ಚುನಾವಣಾಪೂರ್ವ ಸಮೀಕ್ಷೆ: ಜೇಟ್ಲಿ, ನಿತೀಶ್ ಹೇಳಿದ್ದೇನು?
ನವದೆಹಲಿ, ಜ 25: ಚುನಾವಣಾಪೂರ್ವ ಸಮೀಕ್ಷೆಯ ಬಗ್ಗೆ ಬಿಜೆಪಿ ನಾಯಕ ಅರುಣ್ ಜೇಟ್ಲಿ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ನನಗಷ್ಟು ನಂಬಿಕೆ ಇಲ್ಲವೆಂದು ಜೇಟ್ಲಿ ಹೇಳಿದರೆ, ಸಮೀಕ್ಷಾ ವರದಿಗಳು ಮನೋರಂಜನಾ ವಸ್ತುವಾಗಿದೆ ಎಂದು ನಿತೀಶ್ ಲೇವಡಿ ಮಾಡಿದ್ದಾರೆ.
ಎರಡು ಏಜನ್ಸಿಗಳು ಚುನಾವಣಾಪೂರ್ವ ಸಮೀಕ್ಷೆ ನಡುಸುತ್ತಿದೆ, ಚುನಾವಣೆಗೆ ಇನ್ನೂ ನಾಲ್ಕು ತಿಂಗಳ ಮುನ್ನ ಸಮೀಕ್ಷೆ ನಡೆಸಿದರೆ ಅದರ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಬರುತ್ತದೆ. ಈಗ ನಡೆಯುತ್ತಿರುವ ಎರಡು ಸಮೀಕ್ಷೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ, ಆದರೂ ಸಮೀಕ್ಷೆಯ ಪರವಾಗಿ ನಾನು ಇಲ್ಲ ಎಂದು ಜೇಟ್ಲಿ ಹೇಳಿದ್ದಾರೆ. (ಐಬಿಎನ್ ಸಮೀಕ್ಷೆ: ಅಧಿಕಾರದತ್ತ ಬಿಜೆಪಿ ಹತ್ತಿರ, ಇನ್ನೂ ಹತ್ತಿರ)
ಬಿಹಾರದಲ್ಲಿ ಬಿಜೆಪಿ ನಲ್ವತ್ತಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಕೇವಲ 300 ರಿಂದ 400 ಜನರ ಅಭಿಪ್ರಾಯವನ್ನು ಪಡೆದು ನಡೆಸುವ ಈ ಸಮೀಕ್ಷೆ ಜನರಿಗೆ ಮನೋರಂಜನಾ ವಸ್ತು ಮತ್ತು ವಾಹಿನಿಗಳಿಗೆ TRP ಹೆಚ್ಚಿಸುವ ಕಾರ್ಯಕ್ರಮವಷ್ಟೇ ಎಂದು ನಿತೀಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಇದುವರೆಗೂ ಬಿಜೆಪಿ ಮತ್ತು ಒಕ್ಕೂಟ 183ಕ್ಕಿಂತ ಹೆಚ್ಚು ಸ್ಥಾನವನ್ನು ಗೆದ್ದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಇದಕ್ಕಿಂತ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಶಿವಸೇನೆ ಮತ್ತು ಶಿರೋಮಣಿ ಅಕಾಲಿದಳ ಈ ಬಾರಿ ಉತ್ತಮ ಸಾಧನೆ ಮಾಡಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಸಮೀಕ್ಷೆ ಚುನಾವಣೆಯ ಅಂತಿಮ ಫಲಿತಾಂಶವಲ್ಲ ಎನ್ನುವುದನ್ನು ಬಿಜೆಪಿ ನಾಯಕರು ಮೊದಲು ಅರಿಯ ಬೇಕು. ಸಮೀಕ್ಷೆಯ ವರದಿಯನ್ನು ಆಧರಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಮ್ಮ ಪಕ್ಷವನ್ನು ಟೀಕಿಸುತ್ತಿದ್ದಾರೆ, ಅಂತಿಮ ಫಲಿತಾಂಶ ಬಂದ ಮೇಲೆ ಬಿಜೆಪಿ ನಾಯಕರು ಮುಂದಿನ ಹೆಜ್ಜೆ ತೆಗೆದುಕೊಳ್ಳಲಿ ಎಂದು ನಿತೀಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ನಾಯಕ ಅರುಣ್ ಜೇಟ್ಲಿ ಸಮೀಕ್ಷೆಯ ಬಗ್ಗೆ ತನ್ನ ಬ್ಲಾಗಿನಲ್ಲಿ ಸವಿವರವಾಗಿ ಬರೆದಿದ್ದಾರೆ. ಬ್ಲಾಗಿನ ಲಿಂಕ್ ಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications