ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಮುಂದುವರಿದ ರಕ್ತಪಾತ, ಗುಂಡೇಟು, ಮತಗಟ್ಟೆ ಧ್ವಂಸ- 23 ಜನರ ಹತ್ಯೆ
ಕೋಲ್ಕತ್ತ, ಜುಲೈ 08: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆ ಹಿಂಸಾರೂಪ ಪಡೆದುಕೊಂಡಿದೆ. ಮತದಾನವು ಬಿಗಿ ಭದ್ರತೆಯ ನಡುವೆ ಶನಿವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದೆ. ಆದರೆ, ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮೂವರ ಹತ್ಯೆಯಾಗಿದೆ. ಚುನಾವಣಾ ದಿನಾಂಕಗಳನ್ನು ಘೋಷಿಸಿದಾಗಿನಿಂದ ಈ ವರೆಗೂ ಕೊಲೆಗೀಡಾದವರ ಸಂಖ್ಯೆ 23 ಕ್ಕೆ ತಲುಪಿದೆ.
ಪಶ್ಚಿಮ ಬಂಗಾಳದಲ್ಲಿ ಜೂನ್ 8 ರಿಂದ ಹಿಂಸಾಚಾರ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಹಲವಾರು ಹಿಂಸಾಚಾರ ಕೃತ್ಯಗಳಲ್ಲಿ 23 ಜನರು ಸಾವನ್ನಪ್ಪಿದ್ದಾರೆ. ಮತದಾನದ ದಿನವಾದ ಇಂದು ಬೆಳಿಗ್ಗೆ ಮೂವರ ಹತ್ಯೆಯಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಘಟನೆಯಲ್ಲಿ, ಮುರ್ಷಿದಾಬಾದ್ ಜಿಲ್ಲೆಯ ಉತ್ತರ 24 ಪರಗಣದ ಕದಂಬಗಚಿಯಲ್ಲಿ ಕೊಲೆಯಾದ ವ್ಯಕ್ತಿಯನ್ನು ಅಬ್ದುಲ್ಲಾ ಅಲಿ ಎಂದು ಗುರುತಿಸಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗದಲ್ಲಿ ಮತ್ತೊಬ್ಬ ವ್ಯಕ್ತಿಯ ಹತ್ಯೆಯಾಗಿದೆ.
ಕೂಚ್‌ಬೆಹಾರ್‌ನ ಸೀತಾಯ್‌ನಲ್ಲಿರುವ ಬರವಿತಾ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಯನ್ನು ಧ್ವಂಸಗೊಳಿಸಲಾಗಿದೆ ಮತ್ತು ಮತಪತ್ರಗಳಿಗೆ ಬೆಂಕಿ ಹಚ್ಚಲಾಗಿದೆ.
ಪಕ್ಷದ ಮೂವರು ಕಾರ್ಯಕರ್ತರನ್ನು ರೆಜಿನಗರ, ತುಫಂಗಂಜ್ ಮತ್ತು ಖಾರ್‌ಗ್ರಾಮ್‌ನಲ್ಲಿ ಕೊಲೆ ಮಾಡಲಾಗಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಇಬ್ಬರು ಡೊಮ್‌ಕೋಲ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

'ರೆಜಿನಗರ, ತುಫಂಗಂಜ್ ಮತ್ತು ಖಾರ್‌ಗ್ರಾಮ್‌ನಲ್ಲಿ ನಮ್ಮ ಪಕ್ಷದ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಮತ್ತು ಡೊಮ್‌ಕೋಲ್‌ನಲ್ಲಿ ಗುಂಡಿನ ದಾಳಿಯಿಂದ ಇಬ್ಬರು ಗಾಯಗೊಂಡಿದ್ದಾರೆ. ಬಿಜೆಪಿ, ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳು ಕೇಂದ್ರ ಪಡೆಗಳ ನಿಯೋಜನೆಗಾಗಿ ಕೂಗಾಟ ನಡೆಸಿವೆ. ಹಾಗಾದರೆ, ಕೇಂದ್ರ ಪಡೆಗಳು ಹೆಚ್ಚು ಅಗತ್ಯವಿರುವಾಗ ಈ ಕೊಲೆಗಳು ಏಕೆ ನಡೆಯುತ್ತಿವೆ?' ಎಂದು ಟಿಎಂಸಿ ಪ್ರಶ್ನಿಸಿದೆ.
ಜನರಿಗೆ ಸುರಕ್ಷತೆ ಮತ್ತು ಭದ್ರತೆ ನೀಡುವಲ್ಲಿ ಕೇಂದ್ರದ ಪಡೆಗಳು ವೈಫಲ್ಯವಾಗಿವೆ ಎಂದು ಟಿಎಂಸಿ ಟ್ವೀಟ್ ಮಾಡಿದೆ.
ಮುರ್ಷಿದಾಬಾದ್‌ನ ಖರ್ಗ್ರಾಮ್‌ನಲ್ಲಿ 52 ವರ್ಷದ ಟಿಎಂಸಿ ಕಾರ್ಯಕರ್ತ ಸತೇಶುದ್ದೀನ್ ಶೇಖ್ ಅವರನ್ನು ಕೊಲೆ ಮಾಡಲಾಗಿದೆ. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಂಚಾಯತ್ ಚುನಾವಣೆಯಲ್ಲಿ ತಪ್ಪದೇ ತಮ್ಮ ಹಕ್ಕು ಚಲಾಯಿಸುವಂತೆ ಗವರ್ನರ್ ಸಿವಿ ಆನಂದ ಬೋಸ್ ಗ್ರಾಮೀಣ ಬಂಗಾಳದ ಜನರನ್ನು ಒತ್ತಾಯಿಸಿದ್ದಾರೆ. ಹಲವು ಕ್ಷೇತ್ರಗಳ ಮತಗಟ್ಟೆಗಳಿಗೆ ಭೇಟಿ ನೀಡಿದ್ದಾರೆ. ಈ ಪಂಚಾಯತ್ ಚುನಾವಣೆಯನ್ನು 'ಬ್ಯಾಲೆಟ್ ಮತ್ತು ಬುಲೆಟ್‌ಗಳ ನಡುವಿನ ಹೋರಾಟ' ಎಂದು ರಾಜ್ಯಪಾಲರು ತಿಳಿಸಿದ್ದಾರೆ. ರಾಜ್ಯದಾದ್ಯಂತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದಾಗಿ ಮತ್ತು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆ ನಡೆಯಲಿದೆ. 73,887 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ಕಣದಲ್ಲಿ ಒಟ್ಟು 2.06 ಲಕ್ಷ ಅಭ್ಯರ್ಥಿಗಳು ಇದ್ದಾರೆ. 22 ಜಿಲ್ಲೆಗಳಲ್ಲಿ 63,229 ಗ್ರಾಮ ಪಂಚಾಯತ್ ಸ್ಥಾನಗಳಿವೆ. 9,730 ಪಂಚಾಯತ್ ಸಮಿತಿ ಸ್ಥಾನಗಳಿವೆ.
ಮತಗಟ್ಟೆಗಳ ಹೊರಗೆ ಸರತಿ ಸಾಲುಗಳು
ಬೆಳಿಗ್ಗೆ 6 ಗಂಟೆಯಿಂದಲೇ ಮತಗಟ್ಟೆಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಬೇಗನೇ ಬಂದು ಮತದಾನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆಡಳಿತಾರೂಢ ಟಿಎಂಸಿ ಜಿಲ್ಲಾ ಪರಿಷತ್‌ನ ಎಲ್ಲಾ 928 ಸ್ಥಾನಗಳು, ಪಂಚಾಯತ್ ಸಮಿತಿಗಳ 9,419 ಸ್ಥಾನಗಳು ಮತ್ತು ಗ್ರಾಮ ಪಂಚಾಯಿತಿಗಳ 61,591 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ 897 ಜಿಲ್ಲಾ ಪರಿಷತ್ ಸ್ಥಾನಗಳು, 7,032 ಪಂಚಾಯತ್ ಸಮಿತಿ ಸ್ಥಾನಗಳು ಮತ್ತು ಗ್ರಾಮ ಪಂಚಾಯಿತ್‌ನ 38,475 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಸಿಪಿಐ(ಎಂ) 747 ಜಿಲ್ಲಾ ಪರಿಷತ್ ಸ್ಥಾನಗಳು, 6,752 ಪಂಚಾಯತ್ ಸಮಿತಿ ಸ್ಥಾನಗಳು ಮತ್ತು 35,411 ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ 644 ಜಿಲ್ಲಾ ಪರಿಷತ್ ಸ್ಥಾನಗಳು, 2,197 ಪಂಚಾಯತ್ ಸಮಿತಿ ಸ್ಥಾನಗಳು ಮತ್ತು 11,774 ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.












Click it and Unblock the Notifications