Weekend Weather forecast: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಭಾರೀ ಮಳೆ ನಿರೀಕ್ಷೆ- ಹವಾಮಾನ ಇಲಾಖೆಯ ಮುನ್ಸೂಚನೆ ಏನು?
ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳ-ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿ ಆಂಧ್ರಪ್ರದೇಶ, ಯಾನಂ, ರಾಯಲಸೀಮಾ ಮತ್ತು ಕರಾವಳಿ ಕರ್ನಾಟಕದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಚದುರಿದ ಮಳೆಯು ಅಂಡಮಾನ್-ನಿಕೋಬಾರ್ ದ್ವೀಪಗಳ ಮೇಲೆ ಪರಿಣಾಮ ಬೀರಬಹುದು ಎಂದು ಐಎಂಡಿ ಮಾಹಿತಿ ಹಂಚಿಕೊಂಡಿದೆ.

ಒಡಿಶಾ, ಕೊಂಕಣ-ಗೋವಾ, ಮಧ್ಯ ಮಹಾರಾಷ್ಟ್ರ, ಛತ್ತೀಸ್‌ಗಢ, ತೆಲಂಗಾಣ ಮತ್ತು ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಪ್ರತ್ಯೇಕ ಮಳೆಯಾಗಬಹುದು ಎಂದು ತಿಳಿದುಬಂದಿದೆ.
ಕೇರಳದಲ್ಲಿ ವ್ಯಾಪಕ ಮಳೆ
ಕೇರಳದಲ್ಲಿ ಈಶಾನ್ಯ ಮಾನ್ಸೂನ್ ಚುರುಕುಗೊಂಡಿದ್ದರಿಂದ ಶುಕ್ರವಾರದಿಂದ ವ್ಯಾಪಕ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು ಉಳಿದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.
ಇಡುಕ್ಕಿ, ಕೋಝಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸೂಚನೆ ಇದೆ. ಆದ್ದರಿಂದ ಇಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಸ್ಥಳಗಳಲ್ಲಿ 24 ಗಂಟೆಗಳಲ್ಲಿ 12-20 ಸೆಂ.ಮೀ.ನಷ್ಟು ಭಾರೀ ಮಳೆಯನ್ನು ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉಳಿದ ಜಿಲ್ಲೆಗಳಲ್ಲಿ 24 ಗಂಟೆಗಳಲ್ಲಿ 7- 11 ಸೆಂ.ಮೀ ಮಳೆ ನಿರೀಕ್ಷಿಸಬಹುದು. ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಶನಿವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪತ್ತನಂತಿಟ್ಟ, ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ಗಳನ್ನು ನೀಡಲಾಗಿರುವುದರಿಂದ ಭಾನುವಾರವೂ ಮಳೆಯಾಗುವ ನಿರೀಕ್ಷೆಯಿದೆ. ಕಾಸರಗೋಡು ಜಿಲ್ಲೆಯ ಕೂಡ್ಲುವಿನಲ್ಲಿ ಗುರುವಾರ 9 ಸೆಂ.ಮೀ ಭಾರೀ ಮಳೆಯಾಗಿದೆ.
ಕೇರಳದಲ್ಲಿ ನವೆಂಬರ್ 7ರ ವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಅಕ್ಟೋಬರ್ 21 ರಂದು ಈಶಾನ್ಯ ಮಾನ್ಸೂನ್ ಪ್ರಾರಂಭವಾದಾಗಿನಿಂದ ಕೇರಳವು ಸಾಕಷ್ಟು ಮಳೆಯನ್ನು ಪಡೆಯುತ್ತಿದೆ. ನೈಋತ್ಯ ಮಾನ್ಸೂನ್ 34 ಪ್ರತಿಶತ ಕೊರತೆಯೊಂದಿಗೆ ಕೊನೆಗೊಂಡಿದೆ.
ಈ ಮಳೆಯು ರೈತರಿಗೆ ಸಹಾಯ ಮಾಡಲಿದೆ ಎಂದು ತಜ್ಞರು ಹೇಳಿದ್ದಾರೆ. ಮಾನ್ಸೂನ್ ಕೊರತೆಯು ನೀರಾವರಿ, ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

ಚೆನ್ನೈನಲ್ಲಿ ಭಾರೀ ಮಳೆ
ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕರಾವಳಿಯ ಕೆಲವು ಜಿಲ್ಲೆಗಳು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾನುವಾರ ಅತಿ ಹೆಚ್ಚು ತೀವ್ರತೆಯ ಮಳೆಯಾಗಬಹುದು. ಸೋಮವಾರದವರೆಗೂ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ರಸ್ತುತ ಮಳೆಯು ನವೆಂಬರ್ 7 ರ ವರೆಗೆ ಇರುತ್ತದೆಯಾದರೂ, ತೀವ್ರತೆಯು ಕ್ರಮೇಣ ಕಡಿಮೆಯಾಗಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಭಾನುವಾರದಂದು ಕೆಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications