Meghalaya Election 2023 : ಅಂತಿಮ ಫಲಿತಾಂಶ ಬರಲಿ ಎಂದ ಸಿಎಂ ಸಂಗ್ಮಾ
ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಎನ್‌ಪಿಪಿ ಪಕ್ಷಕ್ಕೆ ಮತದಾನ ಮಾಡಿದ ಜನರಿಗೆ ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಧನ್ಯವಾದ ಸಲ್ಲಿಸಿದ್ದಾರೆ.
ಶಿಲ್ಲಾಂಗ್, ಮಾರ್ಚ್ 02; ಮೇಘಾಲಯ ವಿಧಾನಸಭೆ ಚುನಾವಣೆ 2023ರ ಮತ ಎಣಿಕೆ ನಡೆಯುತ್ತಿದೆ. 26 ಸ್ಥಾನಗಳಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮುನ್ನಡೆಯಲ್ಲಿದ್ದು, ಚುನಾವಣಾ ಆಯೋಗದ ಅಧಿಕೃತ ಘೋಷಣೆಯಂತೆ 6 ಸ್ಥಾನಗಳಲ್ಲಿ ಜಯಗಳಿಸಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಸಹೋದರ ಜೇಮ್ಸ್ ಪಾಂಗ್ಸಾಂಗ್ ಕೆ ಸಂಗ್ಮಾ ದಾಡೆಂಗ್ರೆ ಕ್ಷೇತ್ರದಲ್ಲಿ 7 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಮೇಘಾಲಯ ವಿಧಾನಸಭೆ ಚುನಾವಣೆ ಮತ ಎಣಿಕೆ ಗುರುವಾರ ಬೆಳಗ್ಗೆ ಆರಂಭವಾಗಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಮೊದಲಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತವಾಗಿದೆ. ಸಂಜೆಯ ವೇಳೆಗೆ ರಾಜ್ಯದ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.

ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಪ್ರತಿಕ್ರಿಯೆ ನೀಡಿದರು. "ಎನ್‌ಪಿಪಿ ಬೆಂಬಲಿಸಿದ ರಾಜ್ಯದ ಜನರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬಹುಮತಕ್ಕೆ ಕೆಲವೇ ಸೀಟುಗಳು ಬೇಕಾಗಿವೆ. ಅಂತಿಮ ಫಲಿತಾಂಶ ಪ್ರಕಟವಾಗುವ ತನಕ ನಾವು ಕಾಯುತ್ತೇವೆ" ಎಂದು ಹೇಳಿದರು. ರಾಜ್ಯದ 60 ವಿಧಾನಸಭಾ ಕ್ಷೇತ್ರಗಳ ಪೈಕಿ 59ಕ್ಕೆ ಫೆಬ್ರವರಿ 27ರಂದು ಮತದಾನ ನಡೆದಿತ್ತು.
"ಮುಂದಿನ ನಡೆ ಏನು ಎಂದು ನಾವು ಚುನಾವಣೆಯ ಸಂಪೂರ್ಣ ಫಲಿತಾಂಶ ಬಂದ ಬಳಿಕ ತೀರ್ಮಾನ ಮಾಡುತ್ತೇವೆ" ಎಂದು ಕಾನ್ರಾಡ್ ಸಂಗ್ಮಾ ಹೇಳಿದ್ದು, ಎನ್‌ಪಿಪಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆಯುವತ್ತ ಹೆಜ್ಜೆ ಹಾಕಿದೆ. ಚುನಾವಣಾ ಆಯೋಗ ಅಧಿಕೃತವಾಗಿ 22 ಸ್ಥಾನಗಳ ಫಲಿತಾಂಶವನ್ನು ಘೋಷಣೆ ಮಾಡಿದೆ. ಎನ್‌ಪಿಪಿ ಪಕ್ಷ 6 ಸ್ಥಾನಗಳಲ್ಲಿ ಜಯಗಳಿಸಿದೆ. 59 ಕ್ಷೇತ್ರಗಳಿಗೆ ಚುನಾವಣೆ ನಡೆದ ಕಾರಣ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 30 ಆಗಿದೆ.

ಪೈಪೋಟಿ ನೀಡುವಲ್ಲಿ ವಿಫಲ; 2018ರ ಚುನಾವಣೆಯ ಬಳಿಕ ಎನ್‌ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಮೈತ್ರಿಕೂಟ ರಾಜ್ಯದ ಅಧಿಕಾರ ಹಿಡಿದಿತ್ತು. ಕಾನ್ರಾಡ್ ಸಂಗ್ಮಾ ಮುಖ್ಯಮಂತ್ರಿಯಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿ ಎನ್‌ಪಿಪಿಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅದರಲ್ಲೂ ಮುಕುಲ್ ಸಂಗ್ಮಾ ನೇತೃತ್ವದಲ್ಲಿ ಕಾಂಗ್ರೆಸ್‌ನ 11 ಶಾಸಕರು ಟಿಎಂಸಿಗೆ ವಲಸೆ ಹೋದ ಬಳಿಕ ನೇರ ಪೈಪೋಟಿ ನಿರೀಕ್ಷೆ ಮಾಡಲಾಗಿತ್ತು.
ಆದರೆ ಮತ ಎಣಿಕೆ ಆರಂಭವಾದ ಕೆಲವು ಹೊತ್ತು ಎನ್‌ಪಿಪಿಗೆ ಟಿಎಂಸಿ ಪ್ರಬಲ ಪೈಪೋಟಿ ನೀಡಿತು. ಎರಡಂಕಿ ದಾಟಿದ ಬಳಿಕ ಎನ್‌ಪಿಪಿ ನಾಗಲೋಟ ಮುಂದುವರೆಯಿತು. ಸದ್ಯದ ಮಾಹಿತಿ ಪ್ರಕಾರ ಟಿಎಂಸಿ 6 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಂತಿಮ ಫಲಿತಾಂಶ ಹೊರಬರುವ ವೇಳೆಗೆ ಪಕ್ಷ ಎರಡಂಕಿ ದಾಟುವುದು ಕಷ್ಟವಾಗಿದೆ.
ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಕಾನ್ರಾಡ್ ಸಂಗ್ಮಾ ಅಭಿಮಾನಿಗಳು, ಎನ್‌ಪಿಪಿ ಕಾರ್ಯಕರ್ತರು ರಾಜ್ಯದಲ್ಲಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಲಾಡು ಹಂಚಿ, ನೃತ್ಯ ಮಾಡುತ್ತಾ ಪಕ್ಷದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ 3, ಕಾಂಗ್ರೆಸ್ 5 ಮತ್ತು ಇತರರು 26 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಅಂತಿಮ ಫಲಿತಾಂಶ ಸಂಜೆಯ ವೇಳೆಗೆ ಪ್ರಕಟವಾಗುವ ನಿರೀಕ್ಷೆ ಇದೆ.
ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದ ಪ್ರಕಾರ ಟಿಎಂಸಿ 1, ಹೆಚ್‌ಎಸ್‌ಪಿಡಿಪಿ 1, ಇಬ್ಬರು ಪಕ್ಷೇತರರು, ಕಾಂಗ್ರೆಸ್ 1, ಯುಡಿಪಿ 3, ವಿಪಿಪಿ 1 ಸ್ಥಾನದಲ್ಲಿ ಜಯಗಳಿಸಿದೆ.












Click it and Unblock the Notifications