Weather Report: ಕರ್ನಾಟಕದಲ್ಲಿ ಅಲ್ಪ ಪ್ರಮಾಣದ ಮಳೆ, ತಾಪಮಾನ ಹೆಚ್ಚಳ- ಬೆಂಗಳೂರಿನಲ್ಲಿ ಈ ವಾರ 30°C ತಾಪಮಾನ, ಅಂಕಿಅಂಶ, ವಿವರ
ಬೆಂಗಳೂರು, ಆಗಸ್ಟ್ 15: ಮಾನ್ಸೂನ್ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ತಾಪಮಾನ ಹೆಚ್ಚುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಬೇಸಿಗೆಯ ವಾತಾವರಣವಿದೆ. ಜುಲೈನಲ್ಲಿ ಹೆಚ್ಚುವರಿ ಮಳೆ ದಾಖಲಾಗಿದೆ. ಆದರೆ, ಆಗಸ್ಟ್ ಆರಂಭದಿಂದ ಬಿಸಿಲು ಜಾಸ್ತಿಯಾಗಿರುವುದು ಅನುಭವಕ್ಕೆ ಬರುತ್ತಿದೆ. ಈ ಬದಲಾವಣೆಗೆ ಮಳೆಯ ಕೊರತೆಯೇ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ ಎರಡನೇ ವಾರದ ಅಂತ್ಯದ ವರೆಗೂ ಮಳೆ ಪ್ರಮಾಣ ಕಡಿಮೆಯಾಗಿರುತ್ತದೆ. ಮಾನ್ಸೂನ್ ಮಳೆ ಸಾಕಷ್ಟು ಪ್ರಮಾಣದಲ್ಲಿ ಬೀಳದೇ ಇರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಳೆದ ಕೆಲವು ದಿನಗಳಿಂದ ಕರ್ನಾಟಕದ ಹಲವು ಭಾಗಗಳಲ್ಲಿ 30°C ಗಿಂತ ಹೆಚ್ಚು ತಾಪಮಾನವಿರುವುದು ಹವಾಮಾನ ವೈಪರಿತ್ಯಕ್ಕೆ ಕಾರಣವಾಗಿದೆ.

ವಾರಾಂತ್ಯದಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನವು 35 °C ಅನ್ನು ಮೀರಿದೆ. ಬೆಂಗಳೂರಿನಲ್ಲಿ 30 ° C ಗಿಂತ ಹೆಚ್ಚು ತಾಪಮಾನವಿದೆ. ಇದು ಬೇಸಿಗೆಯಷ್ಟೇ ಬಿಸಿಯಾಗಿದೆ. ಕೊಡಗಿನಲ್ಲಿ ಮಾತ್ರ ಮೂವತ್ತರ ಕೆಳಗೆ ದಾಖಲಾಗಿದ್ದು, ಶನಿವಾರ 29 ಡಿಗ್ರಿ ಸೆಲ್ಸಿಯಸ್ ಇರುವುದು ಕಂಡುಬಂದಿದೆ.
ಬಾಂಗ್ಲಾದೇಶದ ಬಳಿ ಚಂಡಮಾರುತದ ಕಾಣಿಸಿಕೊಂಡಿದೆ. ಇದು ದೇಶದ ಉತ್ತರ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ತೀವ್ರವಾದ ಮಳೆಗೆ ಕಾರಣವಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಇದು ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಮಾತ್ರ ಆಗಸ್ಟ್ 20 ರ ವರೆಗೆ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಗಳಲ್ಲಿ ಹೆಚ್ಚಿನ ಮಳೆ ಸುರಿದಿದೆ. ರಾಜ್ಯದಲ್ಲಿ ಮುಂದಿನ ಐದು ದಿನಗಳಲ್ಲಿ ಚದುರಿದ ಮೋಡಗಳು ಕಂಡುಬರಲಿವೆ.

ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಸಂಜೆ ವೇಳೆಗೆ ರಾತ್ರಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಆದರೆ ಸಿಲಿಕಾನ್ ಸಿಟಿಯಲ್ಲಿ ವಾರಾಂತ್ಯದ ವರೆಗೆ ಮಾತ್ರ ಲಘು ಮಳೆಯಾಗುವ ಮುನ್ಸೂಚನೆ ಇದೆ. ಈ ಸಮಯದಲ್ಲಿ ಹಗಲಿನ ತಾಪಮಾನವು ಸುಮಾರು 30 ° C ವರೆಗೆ ಇರಲಿದೆ.
ಉತ್ತರ ಒಳನಾಡಿನಲ್ಲಿ 13 ಮಿಮೀ ( 75% ಕೊರತೆ ) ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ 21 ಮಿಮೀ ( 75% ಕೊರತೆ ) ಮಾತ್ರ ಮಳೆಯಾಗಿದೆ. ಕರಾವಳಿ ಕರ್ನಾಟಕದಲ್ಲಿ 118 ಮಿಮೀ ಮಳೆಯ ಹೊರತಾಗಿಯೂ, ( ಅದರ ಸಾಮಾನ್ಯ 431 ಮಿಮೀಗೆ ಹೋಲಿಸಿದರೆ ) 73% ಕೊರತೆಯನ್ನು ಎದುರಿಸುತ್ತಿದೆ.












Click it and Unblock the Notifications