರವಾದ ಆಕ್ರಮಣಗಳು ಕಂಡು ಬರುತ್ತಿವೆ. ಬಿಜೆಪಿ ನರೋಡಾ ಪಾಟಿಯಾ ಹತ್ಯಾಕಾಂಡದ ಅಪರಾಧಿಯ ಮಗಳನ್ನು ಗುಜರಾತ್ ಚುನಾವಣಾ ಅಭ್ಯರ್ಥಿ ಎಂದು ಹೆಸರಿಸಿದೆ. ನರೋಡಾದ ಬಿಜೆಪಿ ಅಭ್ಯರ್ಥಿ ಪಾಯಲ್ ಕುಕ್ರಾಣಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಭೀಕರ ಹತ್ಯಾಕಾಂಡದಲ್ಲಿ ಶಿಕ್ಷೆಗೊಳಗಾದ ಮನೋಜ್ ಕುಕ್ರಾಣಿ ಅವರ ಪುತ್ರಿ.

2002 ರಲ್ಲಿ ಮುಸ್ಲಿಮರ ವಿರುದ್ಧ ಕೆಲವು ಭೀಕರ ಅಪರಾಧಗಳನ್ನು ಮಾಡಿದ ಮನೋಜ್ ಕುಕ್ರಾಣಿ ಮತ್ತು ಅವನ ಗಲಭೆಕೋರರ ಗುಂಪು ಅದೇ ಪ್ರದೇಶದಲ್ಲಿ ತನ್ನ ಮಗಳ ಚುನಾವಣೆಗಾಗಿ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದಾನೆ.

ಫೆಬ್ರವರಿ 28, 2002 ರಂದು ನರೋಡಾ ಪಾಟಿಯಾದಲ್ಲಿ ಗಲಭೆ ಗುಂಪು 97 ಜನರನ್ನು ಕೊಂದಿತು. ಈ ಘಟನೆಯನ್ನು ನಂತರ ಗಲಭೆಯ ಸಮಯದಲ್ಲಿ "ಸಾಮೂಹಿಕ ಹತ್ಯೆಯ ಅತಿದೊಡ್ಡ ಪ್ರಕರಣ" ಎಂದು ದಾಖಲಾಯಿತು. ಕೊಲ್ಲುವ ಮೊದಲು ಮಹಿಳೆಯರು ಮತ್ತು ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು ಮತ್ತು ಮಕ್ಕಳನ್ನು ಜೀವಂತವಾಗಿ ಸುಡಲಾಯಿತು ಎಂದು ಹಲವಾರು ಸಾಕ್ಷಿಗಳು ಹೇಳಿದ್ದಾರೆ. ನರೋಡಾ ಪಾಟಿಯಾ ಪ್ರಕರಣದಲ್ಲಿ ಶಿಕ್ಷೆಗೊಳಗಾದ 32 ಮಂದಿಯಲ್ಲಿ ಮನೋಜ್ ಕುಕ್ರಾಣಿ ಒಬ್ಬರು. ಸೆಪ್ಟೆಂಬರ್ 2016 ರಲ್ಲಿ, ಗುಜರಾತ್ ಹೈಕೋರ್ಟ್ ಕುಕ್ರಾಣಿಗೆ ಜಾಮೀನು ನೀಡಿತು. ಸದ್ಯ ಅವರು ತಮ್ಮ ಪುತ್ರಿ ಮತ್ತು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ.

ಗುಜರಾತ್ 2002 ರ ಹಿಂಸಾಚಾರ

ಗುಜರಾತ್ 2002 ರ ಹಿಂಸಾಚಾರ

ಘೋರ ಅಪರಾಧಗಳ ಸಂತ್ರಸ್ತರಿಗೆ ನ್ಯಾಯಾಲಯಗಳು ವಿಳಂಬವಾದ ನ್ಯಾಯವನ್ನು ನೀಡಿದರೂ, ಬಿಜೆಪಿ ಅದನ್ನು ರದ್ದುಗೊಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ಮುಸ್ಲಿಮರನ್ನು ಅವಮಾನಿಸುವ ಮತ್ತು ಗುರಿಯಾಗಿಸುವ ರಾಜಕೀಯ ಮಾಡಲು ಮುಂದಾಗುತ್ತಿರುವುದು ವಿಪರ್ಯಾಸ.

ಅಯೋಧ್ಯೆಯಲ್ಲಿ ಕರಸೇವೆ ಮುಗಿಸಿ ವಾಪಸಾಗುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ 2002ರ ಫೆ.27ರಂದು ಗೋಧ್ರಾ ರೈಲು ನಿಲ್ದಾಣದ ಬಳಿ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ 59 ಮಂದಿ ಸುಟ್ಟುಕರಕಲಾಗಿದ್ದರು. ಮರುದಿನವೇ ಅಂದರೆ 2002 ಫೆ.28ರಂದು ಗುಜರಾತ್‌ನಲ್ಲಿ ಕೋಮುಗಲಭೆ ಆರಂಭವಾಗಿತ್ತು. 1044 ಮಂದಿ ಬಲಿಯಾಗಿದ್ದರು. ಆ ಪೈಕಿ 790 ಮಂದಿ ಮುಸ್ಲಿಮರು ಹಾಗೂ 254 ಹಿಂದುಗಳಾಗಿದ್ದರು.

ಈ ಗಲಭೆ ಸಂದರ್ಭದಲ್ಲಿ ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನೆಲೆಸಿದ್ದ ಕಾಂಗ್ರೆಸ್ಸಿನ ನಾಯಕ ಹಾಗೂ ಮಾಜಿ ಸಂಸದ ಎಹ್ಸಾನ್‌ ಜಾಫ್ರಿ ಸೇರಿದಂತೆ 68 ಮಂದಿಯನ್ನು ಕೊಲ್ಲಲಾಗಿತ್ತು. ಗುಜರಾತ್‌ನಲ್ಲಿ ನಡೆದ ಈ ಗಲಭೆಯ ಹಿಂದೆ ಉನ್ನತ ಮಟ್ಟದ ಸಂಚು ಅಡಗಿದೆ ಎಂದು ಎಹ್ಸಾನ್‌ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಕಾನೂನು ಹೋರಾಟ ಆರಂಭಿಸಿದ್ದರು. 2008ರಲ್ಲಿ ಸುಪ್ರೀಂಕೋರ್ಟ್‌ ಎಸ್‌ಐಟಿ ರಚನೆ ಮಾಡಿತ್ತು. 2012ರಲ್ಲಿ ಎಸ್‌ಐಟಿ ತನ್ನ ಅಂತಿಮ ವರದಿ ಸಲ್ಲಿಸಿ ಮೋದಿ ಸೇರಿ 64 ಮಂದಿಗೆ ಕ್ಲೀನ್‌ಚಿಟ್‌ ನೀಡಿತ್ತು. ಅದನ್ನು ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಅಂಗೀಕರಿಸಿತ್ತು.

ವಿಪಕ್ಷಗಳು ಮೌನ

ವಿಪಕ್ಷಗಳು ಮೌನ

ಈ ಘಟನೆಗಳನ್ನು ನೋಡಿದರೆ ಬಲಿಪಶುಗಳು ಮುಸ್ಲಿಮರಾಗಿರುವವರೆಗೆ ಅಪರಾಧಿಗಳನ್ನು ವೈಭವೀಕರಿಸಲು ಬಿಜೆಪಿ ಹಿಂಜರಿಯುವುದಿಲ್ಲ. ಇದಕ್ಕೆ ಬಿಲ್ಕಿಸ್‌ ಬಾನೋ ಪ್ರಕರಣ, ನರೋಡಾ ಪಾಟಿಯಾ ಪ್ರಕರಣ, 2002 ರ ಗುಜರಾತ್ ಹತ್ಯೆಗಳೇ ಸಾಕ್ಷಿ. ಇಂಥಹ ಘೋರ ಘಟನೆಗಳಲ್ಲಿ ಅಪರಾಧಿಯಾಗಿರುವವರಿಗೆ ಬೀದಿಗಳಲ್ಲಿ ಹಾರ ಹಾಕುವ ಮೂಲಕ ಜಯ ಸಾಧಿಸಿದವರಂತೆ ಸಂಭ್ರಮಿಸುತ್ತಿರುವುದು ನಿಜಕ್ಕೂ ಅವಮಾನಕರ ಸಂಗತಿ. ಅದೇ ಬಿಜೆಪಿಯ ಅತಿ ದೊಡ್ಡ ಗೆಲುವಾಗಿ ಹೋಗಿದೆ. ಇವುಗಳನ್ನು ಆಳಕ್ಕಿಳಿದು ನೋಡಿದರೆ ಮುಸ್ಲಿಮರನ್ನು ಅವಮಾನಿಸುವುದು ಮತ್ತು ಕಡೆಗಣಿಸುವುದೇ ಬಿಜೆಪಿಯ ಉದ್ದೇಶವಾಗಿದೆ ಎಂದೆನಿಸದೇ ಇರದು.

ಈ ಘೋರ ನಿದರ್ಶನಗಳ ಬಗ್ಗೆ ಎಎಪಿ ಮೌನವಾಗಿದೆ ಮತ್ತು ಗುಜರಾತ್ ಕಾಂಗ್ರೆಸ್ ಕೇವಲ ಮ್ಯೂಟ್ ಕಾಮೆಂಟ್‌ಗಳನ್ನು ಮಾತ್ರ ಮಾಡುತ್ತಿದೆ. ಇದು ಗುಜರಾತ್ ರಾಜಕೀಯದ ಸದ್ಯದ ಚಿತ್ರಣವಾಗಿದೆ.

English summary
Gujarat Assembly Elections 2022: What is BJP's message to Muslims in Gujarat and across the country? Bilkis Bano rape case, Naroda Patiya case, Gujarat 2002 violence incidents are being discussed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X