Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಪಶ್ಚಿಮ ಬಂಗಾಳದಲ್ಲಿ ಕಲ್ಲು ತೂರಾಟ
ಕೋಲ್ಕತ್ತ, ಡಿಸೆಂಬರ್ 03: ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ಹೊಸದಾಗಿ ಆರಂಭಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಪಶ್ಚಿಮ ಬಂಗಾಳದ ಮಾಲ್ಡಾ ನಿಲ್ದಾಣದ ಬಳಿ ಕಲ್ಲು ತೂರಾಟ ನಡೆದಿದೆ ಎಂದು ಮಂಗಳವಾರ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆ ನಡೆದ ಬಳಿಕ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸುವೆಂದು ಅಧಿಕಾರಿ, 'ಜೈ ಶ್ರೀ ರಾಮ್' ಘೋಷಣೆಗೆ ಸಂಬಂಧ ಕಲ್ಪಸಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಉದ್ಘಾಟನಾ ದಿನದಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರಿಯಾಗಿಸಿ 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗಲಾಗಿತ್ತು.

'ಇದು ದುರದೃಷ್ಟಕರ ಮತ್ತು ಅನಾರೋಗ್ಯಕರ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಭಾರತದ ಹೆಮ್ಮೆಯ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಲಾಗಿದೆ. ಇದು ಉದ್ಘಾಟನಾ ದಿನದಂದು 'ಜೈ ಶ್ರೀ ರಾಮ್' ಘೋಷಣೆಗಳಿಗೆ ಪ್ರತೀಕಾರವೇ? ಈ ಪ್ರಕರಣ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಬೇಕು. ಅಪರಾಧಿಗಳನ್ನು ಶಿಕ್ಷಿಸಬೇಕೆಂದು ನಾನು ಒತ್ತಾಯಿಸುತ್ತೇನೆ' ಎಂದು ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಪ್ರಧಾನಿ ಕಚೇರಿ ಹಾಗೂ ಕೇಂದ್ರ ರೇಲ್ವೆ ಸಚಿವರನ್ನು ಟ್ಯಾಗ್ ಮಾಡಿದ್ದಾರೆ.
ಡಿಸೆಂಬರ್ 30 ರಂದು, ಹೌರಾ ನಿಲ್ದಾಣದಲ್ಲಿ ಕೂಗಿದ್ದ ಘೋಷಣೆಗಳು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. 'ಜೈ ಶ್ರೀರಾಮ್' ಎಂಬ ಘೋಷಣೆಗಳನ್ನು ಕೂಗಿದ ನಂತರ ಸಿಟ್ಟಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೇದಿಕೆಯ ಮೇಲೆ ಬರಲು ನಿರಾಕರಿಸಿದ್ದರು. ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಜೈ ಶ್ರೀ ರಾಮ್' ಎಂದು ಜೋರಾಗಿ ಘೋಷಣೆ ಕೂಗಿದ್ದರಿಂದ ಬ್ಯಾನರ್ಜಿ ಅಸಮಾಧಾನಗೊಂಡಿದ್ದರು.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಮಮತಾ ಅವರನ್ನು ಸಮಾಧಾನಪಡಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವೇದಿಕೆಯ ಕೆಳಗಿನ ಕುರ್ಚಿಯ ಮೇಲೆ ಪ್ರೇಕ್ಷಕರೊಂದಿಗೆ ಕುಳಿತುಕೊಳ್ಳಲು ನಿರ್ಧರಿಸಿದರು.
ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಾಣಿಸಿಕೊಂಡ ಪ್ರಧಾನಿಯನ್ನು ಬ್ಯಾನರ್ಜಿ ಅವರು ತಮ್ಮ ಆಸನದಿಂದಲೇ ಒಂದು ಸಣ್ಣ ಭಾಷಣದೊಂದಿಗೆ ಸ್ವಾಗತಿಸಿದ್ದರು. ಮೋದಿ ತಾಯಿ ಹೀರಾಬೆನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು.
'ನಿಮ್ಮ ತಾಯಿ ನಮ್ಮ ತಾಯಿಯೂ ಹೌದು' ಎಂದು ಮಮತಾ ಭಾವನಾತ್ಮಕವಾಗಿ ನುಡಿದಿದ್ದರು.

ಹೌರಾ ಮತ್ತು ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್, ಜೊತೆಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ್ದ ರೈಲ್ವೇ ಸಚಿವರು, ಮುಖ್ಯಮಂತ್ರಿಯನ್ನು ಪ್ರೀತಿ ಮತ್ತು ಗೌರವದಿಂದಲೇ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಹಣಕಾಸು ರಾಜ್ಯ ಸಚಿವ ಚಂದ್ರಿಮಾ ಭಟ್ಟಾಚಾರ್ಯ, 'ತಾಯಿಯನ್ನು ಕಳೆದುಕೊಂಡ ಕಷ್ಟದ ಸಮಯ ಪ್ರಧಾನಿಗಳಿದ್ದರು. ಆ ಸಮಯದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘನತೆಯನ್ನು ಉಳಿಸಿಕೊಂಡರು. ಆದರೆ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದ ಗಾಂಭೀರ್ಯವನ್ನು ಮರೆತು ಕುಣಿದು ಕುಪ್ಪಳಿಸಿದರು' ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೌರಾ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಮೊಳಗಿದ ಘೋಷಣೆಗಳನ್ನು ನಿಲ್ಲಿಸುವಂತೆ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಅವರು ಪ್ರಯತ್ನಿಸಿದರು.
ಕಳೆದ ವರ್ಷ, ಜನವರಿ 23 ರಂದು ಇಲ್ಲಿನ ವಿಕ್ಟೋರಿಯಾ ಸ್ಮಾರಕ ಸಭಾಂಗಣದಲ್ಲಿ ನೇತಾಜಿ ಸುಭಾಸ್ ಬೋಸ್ ಅವರ ಜನ್ಮದಿನವನ್ನು ಆಚರಿಸಲು ಕೇಂದ್ರ ಸರ್ಕಾರದ ಸಮಾರಂಭದಲ್ಲಿ ಬಿಜೆಪಿ ಬೆಂಬಲಿಗರು ಇದೇ ರೀತಿಯ ಘೋಷಣೆಗಳನ್ನು ಕೂಗಿದ್ದರು. ಈ ಘಟನೆಯ ಬಗ್ಗೆ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಮಾರಂಭದ ಗಾಂಭೀರ್ಯವನ್ನು ಪಕ್ಷಪಾತದಿಂದ ಅವಮಾನಿಸಲಾಗಿದೆ ಎಂದು ಪ್ರತಿಭಟಿಸಿದ್ದರು.












Click it and Unblock the Notifications