By Polls: ಬಿಜೆಪಿಗೆ ಶಾಕ್ ಕೊಡುತ್ತಾರಾ ಮಮತಾ ಬ್ಯಾನರ್ಜಿ?
ಲೋಕಸಭೆ ಚುನಾವಣೆಗೆ ಮೊದಲು ವಿರೋಧ ಪಕ್ಷಗಳು ಒಕ್ಕೂಟ ರಚಿಸಿ, ಆಡಳಿತ ಪಕ್ಷದ ವಿರುದ್ಧ ತೊಡೆತಟ್ಟಿವೆ. ಈ ವೇಳೆ ಉಪಚುನಾವಣೆ ಅಖಾಡ ವಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಹೀಗೆ 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಸಲಾಗಿತ್ತು. ಇಂದು ಮತ ಎಣಿಕೆಯ ಕಾರ್ಯ ಶುರುವಾಗಿದ್ದು, ಪಶ್ಚಿಮ ಬಂಗಾಳದ ಅದೊಂದು ಕ್ಷೇತ್ರ ಬಿಜೆಪಿ & ಮಮತಾ ಬ್ಯಾನರ್ಜಿ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಹೌದು, 6 ರಾಜ್ಯಗಳ 7 ವಿಧಾನಸಭೆ ಕ್ಷೇತ್ರಗಳಿಗೆ ಮಂಗಳವಾರ ನಡೆದಿದ್ದ ಉಪಚುನಾವಣೆಯ ರಿಸಲ್ಟ್ ಇಂದು ರಿವೀಲ್ ಆಗುತ್ತಿದೆ. ಹೀಗೆ ಉಪಚುನಾವಣೆ ನಡೆದ ರಾಜ್ಯಗಳಲ್ಲಿ ಸ್ಥಾಪಿಸಿದ್ದ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕೆಲಸ ಆರಂಭವಾಗಿದೆ. ಇನ್ನು ಉತ್ತರಾಖಂಡದ ಬಾಗೇಶ್ವರ್, ಉತ್ತರ ಪ್ರದೇಶದ ಘೋಸಿ, ಕೇರಳದ ಪುತ್ತುಪಲ್ಲಿ ಸೇರಿದಂತೆ ಪಶ್ಚಿಮ ಬಂಗಾಳದ ಧೂಪ್‌ಗುರಿ, ಜಾರ್ಖಂಡ್‌ನ ಡುಮ್ರಿ ಮತ್ತು ತ್ರಿಪುರಾದ ಬಾಕ್ಸಾನಗರ್ & ಧನಪುರ್ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭವಾಗಿದೆ. ಆದ್ರೆ ಪಶ್ಚಿಮ ಬಂಗಾಳದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಮಮತಾ ಬ್ಯಾನರ್ಜಿ VS ಬಿಜೆಪಿ!
ಅಷ್ಟಕ್ಕೂ ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರ ಧೂಪ್‌ಗುರಿ ಸಾಕಷ್ಟು ಗಮನ ಸೆಳೆದಿದೆ. ಇಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಆದರೆ ಇದೀಗ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದ್ದು, ಮತ ಎಣಿಕೆ ಕಾರ್ಯ ಭರ್ಜರಿಯಾಗಿ ಸಾಗಿದೆ. ಆದರೆ ಈಗ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಶುರುವಾಗಿದೆ. ಈ ಕ್ಷೇತ್ರವನ್ನ ಮಮತಾ ಬ್ಯಾನರ್ಜಿ ತಮ್ಮ ಪ್ರತಿಷ್ಟೆಯಾಗಿ ಸ್ವೀಕರಿಸಿದ್ದು, ಬಿಜೆಪಿ ಕೂಡ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆದ್ದು ಬೀಗಲು ತೊಡೆ ತಟ್ಟಿದೆ. ಹೀಗಾಗಿ ಟಿಎಂಸಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಯ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಹಾಗಾದರೆ ಮತ ಎಣಿಕೆಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ?
ಟಿಎಂಸಿ ಅಭ್ಯರ್ಥಿಗೆ ಅಲ್ಪ ಮುನ್ನಡೆ!
ಮೊದಲೇ ಹೇಳಿದಂತೆ ಪಶ್ಚಿಮ ಬಂಗಾಳದ ಧೂಪ್‌ಗುರಿ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಕುತೂಹಲದ ಕಟ್ಟೆ ಒಡೆಯುವಂತೆ ಮಾಡಿದೆ. ಇಲ್ಲಿ ಗೆಲ್ಲುವುದು ಮಮತಾ ಬ್ಯಾನರ್ಜಿಗೆ & ಬಿಜೆಪಿ ನಾಯಕರಿಗೆ ಅನಿವಾರ್ಯ. ಹೀಗಾಗಿ ಜಿದ್ದಾಜಿದ್ದಿನ ಅಖಾಡದಲ್ಲಿ ಟಿಎಂಸಿ ಹಾಗೂ ಬಿಜೆಪಿ ಅಭ್ಯರ್ಥಿಗಳು ಸೆಣೆಸಾಡುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಟಿಎಂಸಿ ಅಭ್ಯರ್ಥಿಗೆ 28,886 ಮತಗಳು ಸಿಕ್ಕಿದ್ದರೆ ಬಿಜೆಪಿ ಅಭ್ಯರ್ಥಿಗೆ 28,785 ಮತಗಳು ಸಿಕ್ಕಿವೆ. ಹೀಗೆ ಕೇವಲ 100 ವೋಟ್ ಅಂತರದಲ್ಲಿ ಬಿಜೆಪಿ ಮತ್ತು ಟಿಎಂಸಿ ಸ್ಪರ್ಧೆ ನಡೆಸುತ್ತಿವೆ. ಟಿಎಂಸಿ ಪಕ್ಷದ ಅಭ್ಯರ್ಥಿಯಾಗಿ ನಿರ್ಮಲ್ ಚಂದ್ರ ರಾಯ್ ಸ್ಪರ್ಧಿಸಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ತಪಾಸಿ ರಾಯ್ ಸ್ಪರ್ಧೆ ಮಾಡಿದ್ದರು.
3ನೇ ಸ್ಥಾನಕ್ಕೆ ಸಿಪಿಎಂ ತೃಪ್ತಿ!
ಒಂದು ಕಾಲದಲ್ಲಿ ಇಡೀ ಪಶ್ಚಿಮ ಬಂಗಾಳದಲ್ಲಿ ಹವಾ ಎಬ್ಬಿಸಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಈ ಉಪಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಡುತ್ತಿದೆ. ಸಿಪಿಎಂ ಪಕ್ಷ ಟಿಕೆಟ್ ನೀಡಿದ್ದ ಈಶ್ವರ ಚಂದ್ರ ರಾಯ್ ಕೇವಲ 3153 ಮತ ಪಡೆದಿದ್ದಾರೆ. ಈ ಮೂಲಕ ಸಿಪಿಎಂ ಸೋಲಿನ ಅಂತಿಮ ಹಂತಕ್ಕೆ ಬಂದಿದೆ. ಹಾಗೇ ಬಿಜೆಪಿ ಮತ್ತು ಟಿಎಂಸಿ ನಡುವೆ ಪೈಪೋಟಿ ತೀವ್ರವಾಗಿದೆ. ಯಾರಿಗೆ ಗೆಲುವು? ಯಾರಿಗೆ ಸೋಲು ಎಂಬ ಲೆಕ್ಕಾಚಾರ ಕೂಡ ಬಲು ಜೋರಾಗಿ ನಡೆಯುತ್ತಿದೆ. ಈ ಕುತೂಹಲಕ್ಕೆ ಇನ್ನೇನು ಕೆಲವೇ ನಿಮಿಷದಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.

ಒಟ್ನಲ್ಲಿ 5 ರಾಜ್ಯಗಳ 6 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಒಂದು ಲೆಕ್ಕವಾದರೆ, ಈಗ ಪಶ್ಚಿಮ ಬಂಗಾಳದ ಬೈಎಲೆಕ್ಷನ್ ರಿಸಲ್ಟ್ ಮತ್ತೊಂದು ಲೆಕ್ಕ ಎಂಬಂತಾಗಿದೆ. ಈ ಕ್ಷೇತ್ರದ ಗೆಲುವು ಬಿಜೆಪಿ ಮತ್ತು ಟಿಎಂಸಿಗೆ ಅನಿವಾರ್ಯ. ಹೀಗಾಗಿ ಹೋರಾಟ ಜೋರಾಗಿದ್ದು, ಈ ಭಾಗದ ಮತದಾರರು ಯಾರ ಪರ ನಿಂತಿದ್ದಾರೆ ಎಂಬುದು ಇನ್ನೇನು ಕೆಲವೇ ನಿಮಿಷದಲ್ಲಿ ಗೊತ್ತಾಗಲಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಭಾರಿ ಭದ್ರತೆ ಏರ್ಪಡಿಸಲಾಗಿದೆ.












Click it and Unblock the Notifications