Wayanad Theft: ವಯನಾಡು ಭೂಕುಸಿತ: ಮನೆ ಬಿಟ್ಟ ಗ್ರಾಮಸ್ಥರು- ಒಳಹೊಕ್ಕ ಕಳ್ಳರು!
ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಧ್ವಂಸಗೊಂಡ ಮನೆಗಳನ್ನು ತೊರೆದು ಸಂತ್ರಸ್ತರು ಬೇರೆಡೆ ಆಶ್ರಯ ಪಡೆದಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡು ಕಳ್ಳರು ಪೀಡಿತ ಪ್ರದೇಶದಲ್ಲಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಇದರಿಂದ ಮಣ್ಣಿನಲ್ಲಿ ಮನೆಗಳೊಂದಿಗೆ ಹೂತುಹೋಗಿರುವ ಹಣ, ಚಿನ್ನಾಭರಣ ಹಾಗೂ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿರಾಶ್ರಿತರು ಚಿಂತಿತರಾಗಿದ್ದಾರೆ.
ಈ ದುರಂತದಲ್ಲಿ 400ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರೆ, 200ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ. ಭೂಕುಸಿತದ ಸುತ್ತಲು ವಾಸಿಸುವ ಜನರನ್ನು ರಕ್ಷಣಾ ತಂಡ ಸ್ಥಳಾಂತರಿಸಿದೆ. ಆದರೆ ಇದೇ ಸಮಯವನ್ನು ಬಂಡವಾಳವನ್ನಾಗಿಸಿಕೊಂಡ ದರೋಡೆಕೋರರು ಮಣ್ಣಲ್ಲಿ ಹೂತು ಹೋದ ಮನೆಗಳಲ್ಲಿ, ಪೀಡಿತ ಪ್ರದೇಶದ ಸುತ್ತ ಇರುವ ಮನೆಗಳಲ್ಲಿ ತಮ್ಮ ಕೈಚಳಕ ತೋರಿಸಲು ಮುಂದಾಗಿದ್ದಾರೆ. ಇದರಿಂದಾಗಿ ಪೊಲೀಸರು ಕಟ್ಟೆಚ್ಚರ ವಹಿಸುವಂತೆ ನಿರಾಶ್ರಿತರು ಒತ್ತಡ ಹೇರಿದ್ದಾರೆ.

ಕೇರಳದ ವಯನಾಡ್ ಜಿಲ್ಲೆಯ ಭೂಕುಸಿತದಿಂದ ಧ್ವಂಸಗೊಂಡ ಹಳ್ಳಿಗಳ ನಿವಾಸಿಗಳು ತಮ್ಮ ಆಸ್ತಿಯನ್ನು ಕಳ್ಳರಿಂದ ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ. ಇದರಿಂದಾಗಿ ಪೊಲೀಸರು ರಾತ್ರಿ ಗಸ್ತು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಹೌದು.. ಕಳ್ಳರು ರಾಜ್ಯದ ಅತಿದೊಡ್ಡ ಮಾನವೀಯ ಬಿಕ್ಕಟ್ಟಿನ ಲಾಭವನ್ನು ಪಡೆದು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದಾರೆ ಎಂದು ಸ್ಥಳಾಂತರಗೊಂಡ ನಿವಾಸಿಗಳು ಶಂಕಿಸಿದ್ದಾರೆ.
ಇದರಿಂದಾಗಿ ರಾತ್ರಿ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಈ ಪ್ರದೇಶಕ್ಕೆ ನುಗ್ಗುವವರನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಸಂತ್ರಸ್ತರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. 'ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರು ನಾವು ಎಂದು ಹೇಳುತ್ತಾ' ಕೆಲವರು ಸ್ಥಳದಲ್ಲಿ ಕೊಳ್ಳೆ ಹೊಡೆಯುವ ಸಂಚು ರೂಪಿಸಿದ್ದಾರೆ ಎನ್ನುವ ಅನುಮಾನ ಮೂಡಿದೆ. ಸದ್ಯ ನಿರಾಶ್ರಿತರು ತಂಗಿರುವ ಆಶ್ರಯವನ್ನೂ ಕಳ್ಳರು ಗುರಿಯಾಗಿಸಿಕೊಂಡು ಅವರ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ ಎಂದು ದೂರಲಾಗಿದೆ.

ಹೀಗಾಗಿ ಚೂರಲ್ಮಲಾ, ಮುಂಡಕ್ಕೈ ಸೇರಿದಂತೆ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಸುತ್ತಲು ಆರಂಭಿಸಿದ್ದಾರೆ. ಪೀಡಿತ ಪ್ರದೇಶಗಳಿಗೆ ಅಥವಾ ಸಂತ್ರಸ್ತರ ಮನೆಗಳಿಗೆ ರಾತ್ರಿಯಲ್ಲಿ ಅನುಮತಿಯಿಲ್ಲದೆ ಪ್ರವೇಶಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯ ಹೆಸರಿನಲ್ಲಿ ಅಥವಾ ರಾತ್ರಿಯಲ್ಲಿ ಪೊಲೀಸರ ಅನುಮತಿಯಿಲ್ಲದೆ ಪೀಡಿತ ಪ್ರದೇಶಗಳಿಗೆ ಅಥವಾ ಮನೆಗಳಿಗೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಇದರಿಂದಾಗಿ ನಿರಾಶ್ರಿತರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದಷ್ಟು ಬೇಗ ಅಳಿದುಳಿದ ತಮ್ಮ ಮನೆಗಳಿಗೆ ತೆರಳಲು ಹಪಾಹಪಿಸುತ್ತಿದ್ದಾರೆ.

ಇದರೊಂದಿಗೆ ವಯನಾಡಿನಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿವೆ. ವಯನಾಡು ಘಟನೆಗೆ ಹಲವು ಸಿನಿಮಾ ತಾರೆಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಸೌತ್‌ನ ಬಹುತೇಕ ಸ್ಟಾರ್‌ಗಳು ಕೇರಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ಇತ್ತೀಚೆಗೆ ಪ್ರಭಾಸ್ ಎರಡು ಕೋಟಿ ದೇಣಿಗೆ ನೀಡಿದ್ದರು. ಅಲ್ಲದೆ ಚಿರಂಜೀವಿ ಹಾಗೂ ರಾಮ್ ಚರಣ್ ಅವರು ಕೂಡಾ ವಯನಾಡಿಗೆ ನೆರವಾಗಿದ್ದರು. ಚರಣ್ ಒಂದು ಕೋಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಹತ್ತು ಲಕ್ಷ, ಅಲ್ಲು ಅರ್ಜುನ್ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.












Click it and Unblock the Notifications